ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ ಜಿಲ್ಲಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾ.ಬಿ.ಎಸ್‌ ಪಾಟೀಲ ಭೇಟಿ, ಪರಿಶೀಲನೆ

Published 30 ನವೆಂಬರ್ 2023, 8:18 IST
Last Updated 30 ನವೆಂಬರ್ 2023, 8:18 IST
ಅಕ್ಷರ ಗಾತ್ರ

ಧಾರವಾಡ: ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ ಅವರು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ವಾರ್ಡ್‌, ಔಷಧ ವಿತರಣೆ ಮೊದಲಾದ ವಿಭಾಗಗಳನ್ನು ಪರಿಶೀಲಿಸಿದರು. ಔಷಧ ವಿತರಣೆಗೆ ಸಂಬಂಧಿಸಿದಂತೆ ದಾಖಲೆ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಸಿಬ್ಬಂದಿಗೆ ಹೇಳಿದರು.

ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ಕುಂದುಕೊರತೆ ಪರಿಹಾರಕ್ಕೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದ್ದೇನೆ. ಆವರಣ ಪ್ರದೇಶದಲ್ಲಿ ರಸ್ತೆ ಹದಗೆಟ್ಟಿದೆ, ಗುಂಡಿಗಳಾಗಿವೆ. ಇಲ್ಲಿ ಓಡಾಡುವಾಗ ಜನರು, ರೋಗಿಗಳು ಬೀಳುವ ಸಾಧ್ಯತೆಗಳು ಇವೆ. ರಸ್ತೆ ಸರಿಪಡಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.

ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಮಕ್ಕಳ ವಿಭಾಗದಲ್ಲಿ 20 ಹಾಸಿಗೆ ವ್ಯವಸ್ಥೆ ಇದೆ. ಈ ವಿಭಾಗಕ್ಕೆ 40 ಹಾಸಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಸಿಬ್ಭಂದಿ ಕೊರತೆ ಇದೆ ಎಂದೂ ಹೇಳಿದ್ಧಾರೆ. ಈ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಲು ಕೈಗೊಂಡ ಕ್ರಮಗಳ ಕುರಿತು ನಿಯಮಿತವಾಗಿ ವರದಿ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಔಷಧ ವಿತರಣೆ ವ್ಯವಸ್ಥೆ ಸರಿ ಇಲ್ಲ. ಔಷಧ ದಾಸ್ತಾನು, ವಿತರಣೆ ಲೆಕ್ಕ ವಿವರ ಇಲ್ಲ. ಪ್ರತಿನಿತ್ಯ ಸುಮಾರು 1500 ಮಂದಿ ಬರುತ್ತಾರೆ, ಇಬ್ಬರು ಫಾರ್ಮಾಸಿಸ್ಟ್‌ಗಳು ಇದ್ದೇವೆ, ಇಷ್ಟೊಂದು ಜನರನ್ನು ಇಬ್ಬರು ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು ಸಿಬ್ಬಂದಿ ಹೇಳಿದ್ಧಾರೆ. ವಿತರಣೆ ಲೆಕ್ಕ, ವಿವರ ದಾಖಲಿಸಲು ಕಂಪ್ಯೂಟರ್‌ ಆಪರೇಟರ್‌ ಒಬ್ಬರನ್ನು ನೇಮಿಸಿಕೊಳ್ಳಲು ಹೇಳಿದ್ದೇನೆ. ಔಷಧ ವಿಭಾಗದ ಅವ್ಯವಸ್ಥೆ ಬಗ್ಗೆ ಪ್ರಕರಣ ದಾಖಲಿಸಲಾಗುವುದ ಮತ್ತು ವ್ಯವಸ್ಥೆ ಸರಿಪಡಿಸಲು ನಿರ್ದೇಶನ ನೀಡಲಾಗುವುದು ಎಂದರು.

ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ದೂರುಗಳು ಇವೆ. ಎರಡೂ ನಗರಗಳ ಪ್ರದಕ್ಷಿಣೆ ಮಾಡಲಾಗುವುದು. ನಂತರ, ಎಲ್ಲ ಅಧಿಕಾರಿಗಳ ಜತೆ ಸಭೆ ನಡೆಸಿ ಕಸ ಸಂಗ್ರಹ, ವಿಲೇವಾರಿ ವ್ಯವಸ್ಥಿತ ನಿರ್ವಹಣೆ ಕುರಿತು ಚರ್ಚಿಸಲಾಗುವುದು. ಅವಳಿ ನಗರ ಸುಂದರವಾಗಿಡಲು ಕ್ರಮ ವಹಿಸಲು ಸೂಚನೆ ನೀಡಲಾಗುವುದು. ಕೆರೆಗಳ ಒತ್ತುವರಿ, ಅಭಿವೃದ್ಧಿ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT