ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಅವರನ್ನು ಚುನಾವಣೆಯಿಂದ ಅನರ್ಹಗೊಳಿಸಿ: ಸಚಿವ ಎಚ್.ಕೆ. ಪಾಟೀಲ ಆಗ್ರಹ

ಒಬ್ಬ ಮುನ್ಸಿಪಾಲಿಟಿ ಅಧ್ಯಕ್ಷನೂ ಅವರಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ: ಎಚ್.ಕೆ. ಪಾಟೀಲ
Published 23 ಏಪ್ರಿಲ್ 2024, 12:27 IST
Last Updated 23 ಏಪ್ರಿಲ್ 2024, 12:27 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೀಳುಮಟ್ಟದ ಹೇಳಿಕೆ‌ ನೀಡಿ‌‌ ಸಮಾಜದಲ್ಲಿ ದ್ವೇಷ ಹರಡುವ ಕೆಲಸ‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಅವರನ್ನು ಚುನಾವಾಣಾ ಪ್ರಕ್ರಿಯೆಯಿಂದ ಅನರ್ಹಗೊಳಿಸಬೇಕು’ ಎಂದು ಸಚಿವ ಎಚ್.ಕೆ.ಪಾಟೀಲ ಆಗ್ರಹಿಸಿದರು.

‌‘ಧರ್ಮದ ಹೆಸರಿನಲ್ಲಿ, ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಮೋದಿ ಅವರು ದ್ವೇಷದ ಮಾತುಗಳನ್ನಾಡಿದ್ದಾರೆ. ಒಬ್ಬ ಮುನ್ಸಿಪಾಲಿಟಿ ಅಧ್ಯಕ್ಷನೂ ಅವರಷ್ಟು ಕೀಳುಮಟ್ಟಕ್ಕೆ‌ ಇಳಿದು ಹೇಳಿಕೆ ನೀಡುವುದಿಲ್ಲ. ಈ ಚುನಾವಣೆಯಲ್ಲಿ ಅವರು ಅಭ್ಯರ್ಥಿಯಾಗಿ ಉಳಿಯಲು ಅರ್ಹರಲ್ಲ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಚುನಾವಣಾ ಆಯೋಗವು ಅವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸದೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅವರನ್ನು ಅನರ್ಹಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಮೋದಿ ಅವರು ಹಸಿ ಸುಳ್ಳುಗಳನ್ನು ಹೇಳುವ ಮೂಲಕ ಅವರ ಅಭಿಮಾನಿಗಳೂ ತಲೆ ತಗ್ಗಿಸುವ ರೀತಿ ಮಾಡಿದ್ದಾರೆ. 135 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷವನ್ನು ಮಾವೊವಾದಿ ಎಂದು ಟೀಕಿಸಿದ್ದಾರೆ. ತಾಳಿ ಕಸಿಯುತ್ತಾರೆ, ಆಸ್ತಿ ಕಿತ್ತುಕೊಳ್ಳುತ್ತಾರೆ ಎಂದು ಸುಳ್ಳು ಹೇಳಿದ್ದಾರೆ’ ಎಂದರು.

‘ತಾಳಿಭಾಗ್ಯ ನೀಡಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ ಬದುಕು ಕಟ್ಟಿಕೊಟ್ಟಿದ್ದು ಕಾಂಗ್ರೆಸ್. ನಮ್ಮ ಪಕ್ಷ ಜನಕಲ್ಯಾಣದಲ್ಲಿ ತೊಡಗಿದೆ. ಎಂದೂ ತಾಳಿ ಕಿತ್ತುಕೊಳ್ಳುವ ಕೆಲಸ ಮಾಡುವುದಿಲ್ಲ’ ಎಂದು ಹೇಳಿದರು.

‘ಮೋದಿ ಅವರು ಭಾರತ ಮಾತೆಗೆ ಜೈ ಎಂದು ಹೇಳುತ್ತಾ ಅವಳ ಆಭರಣಗಳಾದ ರೈಲ್ವೆ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿಗಳು, ಕ್ರೀಡಾಂಗಣಗಳನ್ನು ಒಂದೊಂದಾಗಿ ಕಿತ್ತುಕೊಂಡು ಅದಾನಿ, ಅಂಬಾನಿ, ವಿಜಯ್ ಮಲ್ಯ, ಗುಜರಾತಿನ ವಜ್ರದ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ’ ಎಂದು ಟೀಕಿಸಿದರು.

‘ಕಾಂಗ್ರೆಸ್‌ನ ಜನಪರ ಕಾರ್ಯಕ್ರಮಗಳಿಂದಾಗಿ ಅವರ ತಳ ಅಲುಗಾಡುತ್ತಿದೆ. ಅದಕ್ಕಾಗಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದರು.

‘ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ನಡೆಸಿದರು. ನಾವು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದೇವೆ. ಆದರೆ, ಮೋದಿ ಅವರು ನಮ್ಮ ಗ್ಯಾರಂಟಿ ಕಾರ್ಡ್ ಹಿಡಿದು ಓಡಾಡುತ್ತಿದ್ದರೆ. ಅವರಿಗೆ ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

‘ಒಕ್ಕೂಟ ವ್ಯವಸ್ಥೆಯನ್ನು ಗೌರವಿಸದೆ ಬರ ಪರಿಹಾರ ಬಿಡುಗಡೆ ಮಾಡಲು ಸತಾಯಿಸಿದರು. ಹೀಗಾಗಿ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಈಗ ಸುಪ್ರೀಂ ಕೋರ್ಟ್ ಸರಿಯಾಗಿ ಮಂಗಳಾರತಿ ಮಾಡಿದೆ’ ಎಂದರು.

‘ಕೇಂದ್ರ ಸರ್ಕಾರ ಮೊದಲೇ ಬರ ಪರಿಹಾರ ನೀಡಿದ್ದರೆ ಬರದಿಂದ ಕಂಗೆಟ್ಟಿರುವ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ, ಜನರಿಗೆ ನೋವು ಕೊಟ್ಟು ಖುಷಿ ಪಡುವುದು ಅವರ ಮನಸ್ಥಿತಿ. ಅವರು ರಾಜ್ಯದ ಜನರ ಮತ ಕೇಳುವ ನೈತಿಕತೆ ಕಳೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಸಂಪೂರ್ಣ ವಿಶ್ವಾಸ ಇಲ್ಲ’

ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಚುನಾವಣಾ ಆಯೋಗ, ಅವರಿಗೆ ನೋಟಿಸ್‌ ನೀಡಿ ಕ್ರಮ ಕೈಗೊಳ್ಳುತ್ತದೆ ಎಂಬ ಬಗ್ಗೆ ಸಂಪೂರ್ಣ ವಿಶ್ವಾಸ ಇಲ್ಲ. ಜನ ಎಲ್ಲವನ್ನೂ ಗಮನಿಸುತ್ತಾರೆ ಎಂಬ ಭಯದಲ್ಲಿ ಆಯೋಗ ಕೆಲಸ ಮಾಡಬೇಕು ಎಂದು ಎಚ್‌.ಕೆ.ಪಾಟೀಲ ಹೇಳಿದರು.

ಆಯೋಗ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದರೆ ಮೋದಿ ತಪ್ಪು ಮಾಡಿದ್ದಾರೆ ಎಂದರ್ಥ. 24 ಗಂಟೆಯೊಳಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆಯೋಗದ ವಿರುದ್ಧ ದೂರು ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT