ಸಭಾಭವನ ನಿರ್ಮಾಣಕ್ಕೆ ಸಂಸದರ ನಿಧಿ ಬಳಕೆ
ಹುಬ್ಬಳ್ಳಿ: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಪಿಎಲ್‌ಎಡಿ) ನಿಧಿಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಶೇ 70ರಷ್ಟು ಅನುದಾನವನ್ನು ರಾಜ್ಯದ ಬಹುತೇಕ ಲೋಕಸಭಾ ಸದಸ್ಯರು ಸಮುದಾಯ ಭವನಗಳನ್ನು ನಿರ್ಮಾಣ ಮಾಡಲು ಬಳಸಿದ್ದಾರೆ.
ಕೇಂದ್ರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (ಎಂಎಸ್‌ಪಿಐ) 2016ರಲ್ಲಿ ಹೊರಡಿಸಿದ ಮಾರ್ಗಸೂಚಿಯಲ್ಲಿ
ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಸಮುದಾಯಗಳಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಪ್ರತಿ ವರ್ಷ ₹5 ಕೋಟಿ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ. ಸ್ವಚ್ಛ ಭಾರತ ಯೋಜನೆಯ ಧ್ಯೇಯೋದ್ದೇಶ, ಶಾಲೆ ಮತ್ತು ಸಾರ್ವಜನಿಕ ಶೌಚಾಲಯ ನಿರ್ಮಾಣ, ಮಳೆನೀರು ಸಂಗ್ರಹ ವ್ಯವಸ್ಥೆ, ಕೌಶಲ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಹೆಚ್ಚು ಒತ್ತು ನೀಡಲು ಸೂಚಿಸಿದೆ. ಆದರೆ, ಹೆಚ್ಚಿನ ಸಂಸದರು ಸಮುದಾಯ ಭವನಗಳನ್ನು ನಿರ್ಮಿಸುತ್ತಿದ್ದಾರೆ.
2019–2022ರವರೆಗೆ ರಾಜ್ಯದ ಸಂಸದರಿಗೆ ಕೇಂದ್ರ ಸರ್ಕಾರ ₹336 ಕೋಟಿ ಬಿಡುಗಡೆ ಮಾಡಬೇಕಿತ್ತು. ಆದರೆ, ₹220 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಅದರಲ್ಲಿ 6,855 ಕಾಮಗಾರಿಗಳಿಗೆ ಸಂಸದರು ಶಿಫಾರಸು ಮಾಡಿದ್ದು, 6,493 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ರಾಜ್ಯದ 28 ಸಂಸದರ ಪೈಕಿ 15 ಸಂಸದರು ಶೇ 40ಕ್ಕಿಂತ ಕಡಿಮೆ ಅನುದಾನ ಬಳಸಿದ್ದಾರೆ. ಆರು ಸಂಸದರು ಶೇ 50ಕ್ಕಿಂತ ಹೆಚ್ಚು ಅನುದಾನ ಬಳಕೆ ಮಾಡಿಕೊಂಡಿದ್ದಾರೆ.
ಕೋವಿಡ್ ಕಾರಣದಿಂದ ಕೇಂದ್ರ ಸರ್ಕಾರ 2020ರಲ್ಲಿ ಎಂಪಿಎಲ್‌ಎಡಿ ನಿಧಿ ಬಿಡುಗಡೆ ಮಾಡಿರಲಿಲ್ಲ. ‘ಗ್ರಾಮಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಮತದಾರರಿಂದ ಒತ್ತಡ ಬರುತ್ತವೆ. ಅವರ ಬೇಡಿಕೆಗಳಿಗೆ ಇಲ್ಲ ಎನ್ನಲು ಸಾಧ್ಯವಿಲ್ಲ. ಎಂಪಿಎಲ್‌ಎಡಿ ನಿಧಿಯನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೂ ಬಳಸಿದ್ದೇನೆ’ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.