ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಮನೆಯಲ್ಲಿ ಸೈನಿಕರು ಹುಟ್ಟಲಿ

Last Updated 9 ಜುಲೈ 2019, 2:54 IST
ಅಕ್ಷರ ಗಾತ್ರ

ಧಾರವಾಡ: ‘ರಾಷ್ಟ್ರ ಸುರಕ್ಷಿತವಾಗಿದ್ದಾಗ ಮಾತ್ರ ನಾವೆಲ್ಲ ನೆಮ್ಮದಿಯಿಂದ ಬಾಳಲು ಸಾಧ್ಯ. ಧೈರ್ಯ, ಶೌರ್ಯದಿಂದ ರಾಷ್ಟ್ರವನ್ನು ರಕ್ಷಿಸುವ ಯೋಧ ಮನೆ ಮನೆಯಲ್ಲಿ ಹುಟ್ಟಲಿ’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಕಾರ್ಗಿಲ್ ಸ್ತೂಪದ ಬಳಿ ಗುರುವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದ 19ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಮ್ಮ ಸೈನಿಕರು ಧೈರ್ಯದಿಂದ ಹೋರಾಡಿ ಗಡಿ ಕಾಯುತ್ತಾರೆ. ಜೀವ ಭಯ ಬಿಟ್ಟು ಹೋರಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿ, ದೇಶ ರಕ್ಷಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಅನೇಕ ಯೋಧರು ಕರ್ನಾಟಕ ರಾಜ್ಯದವರು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕಕ್ಕೆ ಸೇರಿದವರು ಎನ್ನುವುದು ಅಭಿಮಾನದ ಸಂಗತಿ’ ಎಂದು ಹೇಳಿದರು.

‘ದೇಶದ ಬಾಹ್ಯ ರಕ್ಷಣೆಗೆ ಸೈನಿಕರು ಮತ್ತು ದೇಶದ ಆಂತರಿಕ ಭದ್ರತೆ, ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತದೆ. ಆದ್ದರಿಂದ ರಾಷ್ಟ್ರ ಹೆಮ್ಮೆ ಪಡುವಂತಹ ಸೈನಿಕರು ಪ್ರತಿಯೊಬ್ಬರ ಮನೆಯಲ್ಲಿ ಹುಟ್ಟಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಮಾತನಾಡಿ, ‘ಸೈನಿಕರ ಸೇವೆ ಅವಿಸ್ಮರಣೀಯ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರ ಕುಟುಂಬದವರಿಗೆ ಸರ್ಕಾರದ ನೆರವಿನೊಂದಿಗೆ ನಾವೆಲ್ಲರೂ ಅವರೊಂದಿಗೆ ಇರುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ ಮಾತನಾಡಿ, ‘ಸೈನಿಕರ ತ್ಯಾಗ ಶ್ರೇಷ್ಠವಾದದ್ದು, ಕಾರ್ಗಿಲ್ ವಿಜಯೋತ್ಸವ ನಮಗೆ ಹೆಮ್ಮೆಯ ವಿಷಯ. ಭಾರತದ ಪ್ರತಿಯೊಬ್ಬ ಪ್ರಜೆಯು ಸೈನಿಕರೊಂದಿಗೆ ಇರುತ್ತಾರೆ’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ‘ಕಾರ್ಗಿಲ್ ಯುದ್ಧದ ಸಂದರ್ಭವನ್ನು ವಿವರಿಸಿ, ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಉತ್ತಮ ರಾಷ್ಟ್ರ ಕಟ್ಟುವ ಸಂಕಲ್ಪವನ್ನು ಪ್ರತಿಯೊಬ್ಬರೂ ಮಾಡಬೇಕು‘ ಎಂದರು.

ಕರ್ನಾಟಕ ಕಾಲೇಜಿನ ಪ್ರಾಚಾರ್ಯೆ ಡಾ.ರಾಜೇಶ್ವರಿ ಮಹೇಶ್ವರಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಗಿಲ್ ಸ್ತೂಪಕ್ಕೆ ಅಧಿಕಾರಿಗಳು, ನಿವೃತ್ತ ಸೈನಿಕರು ಮತ್ತು ವಿದ್ಯಾರ್ಥಿಗಳು ಪುಷ್ಪ ಸಮರ್ಪನೆ ಮಾಡಿ ಗೌರವ ವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ಯೋಧರ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.

ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಅಮೀನಗಡ, ಪ್ರಧಾನ ಕಾರ್ಯದರ್ಶಿ ಕೃಷ್ಣ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT