ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ನಿಯಂತ್ರಣಕ್ಕೆ ಬಾರದ ಸೊಳ್ಳೆಗಳ ಕಾಟ

ತಾಪಮಾನ ಏರಿಕೆಯಾದರೂ ಕಡಿಮೆಯಾಗದ ಸಮಸ್ಯೆ
Published 19 ಫೆಬ್ರುವರಿ 2024, 5:35 IST
Last Updated 19 ಫೆಬ್ರುವರಿ 2024, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಜನರು ಕಿರಿಕಿರಿ ಅನುಭವಿಸುವಂತಾಗಿದೆ. ವಾತಾವರಣದಲ್ಲಿ ತಾಪಮಾನ ಹೆಚ್ಚಳದಿಂದ ಸೊಳ್ಳೆಗಳ ಹಾವಳಿ ಕಡಿಮೆಯಾಗುವ ನಿರೀಕ್ಷೆ ಹುಸಿಯಾಗಿದೆ.  ಈ ವರ್ಷ ಸಮರ್ಪಕವಾಗಿ ಮಳೆಯಾಗಿಲ್ಲ. ಸಣ್ಣಪುಟ್ಟ ಹೊಂಡಗಳಲ್ಲಿ, ತಗ್ಗುದಿಣ್ಣೆಗಳಲ್ಲಿ ನೀರು ನಿಲ್ಲುವ ಪ್ರಮೇಯವೂ ಬಂದಿಲ್ಲ. ಆದರೂ ಸೊಳ್ಳೆಗಳ ಹಾವಳಿ ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ.

ಬಸ್‌ನಿಲ್ದಾಣ, ರೈಲು ನಿಲ್ದಾಣದಂತಹ ಸಾರ್ವಜನಿಕ ಸ್ಥಳಗಳಲ್ಲಿ ಸೊಳ್ಳೆಗಳ ಕಾಟ ಕೊಂಚ ಜಾಸ್ತಿಯೇ ಇದೆ. ಸೊಳ್ಳೆ‌ ಕಡಿತದಿಂದ ಕೈ, ಕಾಲು ಸವರಿಕೊಳ್ಳುತ್ತಲೇ ನಿಲ್ಲಬೇಕಾಗುತ್ತದೆ. ಕಸದ ರಾಶಿಗಳಲ್ಲಿ, ಚರಂಡಿಗಳಲ್ಲಿ, ಮರದ ಪೊಟರೆಗಳಲ್ಲಿ,  ದಿನಬಳಕೆಯಾಗದೆ ಸಂಗ್ರಹಿಸಿಟ್ಟ ವಸ್ತುಗಳಲ್ಲಿ, ಹಾಸಿಗೆ ಹೊದಿಕೆಗಳಲ್ಲಿ, ಜಾನುವಾರುಗಳಿರುವ ಕಡೆಗಳಲ್ಲಿ ಸೊಳ್ಳೆಗಳು ಗುಂಪಾಗಿ ಹಾರಾಡುವುದು ಕಾಣುತ್ತದೆ.

ಹುಬ್ಬಳ್ಳಿಯ ಚರಂಡಿಗಳಲ್ಲಿ ತುಂಬಿದ ಹೂಳನ್ನು ನಿಯಮಿತವಾಗಿ ತೆರವುಗೊಳಿಸದ ಕಾರಣ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ

ಹುಬ್ಬಳ್ಳಿಯ ಚರಂಡಿಗಳಲ್ಲಿ ತುಂಬಿದ ಹೂಳನ್ನು ನಿಯಮಿತವಾಗಿ ತೆರವುಗೊಳಿಸದ ಕಾರಣ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಮಾರ್ಪಟ್ಟಿವೆ

ಜನವಸತಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡರೂ ಸೊಳ್ಳೆಗಳ ನಿಯಂತ್ರಣ ಅಸಾಧ್ಯ ಎನ್ನುವಂತಾಗಿದೆ. ಮನೆ ಪಕ್ಕದಲ್ಲಿ ತೆರೆದ ಚರಂಡಿ ಇದ್ದಿರುವ ಕಡೆಗಳಲ್ಲಿ ಹಗಲಿರುಳು ಬಾಗಿಲು, ಕಿಟಕಿ ಭದ್ರ ಮಾಡಿಕೊಂಡಿರಬೇಕಾದ ಅನಿವಾರ್ಯತೆ ಇದೆ.

ರಾಜಕಾಲುವೆಗೆ ಹೊಂದಿಕೊಂಡಿರುವ ಬಡಾವಣೆಗಳಲ್ಲಿ, ಬಡವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಕೊಳೆಗೇರಿಗಳಲ್ಲಿ ಸೊಳ್ಳೆಗಳ ಉಪಟಳದಿಂದ ಜನರು ನೆಮ್ಮದಿಯಿಂದ ನಿದ್ರೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ.

'ಬೇಸಿಗೆಯಲ್ಲಿ ಸೊಳ್ಳೆಗಳು ಕಡಿಮೆ ಆಗಬಹುದು ಅಂದುಕೊಂಡಿದ್ದೇವು. ಆದರೆ ಸೊಳ್ಳೆಗಳು ಹೆಚ್ಚಾಗುತ್ತಿವೆ. ಏನೂ ಮಾಡಬೇಕು ತಿಳಿಯದಾಗಿದೆ. ಆರೋಗ್ಯ ಇಲಾಖೆಯವರು ಮತ್ತು ಮಹಾನಗರ ಪಾಲಿಕೆಯವರು ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಈಗ ಏನಾದರೂ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು.‌ ಇದುವರೆಗೂ ಯಾವ ಕ್ರಮ ಕೈಗೊಂಡಿದ್ದು ಅಥವಾ‌ ಸೊಳ್ಳೆಗಳ ವಿಷಯವಾಗಿ ಹುಬ್ಬಳ್ಳಿಯ ಜನರಿಗೆ ಸಲಹೆ/ಸೂಚನೆ ಕೊಡುವ ಕೆಲಸ ಮಾಡಿಲ್ಲ' ಎಂದು ಹುಬ್ಬಳ್ಳಿ ಚೈತನ್ಯ ನಗರದ ನಿವಾಸಿ ಅಶೋಕ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚುವರಿ ವೆಚ್ಚ:

ಸೊಳ್ಳೆ ಹಾವಳಿಯಿಂದ ಪಾರಾಗಲು ಜನರು ಹೆಚ್ಚುವರಿ ಹಣ ಖರ್ಚು ಮಾಡುವ ಅನಿವಾರ್ಯತೆ ಇದೆ. ಸೊಳ್ಳೆ ಕಾಯಿಲ್, ಸೊಳ್ಳೆ ಬತ್ತಿ, ಸೊಳ್ಳೆ ಹೊಡೆಯುವ ಬ್ಯಾಟ್, ಸೊಳ್ಳೆ ಪರಧೆ ಸೇರಿದಂತೆ ಸೊಳ್ಳೆ ನಿಯಂತ್ರಣಕ್ಕೆ ಇನ್ನೂ ಹಲವು ಪರಿಕರಗಳು ಈಗ ಹೆಚ್ಚು ಮಾರಾಟ ಆಗುತ್ತಿವೆ.

ಹುಬ್ಬಳ್ಳಿಯಲ್ಲಿ ಹಲವು ವರ್ಷಗಳಿಂದ ಅಪೂರ್ಣ ಕಾಮಗಾರಿಗಳು ರಾಜಾಜಿಸುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿವೆ. ಜಗದೀಶ ನಗರದಲ್ಲಿ ಅಪೂರ್ಣ ರಸ್ತೆ ಕಾಮಗಾರಿಯ ನೋಟ ಇದು

ಹುಬ್ಬಳ್ಳಿಯಲ್ಲಿ ಹಲವು ವರ್ಷಗಳಿಂದ ಅಪೂರ್ಣ ಕಾಮಗಾರಿಗಳು ರಾಜಾಜಿಸುತ್ತಿದ್ದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿವೆ. ಜಗದೀಶ ನಗರದಲ್ಲಿ ಅಪೂರ್ಣ ರಸ್ತೆ ಕಾಮಗಾರಿಯ ನೋಟ ಇದು

ಮನೆ ಬಳಕೆಗೆ ಸಂತೆ ಮಾಡುವ ವಸ್ತುಗಳಲ್ಲಿ ಇವು ಸೇರಿಕೊಂಡಿವೆ. ಸೊಳ್ಳೆ ಓಡಿಸಲು ಕಾಯಂ ಪರಿಹಾರ ಎನ್ನುವುದು ಇಲ್ಲದಾಗಿದೆ.  ಸೊಳ್ಳೆಗಳ ಹಾವಳಿ ತಪ್ಪಿಸಲು ಬಡ ಹಾಗೂ ಮಧ್ಯಮವರ್ಗದ ಜನರು ಮೇಲಿಂದ ಮೇಲೆ ಖರ್ಚು ಮಾಡುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ನೆಮ್ಮದಿಯಿಂದ ನಿದ್ರೆ ಮಾಡಲಾಗದೆ ಅನಾರೋಗ್ಯ ಸಮಸ್ಯೆಗೂ ಈಡಾಗುತ್ತಿದ್ದಾರೆ.

ಪೂರಕ ವರದಿಗಳು:

ಧನ್ಯಪ್ರಸಾದ ಬಿ.ಜೆ.,

ಬಸನಗೌಡ ಪಾಟೀಲ

ಹೆಚ್ಚಿದ ಅನಾರೋಗ್ಯ ಸಮಸ್ಯೆ
ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲೂ ಸೊಳ್ಳೆಗಳ ಕಡಿತದ ಸಮಸ್ಯೆ ಇದೆ. ಉದ್ಯಾನ ಹಾಗೂ ಹುಲ್ಲುಹಾಸು ಮಾಡಿಕೊಂಡಿರುವ ಆಸ್ಪತ್ರೆಗಳಲ್ಲಿ ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಬಾರದಾಗಿದೆ. ಸೊಳ್ಳೆ ಕಡಿತದಿಂದ ಕೊಳೆಗೇರಿಗಳ ಜನರು ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಶಂಕಿತ ಡೆಂಗಿಜ್ವರದ ಸಮಸ್ಯೆಗೆ ಚಿಕಿತ್ಸೆ ಪಡೆಯುವುದಕ್ಕೆ ಕಿಮ್ಸ್‌ಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.‌ ’ಜ್ವರ ಹಾಗೂ ಇತರೆ ಸಮಸ್ಯೆಯಿಂದ ಬಳಲುತ್ತಿರುವ ಜನರು ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಡೆಂಗಿ ಪತ್ತೆಯಾಗಿಲ್ಲ. ಆದರೆ, ನಿಯಮಿತವಾಗಿ ಪರೀಕ್ಷೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ‘ ಎಂದು ಕಿಮ್ಸ್‌ ನಿರ್ದೇಶಕ ಡಾ.ಎಫ್‌.ಎಸ್‌.ಕಮ್ಮಾರ ’ಪ್ರಜಾವಾಣಿ’ಗೆ ತಿಳಿಸಿದರು.

ಕ್ರಮವಹಿಸದ ಮಹಾನಗರ ಪಾಲಿಕೆ

ಸೊಳ್ಳೆ ಹಾವಳಿ ವಿಪರೀತ ಆಗಿದ್ದರೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ಸಾಮಾನ್ಯ ದಿನಗಳಲ್ಲಿ ಅನುಸರಿಸುವ ಕ್ರಮಗಳನ್ನೇ ಮುಂದುವರಿಸಿದ್ದಾರೆ. ಕೊಳೆಗೇರಿಗಳಲ್ಲಿರುವ ಚರಂಡಿಗಳಿಗೆ ಮಾತ್ರ ಆಗಾಗ ಫಾಗಿಂಗ್ ಮಾಡುತ್ತಿದ್ದಾರೆ. ಆದರೆ ಸಮಗ್ರವಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸುತ್ತಿಲ್ಲ.

ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ವಹಿಸಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕರಿಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ. ಮಹಾನಗರ ಪಾಲಿಕೆಯಲ್ಲಿ ಎಷ್ಟು ಫಾಗಿಂಗ್‌ ಯಂತ್ರಗಳಿವೆ? ಎಷ್ಟು ದಿನಕ್ಕೊಮ್ಮೆ ಫಾಗಿಂಗ್‌ ಮಾಡಲಾಗುತ್ತಿದೆ? ಎಷ್ಟು ಸಿಬ್ಬಂದಿ ನಿಯೋಜಿಸಲಾಗಿದೆ ಎಂಬುದರ ಬಗ್ಗೆ ಯಾವ ಅಧಿಕಾರಿಗೂ ಗೊತ್ತಿಲ್ಲ.

’ಫಾಗಿಂಗ್‌ ಯಂತ್ರಗಳನ್ನು ಖರೀದಿಸಿ, ರಾಸಾಯನಿಕ ಸಿಂ‍ಪರಣೆಗೆ ಕ್ರಮ ಕೈಗೊಳ್ಳುವುದಕ್ಕೆ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿಗಳಿಗೆ ಸೂಚನೆ ನೀಡಲಾಗಿದೆ. ಪ್ರತಿದಿನವೂ ಫಾಗಿಂಗ್‌ ಮಾಡುವ ಚಿತ್ರಗಳನ್ನು ಕಳಿಸುತ್ತಿದ್ದಾರೆ‘ ಎನ್ನುವುದು ಪಾಲಿಕೆ ಆಯುಕ್ತರ ಕಚೇರಿಯ ಸಿಬ್ಬಂದಿ ವಿವರಣೆ. ಕೊಳೆಗೇರಿಗಳಲ್ಲಿ ಈ ಬಗ್ಗೆ ವಿಚಾರಿಸಿದಾಗ ಫಾಗಿಂಗ್‌ ಮಾಡಿಲ್ಲ ಎನ್ನುವ ಪ್ರತಿಕ್ರಿಯೆ ಇದೆ.

ಲಾರ್ವಾ ಸರ್ವೇಗೆ ಸಿಮೀತ

ಜಿಲ್ಲಾ ಸರ್ವಲನ್ಸ್‌ ಇಲಾಖೆ (ಡಿಎಸ್‌ಒ) ಸೊಳ್ಳೆಗಳ ಹಾವಳಿ ಬಗ್ಗೆ ಅಧ್ಯಯನ ನಡೆಸಿ, ವಹಿಸಬೇಕಾದ ಕ್ರಮಗಳ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಬೇಕಿತ್ತು. ಆದರೆ, ಮಳೆಗಾಲ ಮುಗಿದ ಬಳಿಕ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೈಗೊಂಡಿದ್ದ ಲಾರ್ವಾ ಸಮೀಕ್ಷೆ ಮತ್ತು ಮೀನು ಬಿಡುವ ಕಾರ್ಯಕ್ರಮದ ವರದಿಯನ್ನೇ ಈಗಲೂ ಹೇಳುತ್ತಿದ್ದಾರೆ. ಈಗ ಹೆಚ್ಚಾಗಿರುವ ಸೊಳ್ಳೆಗಳ ಹಾವಳಿ ಬಗ್ಗೆ ಆರೋಗ್ಯ ಇಲಾಖೆ ಕೂಡಾ ಕ್ರಮಕ್ಕೆ ಮುಂದಾಗುತ್ತಿಲ್ಲ.

ಧಾರವಾಡದ ನೆಹರುನಗರದ, ಬಾವಿಕಟ್ಟಿ ಪ್ಲಾಟ್‌ನ ಕೊಳಕು ಸೇರುವ ಕೆಲಗೇರಿ ಕೆರೆ ಪ್ರದೇಶವು ಸೊಳ್ಳೆಗಳ ತಾಣವಾಗಿದೆ

ಧಾರವಾಡದ ನೆಹರುನಗರದ, ಬಾವಿಕಟ್ಟಿ ಪ್ಲಾಟ್‌ನ ಕೊಳಕು ಸೇರುವ ಕೆಲಗೇರಿ ಕೆರೆ ಪ್ರದೇಶವು ಸೊಳ್ಳೆಗಳ ತಾಣವಾಗಿದೆ

6 ತಿಂಗಳಿಗೊಮ್ಮೆ ಫಾಗಿಂಗ್‌!

ಕುಂದಗೋಳ: ’ಆರು ತಿಂಗಳ ಹಿಂದೆ ಫಾಗಿಂಗ್ ಮಾಡಿದ್ದು ಕಳೆದ ವಾರದಲ್ಲೋಮ್ಮೆ ಫಾಗಿಂಗ್ ಮಾಡಿದ್ದೇವೆ. ಫಾಗಿಂಗ್ ಮಷೀನ್ ರಿಪೇರಿ ಇದ್ದು ಸರ್ಕಾರಿ ಆಸ್ಪತ್ರೆಯ ಫಾಗಿಂಗ್ ಮಷೀನ್ ಬಳಸಿಕೊಂಡಿದ್ದೇವೆ. ಪಟ್ಟಣದಲ್ಲಿ 19 ವಾರ್ಡ್ ಇದ್ದು ಸ್ವಚ್ಛತಾ ಸಿಬ್ಬಂದಿಯ ಕೊರತೆಯಿದೆ. ವಾರಕ್ಕೊಮ್ಮೆ ಚರಂಡಿ ಕ್ಲಿನ್ ಮಾಡಿ ಮೇಲಾಥಿನ್ ಪೌಡರ್ ಸಿಂಪಡಣೆ ಮಾಡುತ್ತೇವೆ. ಜನರು ಸ್ವಚ್ಛತೆ ಕಾಪಾಡುವಲ್ಲಿ ಸಹಕರಿಸುತ್ತಿಲ್ಲ. ಅದರಿಂದ ಅಲ್ಲಲ್ಲಿ ಸೊಳ್ಳೆಯ ಸಂಖ್ಯೆ ಜಾಸ್ತಿ ಆಗಿರಬಹುದು’ ಎಂದು ಕುಂದಗೋಳ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕಿ ಜಾನಕಿ ಮ.ಬಳ್ಳಾರಿ ತಿಳಿಸಿದರು.

‘ಸೊಳ್ಳೆ ಪರದೆ ಬಳಸಿ’

ಧಾರವಾಡ: ನಗರದ ನೆಹರುನಗರ, ಕೋಳಿಕೆರೆ ಪ್ರದೇಶ, ಜನ್ನತ್‌ ನಗರ ಸಹಿತ ಸೊಳ್ಳೆಗಳ ಹಾವಳಿ ಸಮಸ್ಯೆ ಇದೆ. ಸೊಳ್ಳೆ ಸಮಸ್ಯೆ ನಿಯಂತ್ರಣ ನಿಟ್ಟಿನಲ್ಲಿ ಪಾಲಿಕೆ ಗಮನ ಹರಿಸಿದೆ. ಕೆಲವೆಡೆ ಫಾಗಿಂಗ್‌ ಮಾಡಿಸಲಾಗಿದೆ. ಮಲಗುವಾಗ ಸೊಳ್ಳೆ ಪರದೆ ಬಳಸುವಂತೆ, ಮನೆ ಸುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವಂತೆ ಜಾಗೃತಿ ಮೂಡಿಸಲಾಗತ್ತಿದೆ. ‘ಲಕ್ಷ್ಮಿಸಿಂಗನಕಕೆರೆ, ಸರಸ್ವತಿಪುರಂ, ನೆಹರುಗನರ ಮೊದಲಾದ ಕಡೆಗಳಲ್ಲಿ ಫಾಗಿಂಗ್‌ ಮಾಡಿಸಲಾಗಿದೆ. ಪವನಗಿರಿ, ಜಯನಗರ ಕೆರೆ ಭಾಗದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ರಸ್ತೆ ಬದಿಯಲ್ಲಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ. ಧಾರವಾಡದಲ್ಲಿ 80 ಕಡೆಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸಲಾಗಿದೆ. ಸ್ವಚ್ಛತೆಗೆ ಒತ್ತು ನೀಡಲಾಗಿದೆ’ ಎಂದು ಪಾಲಿಕೆ ಪರಿಸರ ಎಂಜಿನಿಯರ್‌ ಫರೀದಾ ನದಾಫ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸೊಳ್ಳೆ ಹಾವಳಿ ನಿಯಂತ್ರಿಸಲು ಪಾಲಿಕೆಯಿಂದ ಫಾಗಿಂಗ್ ಮಾಡಿಸುವ ವ್ಯವಸ್ಥೆ ಅನುಸರಿಸಲಾಗಿದೆ. ಇದಕ್ಕಾಗಿ ವಲಯವಾರು ಸಿಬ್ಬಂದಿಗೆ ಸೂಚಿಸಲಾಗಿದೆ
ಈಶ್ವರ ಉಳ್ಳಾಗಡ್ಡಿ,ಹು-ಧಾ ಪಾಲಿಕೆ ಆಯುಕ್ತ
ಎಲ್ಲಿಂದ ಸೊಳ್ಳೆಗಳು ಬರುತ್ತಿವೆ ಎನ್ನುವುದೇ ತಿಳಿಯುತ್ತಿಲ್ಲ. ಮನೆಯೊಳಗೆ ಮತ್ತು ಸುತ್ತಮುತ್ತ ಸ್ವಚ್ಛತೆ ಇದ್ದರೂ ಸೊಳ್ಳೆ ಬರುತ್ತಿವೆ
ವೆಂಕಟೇಶ ಕುಲಕರ್ಣಿ, ವಿದ್ಯಾನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT