ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಮಹಾನಗರ ಪಾಲಿಕೆ: ಹೊಸ ಆಡಳಿತಕ್ಕೆ ಹಲವು ಸವಾಲು

3 ವರ್ಷಗಳ ನಂತರ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಇಂದು; ನಿರೀಕ್ಷೆಯಲ್ಲಿ ನಾಗರಿಕರು
Last Updated 30 ಜೂನ್ 2022, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಮೂರು ವರ್ಷಗಳ ನಂತರ ಹೊಸ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಿದೆ. ಇದುವರೆಗೆ ಇದ್ದ ಅಧಿಕಾರಶಾಹಿಯ ದರ್ಬಾರ್ ಅಂತ್ಯಗೊಂಡಿದ್ದು, ಚುನಾಯಿತ ಜನಪ್ರತಿನಿಧಿಗಳ ಆಡಳಿತ ಶಕೆ ಆರಂಭಕ್ಕೆ ಮುನ್ನುಡಿಯಾಗಿ ಗುರುವಾರ ಮೊದಲ ಸಾಮಾನ್ಯ ಸಭೆ ನಡೆಯಲಿದೆ. ಅವಳಿ ನಗರ ಎದುರಿಸುತ್ತಿರುವ ಹಲವು ಸಮಸ್ಯೆಗಳನ್ನು ಹೊಸ ಆಡಳಿತ ಹೇಗೆ ಪರಿಹರಿಸುತ್ತದೆ ಎನ್ನುವುದನ್ನು ನಾಗರಿಕರು ಕಾತುರದಿಂದ ಎದುರು ನೋಡುತ್ತಿದ್ದಾರೆ.

ಆಮೆಗತಿಯಲ್ಲಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳು, ಹದಗೆಟ್ಟ ರಸ್ತೆಗಳು, ಕಚೇರಿಗಳಲ್ಲಿ ನಾಗರಿಕರ ಕೆಲಸಗಳ ವಿಳಂಬ, ತ್ಯಾಜ್ಯ ನಿರ್ವಹಣೆಯ ಸವಾಲುಗಳು, ಮೂಲಸೌಕರ್ಯಗಳ ಕೊರತೆ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ... ಸೇರಿದಂತೆ ಹಲವು ಸಮಸ್ಯೆಗಳು ಹಾಗೂ ಬೇಡಿಕೆಗಳು ನೂತನ ಮೇಯರ್ ಈರೇಶ ಅಂಚಟಗೇರಿ ತಂಡದ ಮುಂದಿವೆ.

ದುರಸ್ತಿ ಕಾರಣದ ರಸ್ತೆ

ಮಳೆಗಾಲಕ್ಕೂ ಮುಂಚೆ ಅವಳಿನಗರದ ರಸ್ತೆಗಳ ತಗ್ಗು–ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿತ್ತು. ಆದರೆ, ಮಳೆಗಾಲ ಆರಂಭವಾದರೂಪಾಲಿಕೆಯು ರಸ್ತೆಗಳ ದುರಸ್ತಿ ಕೈಗೊಂಡಿಲ್ಲ. ಮಳೆಯಿಂದಾಗಿ ಮುಖ್ಯರಸ್ತೆಗಳು ಮತ್ತು ಒಳ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ. ಈ ಬಗ್ಗೆ ನಾಗರಿಕರಿಂದ ಮನವಿ, ಪ್ರತಿಭಟನೆ ನಡೆದರೂ ಪಾಲಿಕೆ ಅತ್ತ ಕಿವಿಕೊಟ್ಟಿಲ್ಲ.

ಇನ್ನು ಘನ ತ್ಯಾಜ್ಯದ ಸಮರ್ಪಕ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದರೂ, ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಕಸ ವಿಂಗಡಣೆ ಕೇವಲ ಹಾಳೆಯಲ್ಲೇ ಉಳಿದಿದೆ. ಕೆಲವೆಡೆ ಎರಡ್ಮೂರು ದಿನಕ್ಕೊಮ್ಮೆ ಕಸ ಸಂಗ್ರಹಿಸಲಾಗುತ್ತಿದೆ. ಕಾಂಪೋಸ್ಟ್ ಘಟಕಗಳು ಆರಂಭವಾಗದಿರುವುದರಿಂದ,ಅಲ್ಲಿ ಅಳವಡಿಸಿರುವ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಪಾಲಿಕೆಯಲ್ಲಿ ಕೆಲಸಗಳು ವಿಳಂಬವಾಗುತ್ತಿವೆ ಎಂಬ ಆರೋಪ ನಾಗರಿಕರದು. ಕಟ್ಟಡ ನಿರ್ಮಾಣಕ್ಕೆ ಅನುಮತಿ, ಬೀದಿ ದೀಪ ನಿರ್ವಹಣೆ, ಗಟಾರ ತೊಂದರೆ, ಪಾರ್ಕಿಂಗ್ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗದ ಬಗ್ಗೆ ಅಸಮಾಧಾನವಿದೆ. ಹೀಗೆ ಹಲವು ಸಮಸ್ಯೆಗಳ ಸರಮಾಲೆಗಳಿಗೆ ಜನಪ್ರತಿನಿಧಿಗಳ ಸಭೆಯು ಹೇಗೆ ಸ್ಪಂದಿಸಿ, ಪರಿಹಾರ ಸೂಚಿಸುತ್ತದೆ ಎಂಬುದರ ಬಗ್ಗೆ ನಾಗರಿಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಪ್ರತ್ಯೇಕ ಪಾಲಿಕೆಯ ಬೇಡಿಕೆ

ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವು ಇತ್ತೀಚೆಗೆ ಹೆಚ್ಚಿನ ಕಾವು ಪಡೆದುಕೊಳ್ಳುತ್ತಿದೆ. ಅಲ್ಲಿ 26 ಸದಸ್ಯರಿದ್ದರೂ ನಗರವು ಅಭಿವೃದ್ಧಿ ವಿಷಯಗಳಲ್ಲಿ ವಂಚಿತವಾಗಿದೆ ಎಂಬ ದೂರಿದೆ.ಇದನ್ನು ತಣಿಸುವ ಸಲುವಾಗಿಯೇ ಬಿಜೆಪಿ ಈ ಬಾರಿ ಮೇಯರ್ ಸ್ಥಾನಕ್ಕೆ ಧಾರವಾಡದವರಾದ ಈರೇಶ ಅಂಚಟಗೇರಿ ಅವರನ್ನು ಆಯ್ಕೆ ಮಾಡಿದೆ.

ಆದರೂ, ಪ್ರತ್ಯೇಕ ಮಹಾನಗರ ಪಾಲಿಕೆಯ ಬೇಡಿಕೆ ನಿಂತಿಲ್ಲ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಠರಾವು ಪಾಸು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುವುದಾಗಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ವೇದಿಕೆ ಹೇಳಿದೆ. ಈ ಕುರಿತು ಸಾಮಾನ್ಯ ಸಭೆಯ ಯಾವ ನಿರ್ಣಯ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.

ಸಮಸ್ಯೆಗಳ ಜೊತೆಗೆ ಸವಾಲುಗಳು ಕೂಡ ನಮ್ಮ ಮುಂದಿವೆ. ಸದ್ಯ ಕಾಡುತ್ತಿರುವ ನೀರಿನ ಸಮಸ್ಯೆ ಸೇರಿದಂತೆ, ಕೆಲ ಪ್ರಮುಖ ವಿಷಯಗಳ ಚರ್ಚೆಗೆ ಸಾಮಾನ್ಯ ಸಭೆಯಲ್ಲಿ ಒತ್ತು ನೀಡಲಾಗುವುದು ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ನೀರು– ನೌಕರರ ಸಮಸ್ಯೆಗೆ ಸಿಗುವುದೇ ಮುಕ್ತಿ?

ಮಹಾನಗರದ ನೀರು ಪೂರೈಕೆ ಮತ್ತು ನಿರ್ವಹಣೆಯನ್ನು ಎಲ್‌ ಅಂಡ್ ಟಿ ಕಂಪನಿಗೆ ಹಸ್ತಾಂತರಿಸಿದ ಬೆನ್ನಲ್ಲೇ, ಜಲಮಂಡಳಿ ನೌಕರರು 7 ದಿನ ಮುಷ್ಕರ ಹೂಡಿದ್ದರು. ಅಂದಿನಿಂದ ನೀರು ಪೂರೈಕೆಯಲ್ಲಾದ ವ್ಯತ್ಯಯ ಇಂದಿಗೂ ಸರಿಹೋಗಿಲ್ಲ. ನೌಕರರು ಕಂಪನಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿರುವುದರಿಂದ ಹಲವು ವಾರ್ಡ್‌ಗಳಲ್ಲಿ ಹತ್ತು ದಿನಗಳಿಗೊಮ್ಮೆ ನೀರು ಬರುತ್ತಿದೆ.

ಅತ್ತ ಕಂಪನಿಯೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ಇಬ್ಬರ ಮಧ್ಯೆ ನಾಗರಿಕರು ನೀರಿನ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಕಗ್ಗಂಟಾಗಿರುವ ಈ ಸಮಸ್ಯೆಗೆ ಸಾಮಾನ್ಯ ಸಭೆಯಲ್ಲಿ ಪರಿಹಾರ ಸಿಗಬಹುದೇ ಎಂದು ಕಾದು ನೋಡಬೇಕಿದೆ.

‘ತರಾತುರಿಯಲ್ಲಿ ಸಭೆ ನಿಗದಿ’

‘ನೀರಿನ ಸಮಸ್ಯೆ ನೆಪದಲ್ಲಿ ತರಾತುರಿಯಲ್ಲಿ ಸಭೆ ನಿಗದಿಪಡಿಸಲಾಗಿದೆ. ಹಾಗಾಗಿ ವಾರ್ಡ್‌ಗಳ ಮಟ್ಟದಲ್ಲಿ ರಸ್ತೆ, ಒಳ ಚರಂಡಿ ಸೇರಿದಂತೆ ಮೂಲಸೌಕರ್ಯಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳು ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆ ಇದೆ’ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲ ಅಸಮಾಧಾನ ವ್ಯಕ್ತಪಡಿಸಿದರು.

‘1,400 ಜನರಿಗೆ ಉದ್ಯೋಗ ನೀಡುವುದಾಗಿ 43.50 ಎಕರೆಯಲ್ಲಿಇನ್ಫೊಸಿಸ್‌ ಕ್ಯಾಂಪಸ್ ನಿರ್ಮಿಸಿದೆ. ಆದರೆ, ಇದುವರೆಗೆ ಕಾರ್ಯಾರಂಭಿಸಿಲ್ಲ. ಪಾಲಿಕೆಗೆ ಬಂದಿದ್ದ ₹1,107 ಕೋಟಿ ಎಸ್‌ಎಫ್‌ಸಿ ಅನುದಾನವನ್ನು ಲೋಕೋಪಯೋಗಿ ಇಲಾಖೆಗೆ ಕೊಟ್ಟು ಕೆಲಸ ಮಾಡಿಸಲಾಗುತ್ತಿದೆ. ಈ ಕುರಿತು ಸಭೆಯಲ್ಲಿ ಗಮನ ಸೆಳೆಯಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT