ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಹಾ ಕೊಲೆ: ತನಿಖೆ ದಿಕ್ಕು ತಪ್ಪುತ್ತಿದೆ ಎಂದಿದ್ದ ತಂದೆ ಕ್ಷಮೆಯಾಚನೆ

ಮಾಹಿತಿ ಕೊರತೆಯಿಂದ ವಿರೋಧಿಸಿದ್ದೆ: ನಿರಂಜನಯ್ಯ ಹಿರೇಮಠ
Published 23 ಏಪ್ರಿಲ್ 2024, 7:22 IST
Last Updated 23 ಏಪ್ರಿಲ್ 2024, 7:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಕಮಿಷನರ್ ವಿರುದ್ಧ ಮಾತನಾಡಿದ್ದೆ. ನನ್ನಿಂದಾದ ತಪ್ಪಿಗೆ ಕ್ಷಮೆ ಕೇಳುತ್ತಿದ್ದೇನೆ' ಎಂದು ಕೊಲೆಯಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಗಳು ಕೊಲೆಯಾದ ನಂತರ ನಾನು ದುಃಖದಲ್ಲಿ ಇದ್ದೆ. ಮಗಳ ಅಂತ್ಯಕ್ರಿಯೆವರೆಗೂ ನನ್ನ ಜೊತೆಯಲ್ಲಿದ್ದ ನನ್ನವರು, ನಂತರ ಕಂಡಿರಲಿಲ್ಲ. ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದು ಭಾವಿಸಿ, ಮಾಹಿತಿಯ ಕೊರತೆಯಿಂದ ಸರ್ಕಾರದ ವಿರುದ್ಧ ಮಾತನಾಡಿದ್ದೆ. ಪ್ರಕರಣ ಕುರಿತು ಎಲ್ಲ ಮಾಹಿತಿಯನ್ನು ನಮ್ಮ ಪಕ್ಷದವರೇ ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ ಎಂದು ನಿನ್ನೆ(ಸೋಮವಾರ) ತಿಳಿಯಿತು. ನನ್ನಿಂದ ತಪ್ಪಾಗಿದೆ' ಎಂದರು.

'ನಮ್ಮ ಪಕ್ಷದವರು ತೆರೆಮರೆಯಲ್ಲಿ ನನ್ನ ಮಗಳಿಗೆ ನ್ಯಾಯ ಕೊಡಿಸುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಪ್ರಕರಣ ಸಿಐಡಿಗೆ ವಹಿಸುವಲ್ಲಿಯೂ ಅವರ ಪಾತ್ರ ಪ್ರಮುಖವಾಗಿದೆ‌. ಪೊಲೀಸ್ ಕಮಿಷನರ್ ಅವರು ಸಹ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧವೂ ನಾನು ಅಸಮಧಾನ ವ್ಯಕ್ತಪಡಿಸಿದ್ದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿದ್ದ ನಾನು ಏನೇ ತಪ್ಪು ಮಾತನಾಡಿದರೂ ಅನ್ಯಥಾ ಭಾವಿಸಬಾರದು. ನನ್ನಿಂದಾದ ತಪ್ಪಿಗೆ ಎಲ್ಲರಿಂದಲೂ ಕ್ಷಮೆ ಕೇಳುತ್ತಿದ್ದೇನೆ' ಎಂದು ಹೇಳಿದರು.

'ಇಂತಹ ಪ್ರಕರಣಗಳು ನಡೆದಾಗ ಸೂಕ್ತ ಕ್ರಮ ಕೈಗೊಳ್ಳಲು ವಿಶೇಷ ಕಾನೂನು ರಚಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಆ ಕಾನೂನಿಗೆ 'ನೇಹಾ ಹಿರೇಮಠ ಕಾಯ್ದೆ' ಎಂದು ಹೆಸರಿಡಬೇಕು. ಅಂತಹ ಕಾಯ್ದೆ ಜಾರಿಗೆ ಬಂದರೆ ಅಪರಾಧ ಮಾಡುವ ಮನಸ್ಥಿತಿಯವರಿಗೆ ಭಯ ಹುಟ್ಟಿಸುತ್ತದೆ. ಮತ್ತೊಂದು ಇಂತಹ ಪ್ರಕರಣ ಎಲ್ಲಿಯೂ ಮರುಕಳಿಸಬಾರದು. ಎಲ್ಲ ಹೆಣ್ಣು ಮಕ್ಕಳು ನಿರ್ಭಯದಿಂದ ಕಾಲೇಜಿಗೆ ಹೋಗುವಂತಾಗಬೇಕು' ಎಂದು ವಿನಂತಿಸಿದರು.

ಸಚಿವ ಎಚ್.ಕೆ. ಪಾಟೀಲ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಶಾಸಕ ಪ್ರಸಾದ ಅಬ್ಬಯ್ಯ ಮತ್ತು ಮಹೇಂದ್ರ ಸಿಂಘಿ ಇದ್ದರು.

ಸಾಂತ್ವನ ಹೇಳಿದ ಸಿ.ಎಂ

ಕೊಲೆಗೀಡಾದ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಮಾತನಾಡಿ, ಸಾಂತ್ವನ ಹೇಳಿದರು.

ಹುಬ್ಬಳ್ಳಿಯಲ್ಲಿ ಇರುವ ನೇಹಾ ಮನೆಗೆ ಮಂಗಳವಾರ ತೆರಳಿ, ಕುಟುಂಬದವರಿಗೆ ಸಾಂತ್ವನ ಹೇಳಲು ಎಚ್.ಕೆ. ಪಾಟೀಲ ಅವರು ಭೇಟಿಯಾದ ಸಂದರ್ಭದಲ್ಲಿ, ಮುಖ್ಯಮಂತ್ರಿ ಜೊತೆ ಅವರು ದೂರವಾಣಿ ಮೂಲಕ ನಿರಂಜನಯ್ಯ ಅವರಿಗೆ ಮಾತನಾಡಿಸಿದರು.

ಪ್ರಕರಣದ ಮಾಹಿತಿ ಪಡೆದ ಮುಖ್ಯಮಂತ್ರಿ, ಪ್ರಕರಣದ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ನೇಹಾ ಸಾವಿಗೆ ನ್ಯಾಯ ಸಿಗುತ್ತದೆ. ‘ನಿಮ್ಮ ಪರ ನಾವು ಇರುತ್ತೇವೆ’ ಎಂದರು.

ಇದಕ್ಕೆ ಉತ್ತರಿಸಿದ ನಿರಂಜನಯ್ಯ ಹಿರೇಮಠ, ‘ನಿಮಗೆ, ಸರ್ಕಾರಕ್ಕೆ, ಕಾನೂನು ಸಚಿವರಿಗೆ, ಶಾಸಕರಿಗೆ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ’ ಎಂದರು.

ನೇಹಾ ಕೊಲೆ ಪ್ರಕರಣದ ಕುರಿತು ಮುಖ್ಯಮಂತ್ರಿ ಮತ್ತು ಗೃಹಸಚಿವರು ನೀಡಿದ್ದ ಹೇಳಿಕೆ ಮುಗಿದ ಅಧ್ಯಾಯ.
ಎಚ್‌.ಕೆ.ಪಾಟೀಲ, ಕಾನೂನು ಸಚಿವ

ಸಿಬಿಐ ತನಿಖೆಗೆ ಒಪ್ಪಿಸಬೇಕು: ಬಿ.ವೈ.ವಿಜಯೇಂದ್ರ ಆಗ್ರಹ

‘ನೇಹಾ ಪ್ರಕರಣದ ತನಿಖೆ ಹಾದಿ, ಮುಖ್ಯಮಂತ್ರಿ, ಗೃಹ ಸಚಿವರ ಹೇಳಿಕೆ ಗಮನಿಸಿದರೆ ಸಿಐಡಿ ತನಿಖೆಯಿಂದ ನ್ಯಾಯಸಿಗುವ ಭರವಸೆಯಿಲ್ಲ. ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು‌.

ಹುಬ್ಬಳ್ಳಿಯಲ್ಲಿ ನೇಹಾ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿ ಸಚಿವರ ಹೇಳಿಕೆ ಗಮನಿಸಿದರೆ, ಪರೋಕ್ಷವಾಗಿ ಅಲ್ಪಸಂಖ್ಯಾತರಿಗೆ ಬೆಂಬಲ ಸಿಗುತ್ತಿದೆ’ ಎಂದರು.

‘ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಮಂದಿ ಇದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ. ಆದರೆ, ಈವರೆಗೂ ಅವರನ್ನು ಬಂಧಿಸಿಲ್ಲ‘ ಎಂದು ಅಭಿಪ್ರಾಯಪಟ್ಟರು. 

‘ನೇಹಾ ಕೊಲೆ ಪ್ರಕರಣಕ್ಕೆ ಯಾರು ಕೂಡಾ ಜಾತಿ, ಧರ್ಮದ ಬಣ್ಣ ಹಚ್ಚಬಾರದು. ನೊಂದ ಹೆತ್ತವರಿಗೆ ಸಮಾಧಾನವಾಗುವಂತೆ ವರ್ತಿಸಬೇಕು’ ಎಂದು ವಿನಂತಿಸಿದರು.

ವಿದ್ಯಾರ್ಥಿನಿ ನೇಹಾದು ವ್ಯವಸ್ಥಿತ ಕೊಲೆ. ವಿಳಂಬ ಮಾಡದೆ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು.
ಪ್ರಮೋದ ಮುತಾಲಿಕ್‌, ಸಂಸ್ಥಾಪಕ ಅಧ್ಯಕ್ಷ, ಶ್ರೀರಾಮ ಸೇನೆ ಸಂಘಟನೆ

ಸಿಐಡಿ ತನಿಖೆ ಆರಂಭ; ಮಾಹಿತಿ ಸಂಗ್ರಹ

‌ಸಿಐಡಿ ಅಧಿಕಾರಿಗಳ ತಂಡ ನೇಹಾ ಕೊಲೆ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸ್ ಕಮಿಷನರ್‌ ರೇಣುಕಾ ಸುಕುಮಾರ್‌ ಅವರಿಂದ, ಕಡತ ಹಾಗೂ ಮಾಹಿತಿ ಪಡೆದಿದೆ.

ಎಸ್ಪಿ ವೆಂಕಟೇಶ್‌, ಡಿವೈಎಸ್‌ಪಿ ಮನೋಹರ್ ನೇತೃತ್ವದ ಎಂಟು ಅಧಿಕಾರಿಗಳ ತಂಡ, ಪ್ರಕರಣದ ಪ್ರಾಥಮಿಕ ಮಾಹಿತಿಯನ್ನು ಸ್ಥಳೀಯ ಪೊಲೀಸರಿಂದ ಪಡೆಯಿತು.

‘ಎರಡು ತಂಡಗಳಲ್ಲಿ ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು, ಬಿವಿಬಿ ಕಾಲೇಜಿನ ಆವರಣಕ್ಕೆ ತೆರಳಿ ಕೊಲೆ ನಡೆದ ಸ್ಥಳ, ಕೃತ್ಯದ ದೃಶ್ಯಾವಳಿ ಸೆರೆಯಾಗಿದ್ದ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದ ಸ್ಥಳ ಪರಿಶೀಲಿಸಿದರು. ನೇಹಾ, ಫಯಾಜ್‌ ಮೊಬೈಲ್‌ಗಳ ಕರೆಗಳ ಮಾಹಿತಿಯನ್ನೂ (ಸಿಡಿಆರ್‌) ಪರಿಶೀಲಿಸಿದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪೊಲೀಸರ ಮೇಲೆ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದೆ. ಹೀಗಾಗಿ ನೇಹಾ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು.
ಬಸವರಾಜ ಬೊಮ್ಮಾಯಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT