ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್‌ನಲ್ಲಿ ಕಾಣದ ಶೆಟ್ಟರ್ ಚಿತ್ರ

ತೋಳನಕೆರೆ ಅಭಿವೃದ್ಧಿ: ಬೆಂಬಲಿಗರ ಅಸಮಾಧಾನ, ಗರಿಗೆದರಿದ ಚರ್ಚೆ
Last Updated 24 ಸೆಪ್ಟೆಂಬರ್ 2022, 5:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ತೋಳನಕೆರೆಅಭಿವೃದ್ಧಿ ವಿಷಯವು ಬಿಜೆಪಿಯಲ್ಲಿ ಕ್ರೆಡಿಟ್ ವಾರ್‌ಗೆ ಕಾರಣವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಆಕರ್ಷಕವಾಗಿ ಅಭಿವೃದ್ಧಿಗೊಂಡಿರುವ ಕೆರೆ ಉದ್ಘಾಟನೆಗೆ ಸಿದ್ಧವಾಗಿದ್ದು, ಪ್ರವೇಶ ದ್ವಾರದಲ್ಲಿ ಇತ್ತೀಚೆಗೆ ಅಳವಡಿಸಿರುವ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಫ್ಲೆಕ್ಸ್‌ ಇಂತಹದ್ದೊಂದು ಚರ್ಚೆ ಹುಟ್ಟು ಹಾಕಿದೆ.

‘ಸಂಸದರು ಹಾಗೂ ಶಾಸಕರ ವಿಶೇಷ ಆಸಕ್ತಿ ಪ್ರಯತ್ನದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ತೋಳನಕೆರೆ ಅಭಿವೃದ್ಧಿ’ ಎಂಬ ಬರಹವಿರುವ ಫ್ಲೆಕ್ಸ್‌ನಲ್ಲಿ ಸೆಂಟ್ರಲ್ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ್ ಚಿತ್ರವಿಲ್ಲದಿರುವುದು, ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ವಾಟ್ಸ್‌ಆ್ಯಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ಚರ್ಚೆ ಜೋರಾಗಿದೆ. ಕೆರೆಗೆ ಹೊಸ ರೂಪ ನೀಡುವಲ್ಲಿ ಶೆಟ್ಟರ್ ಕೊಡುಗೆ ಹೆಚ್ಚು ಎಂದು ವಾದಿಸುತ್ತಿರುವ ಅವರ ಅಭಿಮಾನಿಗಳು, ಫ್ಲೆಕ್ಸ್‌ನಲ್ಲಿ ಚಿತ್ರ ಹಾಕದಿರುವುದು ಬಣಜಿಗ ಸಮುದಾಯದ ನಾಯಕನನ್ನು ತುಳಿಯುವ ತಂತ್ರವಾಗಿದೆ ಎಂದು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಕೆಲ ನಾಯಕರು ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆರೆ ನಿರ್ಮಾತೃ: ‘ಶೆಟ್ಟರ್ ಸಾಹೇಬರ ಚಿತ್ರವಿಲ್ಲದ ಫ್ಲೆಕ್ಸ್ ಹಾಕಿದ್ದು ತಪ್ಪು. ಕೆರೆ ಅಭಿವೃದ್ಧಿಗಾಗಿ ಅವರು ಹೆಚ್ಚಿನ ಮುತುವರ್ಜಿ ವಹಿಸಿ, ಅನುದಾನ ತಂದಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಚರ್ಚಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಶೆಟ್ಟರ್ ಅವರೇ ಕೆರೆಯ ನಿರ್ಮಾತೃ’ ಎಂದು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಹಾಗೂ ಪಾಲಿಕೆಯ 41ನೇ ವಾರ್ಡ್ ಸದಸ್ಯ ಸಂತೋಷ ಚವಾಣ ತಿಳಿಸಿದರು.

‘ಕೆರೆ ಅಭಿವೃದ್ಧಿಯಲ್ಲಿ ಶೆಟ್ಟರ್ ಅವರ ಪಾತ್ರ ದೊಡ್ಡದು. ಫ್ಲೆಕ್ಸ್‌ನಲ್ಲಿ ಅವರ ಚಿತ್ರ ಕೈಬಿಟ್ಟಿರುವುದು ಮಾಜಿ ಮುಖ್ಯಮಂತ್ರಿಗೆ ಮಾಡಿದ ಅವಮಾನವಾಗಿದೆ’ ಎಂದು ಬಿಜೆಪಿ ಮುಖಂಡ ಸಿದ್ದು ಮೊಗಲಿಶೆಟ್ಟರ್ ಬೇಸರ ವ್ಯಕ್ತಪಡಿಸಿದರು.

‘ಸ್ಥಳೀಯ ಶಾಸಕರ ಚಿತ್ರ ಸಾಮಾನ್ಯ’

‘ಆಯಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರು ಮತ್ತು ಸಂಸದರ ಭಾವಚಿತ್ರ ಹಾಕುವುದು ಸಾಮಾನ್ಯ. ಅದರಂತೆ, ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವ ತೋಳನಕೆರೆ ಅಭಿವೃದ್ಧಿಯ ಫ್ಲೆಕ್ಸ್ ಹಾಕಲಾಗಿದೆ. ಬಹುಶಃ ಸ್ಮಾರ್ಟ್ ಸಿಟಿಯವರೇ ಹಾಕಿಸಿರುತ್ತಾರೆ. ಇದು ಚರ್ಚಾರ್ಹ ವಿಷಯವೇ ಅಲ್ಲ. ಶೆಟ್ಟರ್ ಸಾಹೇಬರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಕೆಲವರು ಅನಗತ್ಯ ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದಾರೆ’ ಎಂದು ಪಶ್ಚಿಮ ವಿಧಾನಸಭಾ ಕ್ಷೇತ್ರದ ಅರವಿಂದ ಬೆಲ್ಲದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಶೆಟ್ಟರ್ ಅವರಿಗೆ ಕರೆ ಮಾಡಿದಾಗ, ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT