ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕೆಲಸ ಮುಂದಿಟ್ಟು ಮತ ಕೇಳುತ್ತಿರುವೆ:ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ

ಮಾಧ್ಯಮ ಸಂವಾದ
Last Updated 30 ಏಪ್ರಿಲ್ 2019, 16:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಐದು ವರ್ಷಗಳ ಅವಧಿಯಲ್ಲಿ ಎಲ್ಲ ಕೆಲಸಗಳನ್ನೂ ಮಾಡಿದ್ದೇನೆಂದು ಅಹಂಕಾರದಿಂದ ಹೇಳುವುದಿಲ್ಲ. ಸಾಧ್ಯವಾದಷ್ಟು ಮಹತ್ವದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅವುಗಳನ್ನು ಜನರ ಮುಂದಿಟ್ಟು ಮತ ಕೇಳುತ್ತಿರುವೆ...’

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಸ್ಪಷ್ಟ ನುಡಿ ಇದು. ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು ‘ಅವಳಿ ನಗರದಲ್ಲಿ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ₹ 1,200 ಕೋಟಿ ಹಣ ತಂದಿದ್ದೇನೆ. ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌, ಬೆಂಚ್‌, ಖಾಸಗಿ ಸಹಭಾಗಿತ್ವದಲ್ಲಿ 564 ಹೈಟೆಕ್‌ ಶೌಚಾಲಯಗಳನ್ನು ಕಟ್ಟಿಸಿದ್ದೇನೆ’ ಎಂದರು.

‘ಅವಳಿ ನಗರದ ಅಭಿವೃದ್ಧಿಗೆ ಕೇಂದ್ರ ಸಾಕಷ್ಟು ಹಣ ಕೊಟ್ಟಿದೆ. ಸ್ಮಾರ್ಟ್‌ ಸಿಟಿ ಯೋಜನೆ ನೀಡಿದೆ. ರಾಜ್ಯದ ಉಳಿದ ಸಂಸದರಿಗಿಂತಲೂ ನನ್ನ ಆದರ್ಶ ಗ್ರಾಮ ಚೆನ್ನಾಗಿದೆ. ಕೊಟ್ಟ ಹಣ ಸದ್ಭಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. 2013ರಲ್ಲಿ ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಅವಳಿ ನಗರಕ್ಕೆ 24X7 ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ₹ 700 ಕೋಟಿಯ ಯೋಜನೆ ರೂಪಿಸಿದ್ದರು. ಮುಂದೆ ಸಿದ್ದರಾಮಯ್ಯ 2018ರಲ್ಲಿ ಈ ಯೋಜನೆಯನ್ನೇ ರದ್ದು ಮಾಡಿದರು’ ಎಂದು ದೂರಿದರು.

ನೀವು ಲಿಂಗಾಯತರನ್ನು ತುಳಿಯಲು ಯತ್ನಿಸುತ್ತಿದ್ದೀರಿ ಎನ್ನುವ ಆರೋಪವಿದೆಯಲ್ಲ ಎನ್ನುವ ಪ್ರಶ್ನೆಗೆ ‘ನಮ್ಮ ಪಕ್ಷದಲ್ಲಿ ಎಲ್ಲ ವರ್ಗಗಳ ನಾಯಕರೂ ಇದ್ದಾರೆ. ಅವರೆಲ್ಲರಿಗೂ ಉತ್ತಮ ಸ್ಥಾನಮಾನವಿದೆ. ಈಗಲೂ ಜಗದೀಶ ಶೆಟ್ಟರ್‌ ನನ್ನ ನಾಯಕರು. ಲೋಕಸಭಾ ಚುನಾವಣೆಯಲ್ಲಿ ನೀವು ಸ್ಪರ್ಧೆ ಮಾಡಿ ಎಂದು ಮೊದಲು ಹೇಳಿದ್ದೇ ಶೆಟ್ಟರ್‌’ ಎಂದು ಸ್ಪಷ್ಟಪಡಿಸಿದರು.

ತೇಜಸ್ವಿನಿ ಅನಂತಕುಮಾರ್‌ ಅವರಿಗೆ ಟಿಕೆಟ್ ಕೈತಪ್ಪಿದ್ದರ ಹಿಂದೆ ನಿಮ್ಮ ಕೈವಾಡವಿದೆ ಎನ್ನುವ ಆರೋಪವಿದೆಯಲ್ಲ ಎಂದು ಪ್ರಶ್ನಿಸಿದಾಗ ‘ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಕೋರ್‌ಕಮಿಟಿಯ ಸಭೆ ಕರೆದಿದ್ದರು. ಆಗ ಪಕ್ಷದ ವರಿಷ್ಠರು ‌ತೇಜಸ್ವಿನಿ ಬದಲು ಬೇರೆಯವರಿಗೆ ಟಿಕೆಟ್‌ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಇದಕ್ಕೆ ಕಮಿಟಿಯ ಎಲ್ಲ ಸದಸ್ಯರು ಒಪ್ಪಿಕೊಂಡರು. ತೇಜಸ್ವಿನಿ ಕೂಡ ಪಕ್ಷದ ನಿರ್ಧಾರವನ್ನು ಒಪ್ಪಿ ಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಜಿಲ್ಲೆಯಲ್ಲಿ ಉದ್ಯೋಗದ ಅವಕಾಶ ಕಲ್ಪಿಸುವಲ್ಲಿ ವಿಫಲರಾಗಿದ್ದಿರಲ್ಲವೇ ಎನ್ನುವ ಪ್ರಶ್ನೆಗೆ ‌‘ಉದ್ಯೋಗದ ಅವಕಾಶ ಸೃಷ್ಟಿಸುವ ಮೊದಲು ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಬೇಕಾಗಿತ್ತು. ಅದಕ್ಕಾಗಿ ವಿಮಾನ ನಿಲ್ದಾಣ, ಉತ್ತಮ ರಸ್ತೆಗಳನ್ನು ಮಾಡಲಾಗಿದೆ. ಹುಬ್ಬಳ್ಳಿ–ಅಂಕೋಲಾ ನೇರ ರೈಲು ಮಾರ್ಗಕ್ಕೆ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿಗೆ ಕಾಯುತ್ತಿದ್ದೇವೆ. ಹುಬ್ಬಳ್ಳಿ–ಬೆಳಗಾವಿ ನೇರ ರೈಲಿನ ಸೌಲಭ್ಯದ ಸರ್ವೆ ಕಾರ್ಯ ಪೂರ್ಣಗೊಂಡಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT