ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ–ಧಾರವಾಡ | ಸಹಾಯವಾಣಿಗೆ ದೂರುಗಳ ಮಹಾಪೂರ; ಪಾಲಿಕೆಯಿಂದ ಸ್ಪಂದನೆ

ಕಳೆದ ವರ್ಷ 1,30,363 ದೂರು
Published 3 ಫೆಬ್ರುವರಿ 2024, 6:10 IST
Last Updated 3 ಫೆಬ್ರುವರಿ 2024, 6:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಸಾರ್ವಜನಿಕರ ಸಕಾಲ ಸೇವೆಗೆ, ಮೂಲಸೌಲಭ್ಯ ಸಮಸ್ಯೆಯಾದಾಗ ಶೀಘ್ರ ಪರಿಹಾರಕ್ಕೆ ಆರಂಭಿಸಿರುವ ಪಾಲಿಕೆ ಸಹಾಯವಾಣಿ ಕೇಂದ್ರವು (ಕಂಟ್ರೋಲ್‌ ರೂಂ) ಸಾರ್ವಜನಿಕರ ದೂರುಗಳಿಗೆ ಸ್ಪಂದಿಸುತ್ತಿದೆ.

ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿಗೆ 2023ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಒಟ್ಟು 1,30,363 ದೂರುಗಳು ಬಂದಿವೆ. ಆರೋಗ್ಯ, ಲೋಕೋಪಯೋಗಿ, ವಿದ್ಯುತ್‌, ನೀರು ಮತ್ತು ತೋಟಗಾರಿಕೆ ಇಲಾಖೆ, ಇನ್ನಿತರ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿ ದಿನಕ್ಕೆ 800ಕ್ಕೂ ಹೆಚ್ಚು ದೂರವಾಣಿ ಕರೆಗಳು ಬರುತ್ತವೆ.

ಪಾಲಿಕೆಯು ದೂರುಗಳನ್ನು ‘ಎ’, ‘ಬಿ’ ಮತ್ತು ‘ಸಿ’ ಎಂದು ಮೂರು ಶ್ರೇಣಿಗಳಾಗಿ ವಿಂಗಡಿಸಿದೆ. ‘ಎ’ ಶ್ರೇಣಿಯ ದೂರುಗಳಿಗೆ ಒಂದು ದಿನ, ‘ಬಿ’ ಶ್ರೇಣಿ ದೂರುಗಳಿಗೆ ಒಂದು ವಾರ ಹಾಗೂ ‘ಸಿ’ ಶ್ರೇಣಿ ದೂರುಗಳಿಗೆ ಒಂದು ತಿಂಗಳೊಳಗೆ ಬಗೆಹರಿಸಲಾಗುತ್ತದೆ.

ವಿದ್ಯುತ್ ಸಮಸ್ಯೆ, ಕುಡಿಯುವ ನೀರು ಪೂರೈಕೆ, ನಾಯಿ ಹಾಗೂ ಹಂದಿಗಳ ಹಾವಳಿ, ಒಳಚರಂಡಿ ಸಮಸ್ಯೆಗಳನ್ನು ‘ಎ’ ವಿಭಾಗದಲ್ಲಿ, ಉದ್ಯಾನ ನಿರ್ವಹಣೆ, ರಸ್ತೆ ನಿರ್ವಹಣೆ ಸೇರಿದಂತೆ ವಿವಿಧ ದೂರುಗಳನ್ನು ‘ಬಿ’ ವಿಭಾಗದಲ್ಲಿ ಹಾಗೂ ದುರಸ್ತಿ, ಅನುದಾನ ಬೇಕಾಗುವ ದೂರುಗಳನ್ನು ‘ಸಿ’ ವಿಭಾಗದಲ್ಲಿ ಗುರುತಿಸಲಾಗಿದೆ.

‘ದೂರುಗಳನ್ನು ಆಯಾ ವಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ, ವಲಯ ಮಟ್ಟದಲ್ಲಿ ಸಮಸ್ಯೆಗಳನ್ನು ಶೀಘ್ರ ಪರಿಹರಿಸುತ್ತೇವೆ. ದೂರುಗಳನ್ನು ದಾಖಲಿಸಿಕೊಂಡ ಬಳಿಕ, ದೂರುದಾರರ ಮೊಬೈಲ್‌ಗೆ ದೂರಿನ ಸಂಖ್ಯೆ ನೀಡುತ್ತೇವೆ. ಸಮಸ್ಯೆ ಪರಿಹಾರವಾದ ಬಳಿಕ ದೂರು ಪರಿಹಾರವಾಗಿದೆ ಎಂದು ಸಂದೇಶ ಕಳುಹಿಸಲಾಗುತ್ತದೆ’ ಎಂದು ಪಾಲಿಕೆ ಸಹಾಯವಾಣಿ ಕೇಂದ್ರದ ಯೋಜನಾ ನಿರ್ದೇಶಕ ಮಾಲತೇಶ ಗುಡಿಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಾಯವಾಣಿ ಕೇಂದ್ರದಲ್ಲಿ 21 ಸಿಬ್ಬಂದಿ ಇದ್ದು ಮೂರು ಪಾಳೆಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತಾರೆ. ಬರುವ ಕರೆಗಳನ್ನು ಸ್ವೀಕರಿಸಿ ದೂರುಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ಒದಗಿಸುತ್ತಾರೆ
– ಲಕ್ಷ್ಮಿ ಕಾಂಬಳೆ ಎಇಇ ಪಾಲಿಕೆ ಸಹಾಯವಾಣಿ ಕೇಂದ್ರ

ಪ್ರತಿ ತಿಂಗಳೂ ಪರಿಶೀಲನಾ ಸಭೆ

‘ಪ್ರತಿ ತಿಂಗಳ 2ನೇ ಬುಧವಾರ ಪಾಲಿಕೆ ಅಧಿಕಾರಿಗಳು ಹಾಗೂ ಸಹಾಯವಾಣಿ ಸಿಬ್ಬಂದಿ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇವೆ. ಯಾವ ವಿಭಾಗಗಳಿಗೆ ಎಷ್ಟು ದೂರುಗಳು ಬಂದಿವೆ? ಎಷ್ಟು ಇತ್ಯರ್ಥವಾಗಿವೆ? ಎಷ್ಟು ಬಾಕಿ ಇವೆ ಎಂಬುದರ ಕುರಿತು ಚರ್ಚಿಸಲಾಗುತ್ತದೆ. ನಿಗದಿತ ಅವಧಿಯಲ್ಲಿಸಮಸ್ಯೆ ಇತ್ಯರ್ಥಗೊಳಿಸದ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುತ್ತದೆ. ಸದ್ಯ ಎಲ್ಲ ದೂರುಗಳಿಗೂ ಸಕಾರಾತ್ಮಕವಾಗಿ ಸ್ಪಂದಿಸಿ ಶೀಘ್ರ ಪರಿಹಾರ ಒದಗಿಸಲಾಗುತ್ತಿದೆ’ ಎಂದು ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಸಹಾಯವಾಣಿ ಸಂಖ್ಯೆ: 0836– ‌2213888

ಟೊಲ್‌ ಫ್ರೀ ಸಂಖ್ಯೆ: 0836–2213886 2213889

ವಾಟ್ಸ್‌ಆ್ಯಪ್‌ ಸಂಖ್ಯೆ: 8277803778

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT