ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಹೆಸರಿಗಷ್ಟೇ ಲಾಕ್‌ಡೌನ್‌; ಸಂಚಾರ ಹೆಚ್ಚಳ

ಸೋಂಕು ಹರಡುವ ಆತಂಕವಿದ್ದರೂ ಎಚ್ಚೆತ್ತುಕೊಳ್ಳದ ಜನ
Last Updated 5 ಏಪ್ರಿಲ್ 2020, 6:34 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಲಾಕ್‌ ಡೌನ್‌ ಘೋಷಿಸಿದ್ದರೂ ನಗರದಲ್ಲಿ ವಾಹನಗಳ ಅನಗತ್ಯ ಓಡಾಟ ಹೆಚ್ಚಳವಾಗುತ್ತಿದೆ. ಇದರಿಂದ ಸೋಂಕು ಹರಡುವ ಆತಂಕವೂ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 23ರಂದು ಮೊದಲ ಬಾರಿಗೆ ಜನತಾ ಕರ್ಪ್ಯೂಗೆ ಕರೆ ನೀಡಿದ್ದಾಗ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ತುರ್ತು ಕಾರ್ಯಗಳ ಹೊರತು ಪಡಿಸಿ ಬಹುತೇಕ ಯಾವ ವಾಹನಗಳೂ ರಸ್ತೆಗೆ ಇಳಿದಿರಲಿಲ್ಲ. ಬಳಿಕ 21 ದಿನ ಲಾಕ್‌ಡೌನ್‌ ಘೋಷಿಸಿದ ಆರಂಭದ ಐದಾರು ದಿನ ರಸ್ತೆಯಲ್ಲಿ ಹೆಚ್ಚಿನ ಸಂಚಾರ ಕಂಡುಬರಲಿಲ್ಲ. ಅನಗತ್ಯವಾಗಿ ಓಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಸುತ್ತಿದ್ದರು. ಆದರೆ, ಎರಡ್ಮೂರು ದಿನಗಳಿಂದ ಸಂಚಾರ ಸಾಕಷ್ಟು ಹೆಚ್ಚಳವಾಗಿದೆ.

ವಾಹನಗಳ ಸಂಚಾರ ಕಡಿಮೆಯಾದರೆ ಸೋಂಕು ಹರಡುವುದನ್ನು ತಡೆಯಬಹುದು. ಇದರಿಂದ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳಬಹುದು ಎನ್ನುವ ಕಾರಣಕ್ಕೆ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಆದರೆ, ನಿತ್ಯ ಇದರ ಉಲ್ಲಂಘನೆಯಾಗುತ್ತಿದೆ.

ಶನಿವಾರ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಸಿದ್ದೇಶ್ವರ ಪಾರ್ಕ್‌, ಹಳೇ ಹುಬ್ಬಳ್ಳಿ, ರೈಲ್ವೆ ನಿಲ್ದಾಣ ರಸ್ತೆ, ಕೇಶ್ವಾಪುರ ಸರ್ಕಲ್‌ ಹೀಗೆ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂತು. ಅಲ್ಲಲ್ಲಿ ಪೊಲೀಸರಿದ್ದರೂ ಸಂಚರಿಸುತ್ತಿದ್ದ ವಾಹನಗಳನ್ನು ನೋಡಿಕೊಂಡು ಸುಮ್ಮನೆ ಕುಳಿತಿದ್ದರು. ಇನ್ನು ಒಳರಸ್ತೆಗಳಲ್ಲಿ ಬಹಳಷ್ಟು ಕಡೆ ಪೊಲೀಸರೇ ಇರಲಿಲ್ಲ.

ರಾಣಿ ಚನ್ನಮ್ಮ ವೃತ್ತದ ಔಷಧ ಅಂಗಡಿಗೆ ಬಂದಿದ್ದ ಯಲ್ಲಪ್ಪ ಪೂಜಾರ ಎಂಬುವರನ್ನು ಇದರ ಬಗ್ಗೆ ಪ್ರಶ್ನಿಸಿದಾಗ ’ಸಾರ್ವಜನಿಕರ ಬದುಕಿನ ರಕ್ಷಣೆಗಾಗಿಯೇ ಸರ್ಕಾರ ಲಾಕ್‌ ಡೌನ್‌ ಘೋಷಿಸಿದೆ. ನಗರ ಪ್ರದೇಶದಲ್ಲಿ ವಿದ್ಯಾವಂತ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವು ಈಗ ಗಂಭೀರವಾಗಿರದಿದ್ದರೆ ಮುಂದೆ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ. ಇದು ಸರ್ಕಾರದ ಜವಾಬ್ದಾರಿ ಎನ್ನುವುದಕ್ಕಿಂತ ಹೆಚ್ಚಾಗಿ ಪ್ರತಿಯೊಬ್ಬರು ಕರ್ತವ್ಯ ಎಂದು ಭಾವಿಸಬೇಕಿದೆ‘ ಎಂದರು.

ಮಂಟೂರು ರಸ್ತೆ, ಕೇಶ್ವಾಪುರ ವೃತ್ತದಲ್ಲಿ ಕರ್ತವ್ಯದ ಉಸ್ತುವಾರಿಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಈ ಬಗ್ಗೆ ಪ್ರಶ್ನಿಸಿದಾಗ ’ಯಾರಿಗಾದರೂ ಹೊಡೆದರೆ ಅವರು ನ್ಯಾಯಾಲಯದಲ್ಲಿ ಪಿಐಎಲ್‌ ಸಲ್ಲಿಸುತ್ತಿದ್ದಾರೆ. ಇದರಿಂದ ಹೊಡೆದವರಿಗೆ ತಲೆನೋವಾಗುತ್ತಿದೆ. ಇದರಿಂದ ಸಂಪೂರ್ಣ ಲಾಕ್‌ ಡೌನ್ ಸಾಧ್ಯವಾಗುತ್ತಿಲ್ಲ‘ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ತುರ್ತು ಅಗತ್ಯ ಇದ್ದವರಿಗಷ್ಟೇ ಅವಕಾಶ‘

ತುರ್ತು ಅಗತ್ಯ ಹಾಗೂ ಪಾಸ್‌ ಇದ್ದವರಿಗೆ ಮಾತ್ರ ಸಂಚಾರಕ್ಕೆ ಅವಕಾಶ ಕೊಡಬೇಕೆಂಬ ಸೂಚನೆಯಿದೆ. ಅವರನ್ನು ಹೊರತುಪಡಿಸಿ ಬೇರೆ ಯಾರನ್ನೂ ಬಿಡುತ್ತಿಲ್ಲ ಎಂದು ಸಂಚಾರ ವಿಭಾಗದ ಎಸಿಪಿ ಎಸ್‌.ಎಂ. ಸಂದಿಗವಾಡ ’ಪ್ರಜಾವಾಣಿ‘ಗೆ ತಿಳಿಸಿದರು.

’ಜನರಿಗೆ ಲಾಠಿಯಿಂದ ಹೊಡೆಯಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಧ್ವನಿವರ್ಧಕದ ಮೂಲಕ ಅವರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸ್ಥಿತಿ ಗಂಭೀರವಾಗಿರುವ ಕಾರಣ ಜನರೇ ಸ್ವಯಂಪ್ರೇರಿತರಾಗಿ ನಿರ್ಬಂಧ ಹಾಕಿಕೊಳ್ಳಬೇಕು‘ ಎಂದರು.

ಮಾ. 28ರಿಂದ‌ ಇದುವರೆಗೂ ಒಟ್ಟು 590 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1,325 ಪ್ರಕರಣಗಳನ್ನು ದಾಖಲಿಸಲಾಗಿದೆ. ₹6.47 ಲಕ್ಷ ದಂಡ ಪಡೆದಿದ್ದೇವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT