ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾರ್ಪೊರೇಟ್‌’ ಕಪಿಮುಷ್ಟಿಯಲ್ಲಿ ಮಾಧ್ಯಮಗಳು: ಸಿ.ಜಿ.ಮಂಜುಳಾ ಹೇಳಿಕೆ

ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
Last Updated 7 ಆಗಸ್ಟ್ 2022, 15:29 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪತ್ರಿಕಾರಂಗ ವಿರೋಧ ಪಕ್ಷದ ರೀತಿ ಕೆಲಸ ಮಾಡಬೇಕು. ಆದರೆ, ಮಾಧ್ಯಮಗಳು ಕಾರ್ಪೊರೇಟ್‌ ಶಕ್ತಿಗಳ ಬಿಗಿ ಮುಷ್ಟಿಯಲ್ಲಿ ಸಿಲುಕಿವೆ’ ಎಂದು ಪತ್ರಕರ್ತೆ ಸಿ.ಜಿ.ಮಂಜುಳಾ ವಿಷಾದ ವ್ಯಕ್ತಪಡಿಸಿದರು.‌

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಬಿವಿಬಿ ಕಾಲೇಜಿನ ಬಯೋಟೆಕ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಮತ್ತು‌ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ 1.2 ಲಕ್ಷ ಪತ್ರಿಕೆಗಳು, 550 ಎಫ್‌.ಎಂ ರೇಡಿಯೊಗಳು, 350 ಟಿ.ವಿ ಚಾನೆಲ್‌ಗಳು ಇದ್ದರೂ ಬಹುತ್ವದ ಧ್ವನಿ ಇಲ್ಲದಂತಾಗಿದೆ. ಉದ್ಯಮಿಗಳು, ರಾಜಕೀಯ ಶಕ್ತಿಗಳು ಇವುಗಳನ್ನು ನಿಯಂತ್ರಿಸುತ್ತಿರುವುದೇ ಇದಕ್ಕೆ ಕಾರಣ. ಇದು ಮುಂದುವರಿದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ತುರ್ತು ಪರಿಸ್ಥಿತಿಯ ನಂತರ ತನಿಖಾ ಪತ್ರಿಕೋದ್ಯಮ ಚುರುಕು ಪಡೆಯಿತು. ಈಗ ತನಿಖಾ ಪತ್ರಿಕೋದ್ಯಮ ಮರೆಯಾಗಿದೆ. ಮಾಧ್ಯಮಗಳು ಸದಾ ಸತ್ಯವನ್ನು ಹೇಳಬೇಕು. ಜನರಿಗೆ ಬದ್ಧವಾಗಿ ಕೆಲಸ ಮಾಡಬೇಕು. ಆ ರೀತಿ ಕೆಲಸ ಮಾಡುತ್ತಿದ್ದೇವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

‘ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬದಲಾವಣೆಗಳು ಆಗುತ್ತಿವೆ. ಡಿಜಿಟಲ್ ಮಾಧ್ಯಮ ವೇಗವಾಗಿ ಬೆಳವಣಿಗೆ ಆಗುತ್ತಿದೆ. ಬದಲಾವಣೆಗಳಿಗೆ ನಾವು ಇನ್ನೂ ಒಗ್ಗಿಕೊಳ್ಳುತ್ತಲೇ ಇದ್ದೇವೆ. ಎಷ್ಟೇ ತಂತ್ರಜ್ಞಾನಗಳು ಬಂದರೂ ನಮ್ಮತನವನ್ನು ಬಿಟ್ಟುಕೊಡಬಾರದು’ ಎಂದು ಹೇಳಿದರು.

‘ರಾಜಕೀಯ ಕ್ಷೇತ್ರದಂತೆ ಮಾಧ್ಯಮ ಕ್ಷೇತ್ರದಲ್ಲಿಯೂ ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ಸಿಗು‌ತ್ತಿಲ್ಲ. ಸುದ್ದಿಮನೆಯಲ್ಲಿ ಮಹಿಳೆಯರ ಬಗೆಗಿನ ಪೂರ್ವಗ್ರಹಗಳು ಇಂದಿಗೂ ಹೋಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಸವರಾಜ ಹೊರಟ್ಟಿ ಅವರು ಪತ್ರಕರ್ತೆಯರಿಗೆ ಪ್ರಶಸ್ತಿ ನೀಡಲು ದತ್ತಿನಿಧಿ ಸ್ಥಾಪಿಸಿರುವುದು ಯುವ ಪತ್ರಕರ್ತೆಯರಿಗೆ ಪ್ರೇರಣೆಯಾಗಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ನಾವು ಮೊದಲ ಬಾರಿಗೆ ಶಾಸಕರಾದಾಗ ಅನೇಕ ಪತ್ರಕರ್ತರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಈಗ ಎಲ್ಲ ಕ್ಷೇತ್ರಗಳು ಹಾಳಾಗಿರುವಂತೆ ಪತ್ರಿಕಾರಂಗವು ಸಹ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಗತ್ತಿನಲ್ಲಿ ತಾಯಿಗೆ ಶ್ರೇಷ್ಠ ಸ್ಥಾನ ಇದೆ. ನನ್ನ ತಾಯಿಯ ಹೆಸರಿನಲ್ಲಿ ಅವ್ವ ಪ್ರಶಸ್ತಿ ನೀಡಲು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸ್ಥಾಪಿಸಿರುವ ದತ್ತಿ ನಿಧಿಗೆ ಇನ್ನೂ ₹1 ಲಕ್ಷ ನೀಡಲಾಗುವುದು. ಸಂಘವು ಉತ್ತಮವಾಗಿ ಕೆಲಸ ಮಾಡುತ್ತಿದೆ. ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಮೇಯರ್‌ ಈರೇಶ ಅಂಚಟಗೇರಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆಯೂ ಪತ್ರಿಕೆ ಓದುವವರ ಸಂಖ್ಯೆ ಕಡಿಮೆ ಆಗಿಲ್ಲ. ಇದು ಪತ್ರಿಕೆಗಳಿಗೆ ಇರುವ ಮಹತ್ವಕ್ಕೆ ಉದಾಹರಣೆ ಎಂದರು.

ಪತ್ರಕರ್ತ ಆರ್‌.ಪಿ.ಜಗದೀಶ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪುಂಡಲೀಕ ಬಾಳೋಜಿ, ಸುಶಿಲೇಂದ್ರ ಕುಂದರಗಿ ಇದ್ದರು. ಶೀಧರ ಕುಲಕರ್ಣಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT