ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಅಗತ್ಯ: ರಂಭಾಪುರಿ ಸ್ವಾಮೀಜಿ

ಧರ್ಮ ಜಾಗೃತಿ ಸಮಾರಂಭದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯ
Last Updated 5 ಏಪ್ರಿಲ್ 2022, 3:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸ್ವಧರ್ಮ ನಿಷ್ಠೆ ಜೊತೆಗೆ, ಪರಧರ್ಮ ಸಹಿಷ್ಣುತೆ ಬೆಳೆಸಿಕೊಂಡಾಗ ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ. ನಾಗರಿಕತೆಯ ಹೆಸರಿನಲ್ಲಿ ಬದುಕಿನ ಮೌಲ್ಯಗಳು ಕಣ್ಮರೆಯಾಗಬಾರದು. ಜೀವನ ವಿಕಾಸಕ್ಕೆ ಧರ್ಮದ ಜ್ಞಾನ ಅಗತ್ಯವಾಗಿದೆ. ಧರ್ಮವು ಮನುಷ್ಯನನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ’ ಎಂದು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ನಗರದ ಹಳೇ ಹುಬ್ಬಳ್ಳಿಯ ಹಿರೇಪೇಟೆಯಲ್ಲಿ ಸೋಮವಾರ ನಡೆದ ಧರ್ಮ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ‘ಉತ್ತಮ ಸಂಬಂಧ ಮತ್ತು ಸ್ನೇಹದಿಂದ ಬಾಳು ಬಂಗಾರವಾಗುತ್ತದೆ. ಸಕಲರಿಗೂ ಸದಾ ಒಳಿತನ್ನೇ ಬಯಸಿದ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಮತ್ತು ಸಿದ್ಧಾಂತಗಳು ಜೀವನ ವಿಕಾಸಕ್ಕೆ ದಾರಿದೀಪವಾಗಿವೆ’ ಎಂದರು.

‘ಆಧುನಿಕ ಕಾಲದಲ್ಲಿ ಮನುಷ್ಯ ಯಂತ್ರದಂತೆ ದುಡಿಯುತ್ತಿದ್ದಾನೆ. ಕೈತುಂಬಾ ಹಣವಿದ್ದರೂ, ಬದುಕಿನಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲ. ಧರ್ಮಾಚರಣೆ ಜೊತೆಗೆ ಸಕಲರಿಗೂ ಒಳಿತು ಬಯಸಿದಾಗ ಮಾತ್ರ ಬದುಕು ಸುಂದರವಾಗುತ್ತದೆ. ಬದುಕು ಸುಂದರವಾದಾಗ, ಸಮಾಜವೂ ಸಮೃದ್ಧವಾಗುತ್ತದೆ. ಎಲ್ಲೆಡೆ ಶಾಂತಿ ನೆಲೆಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಶಿರಕೋಳದ ಹಿರೇಮಠ ಗುರುಸಿದ್ಧೇಶ್ವರ ಶಿವಾಚಾರ್ಯ ಮಾತನಾಡಿ, ‘ಎಲ್ಲರೊಂದಿಗೆ ಪ್ರೀತಿ, ಪ್ರೇಮ ಹಾಗೂ ಸ್ನೇಹದಿಂದ ಬದುಕುವುದೇ ಮಾನವ ಧರ್ಮವಾಗಿದೆ. ಅರಿವು ಮತ್ತು ಆಚಾರಗಳು ಮನುಷ್ಯನನ್ನು ಸನ್ಮಾರ್ಗದಲ್ಲಿ ಕೈ ಹಿಡಿದು ನಡೆಸುತ್ತವೆ’ ಎಂದರು.

ಸುಳ್ಳದ ಶಿವಸಿದ್ಧರಾಮ ಶಿವಾಚಾರ್ಯ, ಸೂಡಿಯ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ, ಅಮ್ಮಿನಭಾವಿಯ ಅಭಿನವ ಶಾಂತಲಿಂಗ ಶಿವಾಚಾರ್ಯ, ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿದರು. ಮುಖಂಡರಾದ ಪ್ರಕಾಶ ಬೆಂಡಿಗೇರಿ, ಬಂಗಾರೇಶ ಹಿರೇಮಠ, ಈರಣ್ಣ ಜಡಿ, ಚಂದ್ರಶೇಖರ ಗೋಕಾಕ, ಸಿದ್ಧಲಿಂಗಪ್ಪ ಮಟ್ಟಿ, ಬಸವಲಿಂಗಪ್ಪ ಲಕ್ಕುಂಡಿ, ನಾಗರಾಜ ಹಿರೇಮಠ, ಪ್ರಭು ನವಲಗುಂದಮಠ, ರಾಜು ಕೋರ್ಯಾಣಮಠ ಇದ್ದರು.

ಅದ್ಧೂರಿ ಅಡ್ಡಪಲ್ಲಕ್ಕಿ ಉತ್ಸವ

ಅಪಾರ ಭಕ್ತ ಸಮೂಹದ ಮಧ್ಯೆ ಬೆಳಿಗ್ಗೆ ವೀರಸೋಮೇಶ್ವರ ಸ್ವಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ನೆರವೇರಿತು. ಡೋಲು ವಾದ್ಯ ಮೇಳದೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದರು. ಮಹಿಳಾ ಡೋಲು ತಂಡ, ಭಜನಾ ಮಂಡಳಿ ಹಾಗೂ ವೀರಗಾಸೆ ಕಲಾವಿದರ ಕುಣಿತ ಉತ್ಸವಕ್ಕೆ ವಿಶೇಷ ಮೆರುಗು ತಂದವು. ಜೋಡಿ ಅಶ್ವ, ಗಜ ಹಾಗೂ ಎತ್ತಿನ ಬಂಡಿಗಳು ಗಮನ ಸೆಳೆದವು.

ಮೆರವಣಿಗೆಯ ಮಾರ್ಗದುದ್ದಕ್ಕೂ ಭಕ್ತರು ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಕೆಲವರು ಫಲಪುಷ್ಪ ಅರ್ಪಿಸಿದರು. ಉತ್ಸವದ ಅಂಗವಾಗಿ ಹಿರೇಪೇಟೆಯ ಬೀದಿಗಳನ್ನು ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ ಸಿಂಗರಿಸಲಾಗಿತ್ತು. ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಹಿರೇಪೇಟೆಯಿಂದ ಆರಂಭಗೊಂಡ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗೆಯು ಅಜ್ಜಪ್ಪ ಗುಡಿ, ಬಾಣತಿಕಟ್ಟಿ, ಮಾರುಕಟ್ಟೆ, ಸದರ ಸೋಫಾ, ನೇಕಾರನಗರ ರಸ್ತೆ, ಕಸಬಾಪೇಟೆ ಪೊಲೀಸ್ ಠಾಣೆ, ದುರ್ಗದ ಬೈಲ್‌ ಮಾರ್ಗವಾಗಿ ವಾಪಸ್ ಹಿರೇಪೇಟೆಗೆ ಬಂದು ಅಂತ್ಯಗೊಂಡಿತು. ನಂತರ ಎಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT