ಶನಿವಾರ, ಏಪ್ರಿಲ್ 1, 2023
23 °C
ಹುಬ್ಬಳ್ಳಿಯಲ್ಲಿ ಕಾಮಗಾರಿ ಪರಿಶೀಲಿಸಿದ ಸಚಿವ ಬೈರತಿ ಬಸವರಾಜ, ಸಾರ್ವಜನಿಕರಿಂದ ದೂರಿನ ಸರಮಾಲೆ

ಇರೋದನ್ನ ಹಾಳು ಮಾಡಿ ಹೊಸದಾಗಿ ಮಾಡೋದ್ ಯಾಕ್ರೀ: ಸಚಿವ ಬೈರತಿ ಬಸವರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ’ಇಂದಿರಾಗ್ಲಾಸ್‌ ಹೌಸ್ ಅಂದ್ರ ಇಲ್ಲಿ ಮಂದೀಗೆ ಬಹಳ ಪ್ರೀತಿ. ಚಲೋ ಇದ್ದ ಪಾರ್ಕ್‌ನ ಹಾಳ್‌ ಮಾಡಿ ಈಗ ಮತ್ತೆ ರಿಪೇರಿ ಮಾಡೋದ್‌ ಯಾಕ್ರೀ ಸಾಹೇಬ್ರ?...’

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭಾನುವಾರ ಬೆಳ್ಳಂಬೆಳಿಗ್ಗೆ ಇಂದಿರಾಗ್ಲಾಸ್‌ನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲಿಸಲು ಬಂದಾಗ ವಾಕಿಂಗ್‌ ಮಾಡುತ್ತಿದ್ದ ಸಾರ್ವಜನಿಕರಿಂದ ಕೇಳಿ ಬಂದ ಮೊದಲ ಪ್ರಶ್ನೆಯಿದು.

ಜನರ ಮಾತನ್ನು ಆಲಿಸುತ್ತಲೇ, ಜೊತೆಗೆ ಅವರನ್ನೂ ಕರೆದುಕೊಂಡು ಗ್ಲಾಸ್ ಹೌಸ್‌ ಸುತ್ತು ಹಾಕಿದಾಗ ಸಚಿವರಿಗೆ ಎಲ್ಲೆಂದರಲ್ಲಿ ಬಿದ್ದಿರುವ ತ್ಯಾಜ್ಯ, ವಾಕಿಂಗ್‌ ಟ್ರ್ಯಾಕ್‌ ಮೇಲೆ ಮಣ್ಣು, ಉಪಯೋಗಕ್ಕೆ ಬಾರದ ಶೌಚಾಲಯಗಳು, ವಿದ್ಯುತ್‌ ದೀಪಗಳ ಕೊರತೆ, ಅಪೂರ್ಣ ಕಾಮಗಾರಿ ಹೀಗೆ ಹಲವಾರು ಸಮಸ್ಯೆಗಳು ಕಂಡವು.

ಸಾರ್ವಜನಿಕರು ’ಗ್ಲಾಸ್‌ ಹೌಸ್‌ ಅಭಿವೃದ್ಧಿಗೆ ಎಷ್ಟು ಕೋಟಿ ಹಣ ಖರ್ಚು ಮಾಡಿದರೂ ಪ್ರಯೋಜನವಿಲ್ಲ. ನಿರ್ವಹಣೆಯಿಲ್ಲದೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ಮೊದಲು ಈ ಉದ್ಯಾನ ಚೆನ್ನಾಗಿಯೇ ಇತ್ತು. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅನಗತ್ಯವಾಗಿ ಹಣ ವ್ಯರ್ಥ ಮಾಡಲಾಗುತ್ತಿದೆ’ ಎಂದು ದೂರಿದರು. ಇವುಗಳನ್ನೆಲ್ಲ ಸಮಾಧಾನದಿಂದ ಆಲಿಸಿದ ಸಚಿವರು ಈ ಎಲ್ಲ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು, ಸೋಮವಾರದಿಂದ ಬೆಳಿಗ್ಗೆ 5.30ಕ್ಕೆ ಗ್ಲಾಸ್‌ ಹೌಸ್‌ ತೆರೆಯಬೇಕು ಎಂದು ಸ್ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಪಾಲಿಕೆ ಆಯಕ್ತ ಸುರೇಶ ಇಟ್ನಾಳ ಅವರಿಗೆ ಸೂಚಿಸಿದರು.

ಇದಕ್ಕೂ ಮೊದಲು ಬೈರತಿ ಬಸವರಾಜ, ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕಾಂಕ್ರೀಟ್‌ ರಸ್ತೆಯ ಪಕ್ಕದಲ್ಲಿ ಸರಿಯಾಗಿ ಪೇವರ್ಸ್‌ ಅಳವಡಿಸಬೇಕು, ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಬೇಕು ಎಂದು ಸೂಚಿಸಿದರು. ಬಳಿಕ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರ, ಚಿಟಗುಪ್ಪಿ ಆಸ್ಪತ್ರೆ, ತಬೀಬ್‌ಲ್ಯಾಂಡ್‌ನಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಶಾಲೆಯ ಹೊಸ ಕಟ್ಟಡ, ಮೀನು ಮಾರುಕಟ್ಟೆ ಮತ್ತು ತೋಳನಕೆರೆಗೆ ಭೇಟಿ ನೀಡಿದರು.

ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು ’ಹಿಂದೆ ಭೇಟಿ ನೀಡಿದ್ದಾಗ ಎಲ್ಲ ಕೆಲಸಗಳು ಮಂದಗತಿಯಲ್ಲಿದ್ದವು. ಈಗ ಚುರುಕು ಪಡೆದುಕೊಂಡಿವೆ. ಅ. 5ರಂದು ಸ್ಮಾರ್ಟ್ ಸಿಟಿಯ ಕೆಲ ಯೋಜನೆಗಳು ಉದ್ಘಾಟನಾ ಸಮಾರಂಭ ನಡೆಯುತ್ತದೆ. ಆಗಲೂ ಎಲ್ಲ ಕಾಮಗಾರಿಗಳನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ’ ಎಂದರು.

’ಸಚಿವರು ಬರ್ತಾರಂತ ಬ್ಲೀಚಿಂಗ್‌ ಪೌಡರ್‌’

ಗಣೇಶಪೇಟೆಯಲ್ಲಿರುವ ಮೀನು ಮಾರುಕಟ್ಟೆಗೆ ಸಚಿವರು ಭೇಟಿ ನೀಡಿದಾಗ ಸ್ಥಳೀಯ ನಿವಾಸಿ ನಿಂಗಪ್ಪ ಜಕ್ಕಲಿ ‘ಮಾರುಕಟ್ಟೆಯ ಸುತ್ತಲೂ ಮನೆಗಳಿದ್ದು, ಆದಷ್ಟು ಬೇಗನೆ ಮಾರುಕಟ್ಟೆ ಸ್ಥಳಾಂತರಿಸಬೇಕು. ಎಲ್ಲ ಅಧಿಕಾರಿಗಳು ಸ್ಥಳಾಂತರದ ಭರವಸೆ ನೀಡುತ್ತಿದ್ದಾರೆ. ಆದರೆ ಕೆಲಸವಾಗುತ್ತಿಲ್ಲ’ ಎಂದು ದೂರಿದರು.

’ಬೇರೆ ದಿನಗಳಲ್ಲಿ ಇತ್ತ ಯಾವ ಅಧಿಕಾರಿಗಳು ಸುಳಿಯುವುದಿಲ್ಲ. ಸಚಿವರು ಬರುವ ಕಾರಣಕ್ಕೆ ಮೀನು ಮಾರುಕಟ್ಟೆಯಲ್ಲಿ ಬ್ಲೀಚಿಂಗ್‌ ಪೌಡರ್‌ ಹಾಕಲಾಗಿದೆ. ಸಚಿವರು ಬಂದಾಗ ಮಾತ್ರ ಸ್ವಚ್ಛತೆಗೆ ಆದ್ಯತೆಯಿರಬೇಕೇ’ ಎಂದು ಅವರು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು