ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆರೋಗ್ಯಕ್ಕೆ ಪ್ರಕೃತಿ ಚಿಕಿತ್ಸೆ

ಜಿಮ್‌ ಬದಲು ವ್ಯಾಯಾಮ, ಯೋಗಕ್ಕೆ ಒತ್ತು ನೀಡಿ: ಡಾ. ಮಹೇಶ
Last Updated 17 ಡಿಸೆಂಬರ್ 2022, 5:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಪ್ರಕೃತಿಗೆ ವಿರುದ್ಧವಾಗಿ ದೇಹವನ್ನು ದಂಡಿಸಿದರೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಮ್‌ಗೆ ತೆರಳಿ ಶೀಘ್ರ ಪರಿಣಾಮ ಪಡೆಯುವುದಕ್ಕಿಂತ, ಯೋಗ, ವ್ಯಾಯಾಮ, ಉಪವಾಸ ಮಾಡಿ ದೇಹವನ್ನು ಸದೃಢವಾಗಿಟ್ಟು
ಕೊಳ್ಳುವುದು ಉತ್ತಮ’ ಎಂದು ಆಯುರ್ವೇದ ಮಹಾವಿದ್ಯಾಲಯದ ಪ್ರಕೃತಿ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಮಹೇಶ ಸಾಲಿಮಠ ಸಲಹೆ ನೀಡಿದರು.

‘ಆರೋಗ್ಯ ರಕ್ಷಣೆಯಲ್ಲಿ ಪ್ರಕೃತಿ ಚಿಕಿತ್ಸೆ ಮಹತ್ವವೇನು?’ ವಿಷಯ ಕುರಿತು ‘ಪ್ರಜಾವಾಣಿ’ ಶುಕ್ರವಾರ ಆಯೋಜಿಸಿದ್ದ ‘ಫೇಸ್‌ಬುಕ್‌ ಲೈವ್’ ಸಂವಾದದಲ್ಲಿ ಮಾತನಾಡಿದ ಅವರು, ‘ಪ್ರಸ್ತುತ ಯುವಕರು ಕಟ್ಟುಮಸ್ತಾದ ದೇಹ ರಚನೆಗೆ ಜಿಮ್‌ಗೆ ತೆರಳಿ ಬೆವರಿಳಿಸುತ್ತಾರೆ. ಅದರಿಂದ ಕೆಲವರಿಗೆ ಅಡ್ಡ ಪರಿಣಾಮಗಳು ಬೀರುವ ಸಾಧ್ಯತೆಯಿದೆ. ಅದರ ಬದಲು, ಪ್ರಕೃತಿ ಚಿಕಿತ್ಸೆಗಳಾದ ಪ್ರತಿನಿತ್ಯ ಅರ್ಧತಾಸು ಯೋಗ, ಪ್ರಾಣಾಯಾಮ, ಎಳೆ ಬಿಸಿಲಿನಲ್ಲಿ ನಡಿಗೆ, ಹದಿನೈದು ದಿನಕ್ಕೊಮ್ಮೆ ಉಪವಾಸ, ಅಭ್ಯಂಗಸ್ನಾನ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದರು.

‘ನಮಗೆ ಪ್ರಕೃತಿ ಜೊತೆ– ಜೊತೆಗೇ ಬದುಕುತ್ತಿದ್ದೇವೆ. ಮಣ್ಣು, ಜಲ, ಸೂರ್ಯ, ಗಾಳಿ, ಆಕಾಶ... ಈ ಪಂಚಭೂತಗಳ ಆರಾಧನೆ ಮಾಡುತ್ತ, ತಿಳಿದೋ ತಿಳಿಯದೆಯೋ ಪ್ರಕೃತಿ ಚಿಕಿತ್ಸೆ ಅವಡಿಸಿಕೊಂಡಿದ್ದೇವೆ. ಆದರೆ, ನಿಯಮಬದ್ಧವಾಗಿ ಅನುಸರಿಸುತ್ತಿಲ್ಲ’ ಎಂದರು.

‘ನದಿ ತಟವನ್ನು ಒಂದೂವರೆ ಅಡಿ ಅಗೆದು, ಅಲ್ಲಿರುವ ಮಣ್ಣನ್ನು 24 ಗಂಟೆ ಸಂಗ್ರಹಿಸಿ ಹದವಾಗಿ ಮೆದುಗೊಳಿಸಲಾಗುತ್ತದೆ. ನಂತರ ಅದನ್ನು ಸಂಪೂರ್ಣ ದೇಹಕ್ಕೆ ಮೆತ್ತಿ, 45 ನಿಮಿಷ ಬಿಡಲಾಗುತ್ತದೆ. ಮಣ್ಣು ಉದುರುವಾಗ ತುಸು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು. ಇದನ್ನು ಮಣ್ಣಿನ ಚಿಕಿತ್ಸೆ ಎನ್ನಲಾಗುತ್ತದೆ. ಅದು ಜಿಡ್ಡುಗಟ್ಟಿದ ಮಣ್ಣಾಗಿರುವುದರಿಂದ, ದೇಹದಲ್ಲಿರುವ ಕಲ್ಮಶಗಳನ್ನು ಹೊರಗೆಳೆಯುತ್ತದೆ. ಅಲ್ಲದೆ, ಚರ್ಮದ ಕಾಂತಿ, ಮೊಡವೆ, ಕಣ್ಣಿನ ಸುತ್ತ ಇರುವ ಕಪ್ಪು ವೃತ್ತ, ಕೂದಲು ಆರೈಕೆ, ದೇಹದ ಅವಯವಗಳ ಆರೋಗ್ಯ, ಬಾವು ಹೀಗೆ ವಿವಿಧ ಸಮಸ್ಯೆಗಳಿಗೆ ಈ ಚಿಕಿತ್ಸೆಯಿಂದ ಶೀಘ್ರ ಪರಿಹಾರ ದೊರೆಯಲಿದೆ’ ಎಂದರು.

‘ಬಿಸಿನೀರಿನ ಸ್ನಾನದಿಂದ ದೇಹದ ಆಯಾಸ ನಿವಾರಣೆಯಾಗುತ್ತದೆ. ಅದು ಭುಜದ ಕೆಳಭಾಗಕ್ಕೆ ಮಾತ್ರ. ದೇಹದ ಮೇಲ್ಭಾಗಕ್ಕೆ ಕಡ್ಡಾಯವಾಗಿ ತಣ್ಣೀರಿನ ಸ್ನಾನ ಮಾಡಬೇಕು. ಪಂಚೇಂದ್ರಿಯಗಳು ಸೂಕ್ಷ್ಮವಾಗಿರುವುದರಿಂದ ಅವುಗಳಿಗೆ ಬಿಸಿ ನೀರು ಒಳ್ಳೆಯದಲ್ಲ. ದೇಹದ ಉಷ್ಣಾಂಶಕ್ಕಿಂತ ಕಡಿಮೆ ಉಷ್ಣಾಂಶದ ನೀರನ್ನು ಬಳಸಬೇಕು. ಅಲ್ಲದೆ, ತಲೆಗೆ ಬಿಸಿನೀರು ಹಾಕುವುದರಿಂದ ಕೂದಲು ಉದುರುವ ಸಾಧ್ಯತೆಯಿದೆ. ದಿನಕ್ಕೆ ಎರಡೂವರೆಯಿಂದ ಮೂರು ಲೀಟರ್‌ ನೀರು ಕುಡಿದರೆ ಜೀರ್ಣಕ್ರಿಯೆಗೆ ಸಹಕಾರಿ. ಶುದ್ಧ ನೀರು ಕುಡಿಯುವುದರಿಂದ ಅನೇಕ ರೋಗಗಳನ್ನು ತಡೆಯಬಹುದು. ಮಲಮೂತ್ರ ವಿಸರ್ಜನೆ, ದೇಹದ ಉಷ್ಣತೆ ಕಾಪಾಡಲು ನೀರು ಪ್ರಮುಖ ಪಾತ್ರವಹಿಸುತ್ತದೆ’ ಎಂದು ಜಲಚಿಕಿತ್ಸೆ ಕುರಿತು ಡಾ.ಸಾಲಿಮಠ ವಿವರಿಸಿದರು.

‘ ಉಪವಾಸ ಕಡ್ಡಾಯವಾಗಿರಲಿ...’

‘ದಿನಕ್ಕೆ ಮೂರು ಬಾರಿ ಆಹಾರ ಸೇವಿಸುವವರು ಹದಿನೈದು ದಿನಕ್ಕೊಮ್ಮೆಯಾದರೂ ಉಪವಾಸ ಮಾಡಲೇಬೇಕು. ಪಚನಕ್ರಿಯೆಗೆ ವಿಶ್ರಾಂತಿ ನೀಡುವುದೇ ಇದರ ಉದ್ದೇಶ. ಪಚನವಾಗದೆ ಇರುವ ಆಹಾರ ಉಪವಾಸ ಸಂದರ್ಭದಲ್ಲಿ ಪಚನವಾಗುತ್ತದೆ. ಇದರಿಂದ ಯಾವುದೇ ರೋಗ ಬರದಂತೆ ಕಾಪಾಡಿಕೊಳ್ಳಬಹುದು. ಶಿಶುವಿಗೆ ಕಡ್ಡಾಯವಾಗಿ ಅಭ್ಯಂಜನ ಸ್ನಾನ ಮಾಡಿಸಬೇಕು. ಅದು ಮಕ್ಕಳನ್ನು ದೈಹಿಕವಾಗಿ ಸದೃಢವಾಗಿಡಲು ಸಹಾಯಕವಾಗಲಿದೆ. ದೇಹದ ಉಷ್ಣಾಂಶ ಏರುಪೇರಾಗದಂತೆ ಅದು ನೋಡಿಕೊಳ್ಳುತ್ತದೆ. ಎಳೆಬಿಸಿಲಿನಲ್ಲಿ ನಡಿಗೆ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಬಹುದು’ ಎಂದು ಡಾ.ಮಹೇಶ ಸಾಲಿಮಠ ಎಂದು ತಿಳಿಸಿದರು.

ಸಂವಾದವನ್ನು ವೀಕ್ಷಿಸಲು ಲಿಂಕ್‌ ಬಳಸಿ:https://fb.watch/hs5nr72cDb/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT