ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಸರ್ಕಾರ ಲವ್ ಜಿಹಾದ್ ಪರ ನಿಂತಿದೆ: ಪ್ರಲ್ಹಾದ ಜೋಶಿ

Published 21 ಏಪ್ರಿಲ್ 2024, 6:58 IST
Last Updated 21 ಏಪ್ರಿಲ್ 2024, 6:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ರಾಜ್ಯ ಸರ್ಕಾರವೇ ಲವ್ ಜಿಹಾದ್ ಪರ ನಿಂತಿದ್ದು, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಯಾವುದೇ ಹಂತಕ್ಕೆ ಬೇಕಾದರೂ ಇಳಿಯುತ್ತದೆ' ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ತುಷ್ಟಿಕರಣದ ನೀತಿಯಿಂದಾಗಿ ಇಂತಹ ಪ್ರಕರಣಗಳು ನಡೆಯುತ್ತಿವೆ. ನೇಹಾಳಿಗೆ ಒಂಬತ್ತು-ಹತ್ತು ಬಾರಿ ಚೂರಿ ಇರಿದು ಕೊಲೆ ಮಾಡಿದ ದೃಶ್ಯ ನೋಡಿದಾಗಲೂ ಅವರಿಗೆ ಕರುಣೆ ಬಂದಿಲ್ಲ. ಅವಳ ಕುಟುಂಬಕ್ಕೆ ನ್ಯಾಯ ಕೊಡಬೇಕೆಂಬ ಕಿಂಚಿತ್ತೂ ಜವಾಬ್ದಾರಿಯೂ ಇಲ್ಲವಾಗಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ' ಎಂದು ಕಿಡಿಕಾರಿದರು.

'ಆರೋಪಿ ಫಯಾಜ್, ನೇಹಾಳನ್ನು ಮತಾಂತರ ಮಾಡಿ ಮದುವೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ. ನೇಹಾ ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಒಪ್ಪದಿದ್ದಾಗ ಅಂತಿಮವಾಗಿ ಕೊಲೆ ಮಾಡಿದ್ದಾನೆ ಎಂದು, ಅವಳ‌ ತಂದೆ ನಿರಂಜನಯ್ಯ ಹಿರೇಮಠ ಅವರೇ ನನ್ನೆದುರು, ಅಷ್ಟೇ ಅಲ್ಲ, ಬಹಿರಂಗವಾಗಿಯೇ ಹೇಳಿದ್ದಾರೆ' ಎಂದು ಜೋಶಿ ತಿಳಿಸಿದರು.

'ಕಾಂಗ್ರೆಸ್ ಕಾರ್ಪೋರೇಟರ್ ಆದ ನನ್ನ ಮಗಳ ಪ್ರಕರಣದಲ್ಲಿಯೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದೀರಿ. ಇನ್ನು ಜನ ಸಾಮಾನ್ಯರ ಗತಿಯೇನು? ಎಂದು ನಿರಂಜನ್ ಅವರು, ಸಿಎಂ, ಗೃಹ ಸಚಿವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಇಂಥ ದುಸ್ಥಿತಿಗೆ ತಂದು ನಿಲ್ಲಿಸಿದೆ. ಡಿಜೆ ಹಳ್ಳಿ-ಕೆಜೆ ಹಳ್ಳಿ, ರಾಮೇಶ್ವರ್ ಕೆಫೆ ಬಾಂಬ್ ಸ್ಫೋಟ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ, ಉಡುಪಿಯ ಶೌಚಾಲಯದ ಒಳಗೆ ಕ್ಯಾಮರಾ ಇಟ್ಟ ಪ್ರಕರಣಗಳಲ್ಲೂ ಇವರ ತುಷ್ಟಿಕರಣ ನೀತಿ ಮಿತಿಮೀರಿದೆ' ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT