ಗುರುವಾರ , ನವೆಂಬರ್ 14, 2019
19 °C
ಮಾಜಿ ಮೇಯರ್ ಮೋಹನ ಏಕಬೋಟೆ ರಸ್ತೆ ಉದ್ಘಾಟನೆ

‘ಸ್ನೇಹಶೀಲ ವ್ಯಕ್ತಿತ್ವದ ಏಕಬೋಟೆ’

Published:
Updated:

ಹುಬ್ಬಳ್ಳಿ: ‘ಪಾಲಿಕೆಯ ಮಾಜಿ ಮೇಯರ್ ಮೋಹನ ಏಕಬೋಟೆ ಅವರದು ಸ್ನೇಹಶೀಲ ವ್ಯಕ್ತಿತ್ವ. ಹಿರಿಯ–ಕಿರಿಯರೆನ್ನದೆ ಎಲ್ಲರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದರು’ ಎಂದು ಸಚಿವ ಜಗದೀಶ ಶೆಟ್ಟರ್ ಬಣ್ಣಿಸಿದರು.

ನಗರದ ಹೊಸೂರಿನಲ್ಲಿ ಭಾನುವಾರ ಮೋಹನ ಏಕಬೋಟೆ ರಸ್ತೆ ( ಹೊಸೂರಿನಿಂದ ಕಾಟನ್‌ ಮಾರ್ಕೆಟ್‌ಗೆ ಸಂಪರ್ಕಿಸುವ ರಸ್ತೆ) ಉದ್ಘಾಟನೆ ಹಾಗೂ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕೀಯವಷ್ಟೇ ಅಲ್ಲದೆ ಸಾಹಿತ್ಯ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದ ಏಕಬೋಟೆ ಅವರ ಬಳಗ ದೊಡ್ಡದಾಗಿತ್ತು’ ಎಂದರು.

‘ರಾಜಕೀಯ ಜೀವನದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ ಅವರು, ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೋಗಿದ್ದಾರೆ. ಇದೀಗ ಅವರ ಹೆಸರಿನಲ್ಲಿ ರಸ್ತೆಯನ್ನು ಉದ್ಘಾಟಿಸಿರುವುದು ಗೌರವ ಸೂಚಕವಾಗಿದೆ’ ಎಂದು ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಒಂದು ಬಾರಿಯಷ್ಟೇ ಪಾಲಿಕೆ ಸದಸ್ಯರಾಗಿ ಮೇಯರ್‌ ಹುದ್ದೆಗೇರಿದವರು ಏಕಬೋಟೆ. ಉತ್ತಮ ಆಡಳಿತಗಾರ ಹಾಗೂ ಮೌಲ್ಯಯುತ ರಾಜಕಾರಣಿಯಾಗಿದ್ದ ಅವರು, ಕೊಟ್ಟ ಮಾತಿನಂತೆ ಒಮ್ಮೆಯಷ್ಟೇ ಪಾಲಿಕೆ ಚುನಾವಣೆಗೆ ನಿಂತು ಗೆದ್ದರು. ಮತ್ತೊಮ್ಮೆ ಸ್ಪರ್ಧಿಸದೆ ಬೇರೆಯವರಿಗೆ ಅವಕಾಶ ಕೊಟ್ಟರು’ ಎಂದು ನೆನೆದರು.

‘ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಅವರು, ಜಟಿಲ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಲ್ಲವರಾಗಿದ್ದರು. ಸಾಮಾಜಿಕ ಸಾಮರಸ್ಯಕ್ಕಾಗಿ ಶ್ರಮಿಸುತ್ತಿದ್ದ ಅವರದು ಪ್ರಾಮಾಣಿಕ ವ್ಯಕ್ತಿತ್ವವಾಗಿತ್ತು’ ಎಂದರು.

ಮೋಹನ ಏಕಬೋಟೆ ಚಾರಿಟೇಬಲ್ ಟ್ರಸ್ಟ್‌ನ ವೆಬ್‌ಸೈಟ್‌ ಅನ್ನು ಅತಿಥಿಗಳು ಉದ್ಘಾಟಿಸಿದರು. ಟ್ರಸ್ಟಿ ಹಾಗೂ ಏಕಬೋಟೆ ಅವರ ಮಗ ಶಶಾಂಕ ಏಕಬೋಟೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡರಾದ ಪಾಂಡುರಂಗ ಪಾಟೀಲ, ಚಂದ್ರಕಾಂತ ಭಂಡಾರೆ, ರವಿ ನಾಯಕ್ ಇದ್ದರು.

ಪ್ರತಿಕ್ರಿಯಿಸಿ (+)