ಎಲ್‌ಪಿಜಿ ಸಬ್ಸಿಡಿ ಬಿಟ್ಟಿದ್ದಕ್ಕೆ ₹ 33 ಸಾವಿರ ಕೋಟಿ ಉಳಿತಾಯ

7
ಎಸ್‌ಎಸ್‌ಕೆ ಪಂಚಕಮಿಟಿ ಸದಸ್ಯರನ್ನು ಭೇಟಿಯಾದ ಸಂಸದ ಜೋಶಿ

ಎಲ್‌ಪಿಜಿ ಸಬ್ಸಿಡಿ ಬಿಟ್ಟಿದ್ದಕ್ಕೆ ₹ 33 ಸಾವಿರ ಕೋಟಿ ಉಳಿತಾಯ

Published:
Updated:
ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ವಿವರಿಸುವ ಪುಸ್ತಕವನ್ನು ಸಂಸದ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು. ವಿಠ್ಠಲ ಲದವಾ, ಯಲ್ಲಪ್ಪ ‍ಪವಾರ, ಗಜಾನನ ಕಾಟವೆ, ನಾಗೇಶ ಕಲಬುರ್ಗಿ, ಡಿ.ಕೆ. ಚವ್ಹಾಣ ಇದ್ದಾರೆ

ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಮನವಿಗೆ ಸ್ಪಂದಿಸಿ ಉಳ್ಳವರು ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದಕ್ಕೆ ₹ 33 ಸಾವಿರ ಕೋಟಿ ಉಳಿತಾಯವಾಗಿದ್ದು, ಅದನ್ನೇ ಪ್ರಧಾನಮಂತ್ರಿಯವರು 6 ಕೋಟಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಲು ಬಳಸಿದ್ದಾರೆ’ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ಕಮರಿಪೇಟೆಯಲ್ಲಿ ಶುಕ್ರವಾರ ಎಸ್‌ಎಸ್‌ಕೆ ಸಮಾಜದ ಪಂಚಕಮಿಟಿ ಮುಖಂಡರನ್ನು ಭೇಟಿಯಾಗಿ ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ವಿವರಿಸಿ ಅವರು ಮಾತನಾಡಿದರು. ‘ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಡಿಪಿ ದರ ಏರಿಕೆಯಾಗಿದೆ. ಹಣದುಬ್ಬರವೂ ನಿಯಂತ್ರಣದಲ್ಲಿದೆ. ಹಿಂದಿನ ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳುವುದೇ ಗೊತ್ತಿರಲಿಲ್ಲ. ಆದರೆ, ಮೋದಿ ಸರ್ಕಾರ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ನಿರ್ಧಾರ ತೆಗೆದುಕೊಳ್ಳುತ್ತಿದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದ್ದಲ್ಲದೇ ಬೇರೆ ದೇಶಗಳಿಗೂ ಹಂಚಿಕೆ ಮಾಡುವಷ್ಟು ಉತ್ಪಾದನೆ ಹೆಚ್ಚಾಗಿದೆ’ ಎಂದರು.

‘ಹೊರ ದೇಶಗಳಿಗೆ ವಿದ್ಯುತ್‌ ನೀಡಲು ಸಾಧ್ಯವಾಗಿದ್ದರೂ ನಮ್ಮ ಹಲವು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ವಿದ್ಯುತ್‌ ಜಾಲ, ಫೀಡರ್‌ ಅಳವಡಿಕೆ ಮಾಡದಿರುವುದು ಹೀಗೆ ಹಲವು ಸಮಸ್ಯೆಗಳಿವೆ. ಅವುಗಳನ್ನು ರಾಜ್ಯ ಸರ್ಕಾರ ಮಾಡಬೇಕು’ ಎಂದು ಹೇಳಿದರು.

‘ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಸ್ಮಾರ್ಟ್‌ ಸಿಟಿಗಾಗಿ ₹ 211 ಕೋಟಿ ಬಿಡುಗಡೆಯಾಗಿದೆ. ಆದರೆ, ₹ 11 ಕೋಟಿಯಷ್ಟೇ ಖರ್ಚಾಗಿದೆ. ಯೋಜನೆ ಅನುಷ್ಠಾನಕ್ಕೆ ಸಮರ್ಥ ಅಧಿಕಾರಿಗಳನ್ನು ನಿಯೋಜಿಸಬೇಕು’ ಎಂದು ಒತ್ತಾಯಿಸಿದರು.  ‘ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್‌)ಯಿಂದ ಅವಳಿ ನಗರಕ್ಕೆ ನೂರಾರು ಕೋಟಿ ಬಿಡುಗಡೆಯಾಗಿದ್ದು, ಅತ್ಯುತ್ತಮ ಗುಣಮಟ್ಟದ ಸಿಮೆಂಟ್‌ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ’ ಎಂದರು.

ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯರಾದ ಡಿ.ಕೆ. ಚವ್ಹಾಣ, ಲಕ್ಷ್ಮಿಬಾಯಿ ಬಿಜವಾಡ, ಶಿವು ಮೆಣಸಿನಕಾಯಿ, ಪಂಚಕಮಿಟಿ ಪದಾಧಿಕಾರಿಗಳಾದ ವಿಠ್ಠಲ ಲದವಾ, ಯಲ್ಲಪ್ಪ ಪವಾರ, ಗಜಾನನ ಕಾಟವೆ, ರಾಜು ಜರತಾರಘರ, ರಾಜು ಕೋರ್ಯಾಣಮಠ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !