ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಇಂದಿನಿಂದ ಐದು ಕಡೆ ಮಾರುಕಟ್ಟೆ

ಅಗತ್ಯ ದಿನಸಿ, ತರಕಾರಿ ಖರೀದಿಸಲು ಪಾಲಿಕೆಯಿಂದ ವ್ಯವಸ್ಥೆ
Last Updated 26 ಮಾರ್ಚ್ 2020, 16:32 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾರತ ಲಾಕ್‌ ಡೌನ್ ಆಗಿರುವ ಹಿನ್ನೆಲೆಯಲ್ಲಿ ಜನರಿಗೆ ಸುಲಭವಾಗಿ ಅಗತ್ಯ ದಿನಸಿ ಹಾಗೂ ತರಕಾರಿಗಳು ಸಿಗುವಂತೆ ಮಾಡಲು ಮಹಾನಗರ ಪಾಲಿಕೆ ನಗರದ ಐದು ಕಡೆ ಮಾರುಕಟ್ಟೆ ಆರಂಭಿಸಿದ್ದು, ಶುಕ್ರವಾರ ಕಾರ್ಯಾರಂಭ ಮಾಡಲಿವೆ.

ನೆಹರೂ ಮೈದಾನ, ಈದ್ಗಾ ಮೈದಾನ, ಹಳೇ ಬಸ್‌ ನಿಲ್ದಾಣ, ಹೆಗ್ಗೇರಿಯ ಅಂಬೇಡ್ಕರ್ ಮೈದಾನ ಮತ್ತು ಯಂಗ್‌ಸ್ಟರ್ಸ್‌ ಹಾಕಿ ಕ್ಲಬ್ ಮೈದಾನದಲ್ಲಿ ಮಾರುಕಟ್ಟೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್‌ ಮಾಡುವ ಕಾರ್ಯ ಗುರುವಾರ ನಡೆಯಿತು. ಏಪ್ರಿಲ್‌ 14ರ ವರೆಗೆ ಈ ಮಾರುಕಟ್ಟೆ ಇರಲಿದೆ.

‘ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆಲವರು ಮನೆಮನೆಗಳಿಗೆ ಹೋಗಿ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆಗೆ ಬರಬೇಕು ಎನ್ನುವವರಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಜನಜಂಗುಳಿ ಹೆಚ್ಚಾದರೆ ಕೇಶ್ವಾಪುರದ ರೈಲ್ವೆ ಮೈದಾನ ಮತ್ತು ಹೊಸ ಬಸ್‌ ನಿಲ್ದಾಣದಲ್ಲಿಯೂ ಮಾರುಕಟ್ಟೆ ಆರಂಭಿಸಲಾಗುವುದು. ಇದಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ತಿಳಿಸಿದರು.

ಸಾಮಾಜಿಕ ಅಂತರ: ಸೋಂಕು ಹರಡುವ ಭೀತಿಯಲ್ಲಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಮಂಟೂರು ಗ್ರಾಮದ ಮೆಡಿಕಲ್ ಶಾಪ್, ಕಿರಾಣಿ ಅಂಗಡಿ ಮತ್ತಿತರ ಅಗತ್ಯ ವಸ್ತುಗಳ ಅಂಗಡಿಗಳ ಮುಂದೆ ಪರಸ್ಪರ ಅಂತರದಲ್ಲಿ ನಿಂತು ಗ್ರಾಹಕರು ವಸ್ತುಗಳನ್ನು ಖರೀದಿಸಿದರು. ಇದಕ್ಕಾಗಿ ಮಾರ್ಕಿಂಗ್‌ ಮಾಡಲಾಗಿದೆ.

ಪಾಲಿಕೆ ಸಿಬ್ಬಂದಿ ಗುರುವಾರ ಬಮ್ಮಾಪುರ ಓಣಿ, ಗೌಡ್ರ ಓಣಿ, ಪಗಡಿಗಲ್ಲಿ ಸರ್ಕಲ್, ಹಿರೇಪೇಟ್ ಮುಖ್ಯ ರಸ್ತೆ , ಐದು ಮನೆಸಾಲು, ತಂಬಡ್ ಓಣಿ‌ ಸೇರಿದಂತೆ ವಿವಿಧೆಡೆ ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸಿದರು. ಪಾಲಿಕೆ ಮಾಜಿ ಸದಸ್ಯ ಶಿವು ಮೆಣಸಿನಕಾಯಿ, ವಲಯ ಸಹಾಯ ಆಯುಕ್ತ ರಾಜೇಂದ್ರ ಚಂಡಿಕೆ, ಆರೋಗ್ಯ ನಿರೀಕ್ಷಕಿ ಹೀನಾ ಕೌಸರ್, ಕಾಮಗಾರಿ ನಿರೀಕ್ಷಕ ಕೆ.ಎಂ.ನದಾಫ್, ಅಧೀಕ್ಷಕ ಆನಂದ ನವಲಗುಂದ ಇದ್ದರು.

43 ಜನರಿಗೆ ಆಶ್ರಯ: ವಾಹನ ಸಂಚಾರವಿಲ್ಲದೆ ಶಿವಾಜಿ ಪಾರ್ಕ್‌ನಲ್ಲಿ ನೆರೆದಿದ್ದ 43 ಜನ ಹೋಟೆಲ್‌ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ.

ಅವರೆಲ್ಲರನ್ನೂ ಮೊದಲು ಥರ್ಮಲ್ ಸ್ಕ್ಯಾನಿಂಗ್ ಗೆ ಒಳಪಡಿಸಿ ಆರೋಗ್ಯ ತಪಾಸಣೆ ಮಾಡಲಾಯಿತು. ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ, ಕಾರ್ಮಿಕ ಅಧಿಕಾರಿ ಮಾರಿಕಾಂಬಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಭಾರತಿ ಶೆಟ್ಟರ್ ಇದ್ದರು.

ಒಳರಸ್ತೆಗಳಲ್ಲಿ ಓಡಾಟ ಸುಲಭ

ತುರ್ತು ಅಗತ್ಯ ಹೊರತುಪಡಿಸಿಯೂ ವಿನಾಕಾರಣ ನಗರದಲ್ಲಿ ಓಡಾಡುತ್ತಿದ್ದ ಜನರಿಗೆ ಪೊಲೀಸರು ಲಾಠಿ ಪೆಟ್ಟು ನೀಡಿದರು. ಚನ್ನಮ್ಮ ವೃತ್ತ, ಹಳೇ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣ, ಕೇಶ್ವಾಪುರ ಸರ್ಕಲ್‌ ಮತ್ತು ರೈಲ್ವೆ ನಿಲ್ದಾಣದ ಸನಿಹದಲ್ಲಿ ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಲಾಠಿ ರುಚಿ ತೋರಿಸಿದರು. ಆಸ್ಪತ್ರೆಗೆ ತೆರಳುತ್ತಿದ್ದ ಕೆಲ ಸವಾರರ ದಾಖಲೆಗಳನ್ನು ಪರಿಶೀಲಿಸಿ ಕಳುಹಿಸಿದರು. ಆದ್ದರಿಂದ ಸವಾರರು ಮುಖ್ಯ ರಸ್ತೆಯಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದರು.

ಆದರೆ, ಲಿಂಗರಾಜ ನಗರ, ಭವಾನಿ ನಗರ, ರಾಜನಗರ, ವಿದ್ಯಾನಗರ, ಉಣಕಲ್‌ ಕ್ರಾಸ್‌, ಶಿರೂರು ಪಾರ್ಕ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸವಾರರು ಯಾವ ಭಯವೂ ಇಲ್ಲದೇ ಓಡಾಡಿದರು. ಸೋಂಕು ಹರಡುವುದನ್ನು ತಡೆಯಲು ಮನೆಯಲ್ಲೇ ಇರಿ ಎಂದು ಪ್ರಧಾನಿ ಮನವಿ ಮಾಡಿದರೂ, ಅದನ್ನು ಧಿಕ್ಕರಿಸಿ ಅಲ್ಲಲ್ಲಿ ಓಡಾಡುತ್ತಿದ್ದ ಚಿತ್ರಣ ಕಂಡು ಬಂತು.

ಆನ್‌ಲೈನ್‌ನಲ್ಲಿ ತೆರಿಗೆ ಪಾವತಿಸಿ

ಸೋಂಕು ಹರಡುವ ಭೀತಿ ಇರುವ ಕಾರಣ 2019–20ನೇ ಸಾಲಿನ ಹಾಗೂ ಬಾಕಿ ಉಳಿದ ಆಸ್ತಿ ತೆರಿಗೆಯನ್ನು ಆನ್‌ಲೈನ್‌ ಮೂಲಕವೇ ಪಾವತಿ ಮಾಡುವಂತೆ ಮಹಾನಗರ ಪಾಲಿಕೆ ತಿಳಿಸಿದೆ.

ಡೆಬಿಡ್, ಕ್ರೆಡಿಟ್‌ ಕಾರ್ಡ್‌ಗಳು, ಆನ್‌ಲೈನ್‌ ಅಥವಾ www.hdmc.mrc.gov.in ಮೂಲಕವೂ ತೆರಿಗೆ ಪಾವತಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT