ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮೃಗಶಿರ; ಬಾಡುತ್ತಿರುವ ಬೆಳೆ

30 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ನೆಲಕಚ್ಚುವ ಆತಂಕದಲ್ಲಿ ರೈತ
Last Updated 24 ಜೂನ್ 2018, 17:28 IST
ಅಕ್ಷರ ಗಾತ್ರ

ನವಲಗುಂದ: ರೋಹಿಣಿ ಮಳೆ ನಿಗದಿಗೆ ಮುನ್ನವೇ ಬಂದು ಈ ಬಾರಿ ರೈತನ ಬಾಳು ಹಸನಾಗಬಹುದೆಂಬ ನಿರೀಕ್ಷೆ ಇತ್ತು. ಆದರೆ ಮೃಗಶಿರ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಕಾರಣ ಈಗಾಗಲೇ ಬಿತ್ತಿರುವ ಬೆಳೆಗಳು ಬಾಡುತ್ತಿವೆ. ಹೀಗಾಗಿ ರೈತ ಕಂಗಾಲಾಗುವ ಪರಿಸ್ಥಿತಿ ತಾಲ್ಲೂಕಿನಲ್ಲಿ ಉಂಟಾಗಿದೆ.

ಜೂನ್ ಮೊದಲ ವಾರದಲ್ಲಿಯೇ 142 ಮಿ.ಮೀ ಮಳೆಯಾಗಿತ್ತು ಎಂದು ಕೃಷಿ ಇಲಾಖೆ ತಿಳಿಸಿತ್ತು. ಹೀಗಾಗಿ ರೈತರು ಖುಷಿಯಿಂದಲೇ ನಾ ಮುಂದು ತಾ ಮುಂದು ಎಂದು ಸಾಲ ಮಾಡಿ ಬಿತ್ತನೆ ಬೀಜ ಖರೀದಿ ಮಾಡಿ ತಾಲ್ಲೂಕಿನಾದ್ಯಂತ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 4500 ಹೆಕ್ಟೇರ್‌ನಲ್ಲಿ ಶೇಂಗಾ ಹಾಕಿದ್ದರು. ಜತೆಗೆ ಕೆಲ ರೈತರು ಹತ್ತಿ, ಉಳ್ಳಾಗಡ್ಡಿ, ಗೋವಿನಜೋಳ ಬಿತ್ತನೆ ಮಾಡಿದ್ದಾರೆ.

ಆದರೆ ಮೃಗಶಿರ ಮಳೆ ಕೈಕೊಟ್ಟಿದ್ದು ತೇವಾಂಶದ ಕೊರತೆಯಾಗಿ ಬೆಳೆಗಳು ಬಾಡುತ್ತಿರುವುದನ್ನು ಕಂಡ ರೈತರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮೋಡ ಕವಿದ ವಾತಾವರಣವಿದೆ; ಮಳೆ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸಂಜೆಯ ವೇಳೆಗೆ ಕಪ್ಪು ಮೋಡಗಳು ಆಕಾಶದಲ್ಲಿ ಗೋಚರಿಸಿ ಇನ್ನೇನು ಮಳೆ ಬಂದೇ ಬಿಟ್ಟಿತು ಎಂದುಕೊಳ್ಳುತ್ತಿರುವಾಗ ಮೋಡಗಳು ಬೇರೆ ದಿಕ್ಕಿನಡಿ ಚಲಿಸುತ್ತಿದ್ದು ರೈತರಲ್ಲಿ ಭಯದ ವಾತಾವರಣ ಮೂಡಿಸಿದೆ.

ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳದ ದಡದಲ್ಲಿನ ರೈತರು ಹಳ್ಳದಲ್ಲಿ ತಗ್ಗು ತೆಗೆದು ಪಂಪ್‍ಸೆಟ್ ಮೂಲಕ ಬೆಳೆಗಳಿಗೆ ನೀರುಣಿಸಿ ಸಸಿಗಳನ್ನು ಬದುಕಿಸಿಕೊಳ್ಳುತ್ತಿದ್ದಾರೆ. ಮಲಪ್ರಭಾ ಕಾಲುವೆಯಲ್ಲಿ ನೀರು ಹರಿಯುತ್ತಿದ್ದರೆ ಮಾತ್ರ ಬೆಣ್ಣೆಹಳ್ಳ ಹಾಗೂ ತುಪ್ಪರಿ ಹಳ್ಳದಲ್ಲಿ ನೀರು ಹರಿಯುತ್ತಿರುತ್ತದೆ. ಆದರೆ ಈಗ ಮಲಪ್ರಭಾ ಕಾಲುವೆಯಲ್ಲಿ ನೀರಿಲ್ಲದೇ ನೀರಾವರಿ ಹೊಂದಿರುವ ಜಮೀನುಗಳಿಗೂ ನೀರುಣಿಸಲಾಗುತ್ತಿಲ್ಲ. ಒಣ ಬೇಸಾಯದ ರೈತರಂತೂ ಕಂಗೆಟ್ಟಿದ್ದಾರೆ.

ಪ್ರತಿ ಹೆಕ್ಟೇರ್ ಹೆಸರು ಬಿತ್ತನೆಗೆ ಬೀಜ, ಗೊಬ್ಬರ, ಬಿತ್ತನೆಯ ಖರ್ಚು, ಕೃಷಿ ಕೂಲಿ ಕಾರ್ಮಿಕರ ಖರ್ಚು ಸೇರಿ ಕನಿಷ್ಠ ₹5 ಸಾವಿರ ಖರ್ಚಾಗುತ್ತದೆ. ಹೆಸರು ಬೆಳೆಯೊಂದೇ ಲೆಕ್ಕ ಹಾಕಿದರೆ 20 ಸಾವಿರ ಹೆಕ್ಟೇರ್‌ನಲ್ಲಿ ಅಂದಾಜು ₹25 ಕೋಟಿ ಖರ್ಚು ಮಾಡಿದ್ದಾರೆ.

ಕೆಲವು ರೈತರು ಹತ್ತಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯ್ದು ಕುಳಿತಿದ್ದರೆ, ಕೆಲವರು ಹತ್ತಿ ಬೀಜದ ಪ್ಯಾಕೆಟ್‍ಗಳು ಸಿಗುತ್ತವೆಯೋ ಇಲ್ಲವೆಂದು ಮುಂಚಿತವಾಗಿಯೇ ಖರೀದಿಸಿದ್ದಾರೆ. ಇನ್ನು ಎಕರೆಗೆ ₹10 ಸಾವಿರ ಮುಂಗಡ ಕೊಟ್ಟು ಲಾವಣಿ ಮಾಡಿರುವ ರೈತರ ಪಾಡೂ ಹೇಳತೀರದಾಗಿದೆ.

ಇನ್ನೊಂದು ವಾರದಲ್ಲಿ ಮಳೆ ಬರದಿದ್ದರೆ ಬಿತ್ತನೆ ಮಾಡಿದ ಬೆಳೆಗಳು ನೆಲಕಚ್ಚುವುದು ಬಹುತೇಕ ಖಚಿತ ಎಂಬ ಭೀತಿಯಲ್ಲಿದ್ದಾರೆ.

ರೈತರು ರಾಷ್ಟ್ರೀಯ ಕೃಷಿ ಬೆಳೆ ವಿಮೆಯನ್ನು ಜೂನ್ ಅಂತ್ಯದ ಒಳಗಾಗಿ ಪಾವತಿಸುವುದನ್ನು ಮರೆಯಬಾರದೆಂದು ಕೃಷಿ ಇಲಾಖೆಯವರು ಸೂಚನೆ ನೀಡಿದ್ದಾರೆ.‌

ಹತ್ತು ಎಕರೆ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಿದ್ದೇನೆ. ತೇವಾಂಶದ ಕೊರತೆಯಾಗಿ ಬೆಳೆ ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಒಂದು ವಾರದ ಒಳಗಾಗಿ ಮಳೆ ಬರದಿದ್ದರೆ ನಮ್ಮ ಕಥೆ ಮುಗಿದ್ಹಂಗೆ
-ಮಲ್ಲೇಶಪ್ಪ ಹಳಕಟ್ಟಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT