ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಟಿ ಪಂಗಡಕ್ಕೆ ಸೇರಿಸಲು ಮಡಿವಾಳರ ಆಗ್ರಹ

Last Updated 31 ಮಾರ್ಚ್ 2021, 11:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಹಿಂದೆ ಹಲವಾರು ಬಾರಿ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ಮುಂದೆಯೂ ಇದೇ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗುರು ಮಡಿವಾಳ ಮಾಚಿದೇವ ಸ್ವಸಹಾಯ ಸಂಘದ ಸದಸ್ಯರು ತಿಳಿಸಿದರು.

ಸಂಘದ ಅಧ್ಯಕ್ಷ ಎಸ್‌.ಎಫ್‌. ಮಡಿವಾಳರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಎಸ್‌ಟಿ ಪಂಗಡಕ್ಕೆ ಸೇರ್ಪಡೆಗೆ ಆಗ್ರಹಿಸಿ ಹಿಂದೆ ದೇವರ ಹಿಪ್ಪರಗಿಯಿಂದ ಬೆಂಗಳೂರಿನ ತನಕ ಪಾದಯಾತ್ರೆ ಮಾಡಲಾಗಿತ್ತು. ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಅನೇಕ ಸಚಿವರು ಹಾಗೂ ಮುಖ್ಯಮಂತ್ರಿಗೆ ಮನವಿ ಕೂಡ ಸಲ್ಲಿಸಲಾಗಿತ್ತು’ ಎಂದರು.

‘ಕೋವಿಡ್‌ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮಡಿವಾಳರಿಗೆ ₹5,000 ನೆರವು ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಈ ನೆರವು ಕೂಡ ಎಲ್ಲರಿಗೂ ಸಿಕ್ಕಿಲ್ಲ. ಈ ಹಣವನ್ನು ಕಾರ್ಮಿಕ ಅಧಿಕಾರಿಗಳ ಮೂಲಕ ತ್ವರಿತವಾಗಿ ಬಿಡುಗಡೆ ಮಾಡಬೇಕು. ಸಮಾಜಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸಲು ಸಮುದಾಯ ಭವನ ನಿರ್ಮಿಸಿಕೊಡಬೇಕು. ಆಶ್ರಯ ಯೋಜನೆಯಲ್ಲಿ ಮನೆ ಕಟ್ಟಿಕೊಡಬೇಕು’ ಎಂದು ಆಗ್ರಹಿಸಿದರು.

ಸಂಘದ ಸದಸ್ಯ ಪ್ರಕಾಶ ಮಡಿವಾಳರ ಮಾತನಾಡಿ ‘ರಾಜಕಾರಣದಲ್ಲಿಯೂ ನಮ್ಮ ಸಮಾಜಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆದ್ದರಿಂದ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಗಳಲ್ಲಿ ಮಡಿವಾಳರಿಗೆ ಆದ್ಯತೆ ಕೊಡಬೇಕು. ಹಿಂದೂ ಲಿಂಗಾಯತ ಮಡಿವಾಳ ಬದಲಾಗಿ; ಹಿಂದೂ ಮಡಿವಾಳ ಎಂದಷ್ಟೇ ಜಾತಿ ಪ್ರಮಾಣಪತ್ರ ನೀಡಬೇಕು. ಬಸವಣ್ಣನವರು ಹಾಗೂ ಮಡಿವಾಳರು ಸಮಕಾಲಿನವರಾಗಿದ್ದು ಇಬ್ಬರ ಜಯಂತಿಯನ್ನು ಒಟ್ಟಿಗೆ ಆಚರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಸದಸ್ಯರಾದ ಹನುಮಂತಪ್ಪ ಮಡಿವಾಳರ, ಅಶೋಕ ಮಡಿವಾಳರ, ವೈ.ಎಫ್‌. ಮಡಿವಾಳರ, ಚನ್ನಪ್ಪ ಮಡಿವಾಳರ, ಬಿ.ಎಚ್‌. ಮಡಿವಾಳರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT