ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಸಹಜ ಜೀನವದತ್ತ ಜನಜೀವನ

Last Updated 8 ಜೂನ್ 2020, 15:07 IST
ಅಕ್ಷರ ಗಾತ್ರ

ಧಾರವಾಡ:ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್‌ ಹಾಗೂ ಮಠಗಳು ಸೋಮವಾರದಿಂದ ಸಾರ್ವಜನಿಕರಿಗೆ ದರ್ಶನಕ್ಕಾಗಿ ತೆರೆದವು. ಆ ಮೂಲಕ ಎರಡೂವರೆ ತಿಂಗಳುಗಳ ಬಳಿಕ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲೂ ಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳುವುದು ಮತ್ತು ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಪೂರ್ವಸಿದ್ಧತೆಗಳು ಸೋಮವಾರ ಬೆಳಿಗ್ಗೆವರೆಗೂ ನಡೆದವು.ಭಕ್ತರು ಸರದಿಯಲ್ಲಿ ನಿಲ್ಲುವುದಕ್ಕೆ ಕೆಲವೆಡೆ ಗುರುತು ಹಾಕಲಾಗಿತ್ತು. ಕೈ ತೊಳೆಯುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ದೀರ್ಘಕಾಲದ ಬಳಿಕ ತೆರೆದಿರುವ ದೇವಸ್ಥಾನಗಳಿಗೆ ಭಕ್ತರ ಸಂಖ್ಯೆ ವಿರಳವಾಗಿತ್ತು.ಧಾರ್ಮಿಕ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳುವುದು ಮತ್ತು ಮುಖಗವಸು ತೊಟ್ಟಿದ್ದರು.ಮೊದಲಿನಂತೆ ಪ್ರಸಾದ ಅಥವಾ ತೀರ್ಥ ಹಂಚಲಿಲ್ಲ. ಮಂಗಳಾರತಿ ಸೇವೆ ಮಾತ್ರ ಇತ್ತು.

ಸೋಮೇಶ್ವರ, ಉಳವಿ ಚೆನ್ನಬಸವೇಶವವರ ಗುಡಿ, ಮುರುಘಾಮಠ, ಜಯನಗರ ಈಶ್ವರ ದೇವಸ್ಥಾನ, ಕೆಲಗೇರಿ ಕಲ್ಮೇಶ್ವರ, ದುರ್ಗಾದೇವಿ ಗುಡಿ, ಶಾಂತಿನಿಕೇತನ ನಗರದ ಕರಿಯಮ್ಮ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ ನೆರವೇರಿಸಿದ ಅರ್ಚಕರು ವಸ್ತ್ರದಿಂದ ಮೂಗು ಹಾಗೂ ಬಾಯಿ ಮುಚ್ಚಿಕೊಂಡು ಮಂಗಳಾರತಿ ನೀಡುತ್ತಿದ್ದ ದೃಶ್ಯ ಕಂಡುಬಂತು. ಆಲ್‌ಸೇಂಟ್ ಚರ್ಚ್, ಬಾಸೆಲ್ ಚರ್ಚ್‌ ಸೇರಿದಂತೆ ಪ್ರಮುಖ ದರ್ಗಾ, ಮಸೀದಿಗಳು ಸೋಮವಾರದ ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ ಅಧಿಕೃತವಾಗಿ ಬಾಗಿಲು ತೆರೆದವು.

ನಿತ್ಯ ರೂಢಿಗಳಿಂದ ದೀರ್ಘಕಾಲ ದೂರ ಉಳಿದಿದ್ದ ಪೂಜಾರಿಗಳು, ಅರ್ಚಕರು, ಮೌಲ್ವಿಗಳು ಹಾಗೂ ಚರ್ಚ್‌ಗಳ ಫಾದರ್‌ಗಳು ಮತ್ತೆ ಧಾರ್ಮಿಕ ಕೇಂದ್ರದತ್ತ ಮುಖ ಮಾಡಿದ್ದು ಸೋಮವಾರ ಕಂಡುಬಂತು.

ಹೋಟೆಲ್‌ಗಳು ಬಾಗಿಲು ತೆರೆದಿದ್ದರೂ ಜನರ ಸಂಖ್ಯೆ ವಿರಳವಾಗಿತ್ತು. ದರ್ಶಿನಿಗಳಲ್ಲಿ ಮಾತ್ರ ಚಹಾ ಹಾಗೂ ಲಘು ಉಪಾಹಾರಗಳಿಗಾಗಿ ಹೆಚ್ಚಿನ ಜನರು ಇದ್ದರು. ಅಂತರ ಕಾಯ್ದುಕೊಂಡವರ ಸಂಖ್ಯೆ ತೀರಾ ಕಡಿಮೆ ಇತ್ತು. ಅಂಗಡಿಗಳನ್ನು ತೆರೆದುಕೊಳ್ಳಲು ಮೊದಲಿನಂತೆ ಸಮಯದ ನಿರ್ಬಂಧವಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಜನ, ವಾಹನಗಳ ಸಂಚಾರ ಮತ್ತೆ ಶುರುವಾಗಿದೆ. ಮಾರುಕಟ್ಟೆಯಲ್ಲಿ ವಾಹನಗಳನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಪರದಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT