ಬುಧವಾರ, ಜನವರಿ 20, 2021
22 °C
ವರ್ಷದ ಹಿಂದೆ ಆರಂಭವಾದ ಯೋಜನೆಗೆ ಇತಿಶ್ರೀ, ಮತ್ತೆ ಆರಂಭಿಸಲು ಹಿಂದೇಟು

ಸಿಗದ ಸಹಕಾರ: ಪ್ರೀ–ಪೇಡ್‌ ಆಟೋ ಸೇವೆ ಸ್ಥಗಿತ

ನಾಗರಾಜ್ ಬಿ.ಎನ್‌. Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಸಿದ್ಧಾರೂಢ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಆರಂಭವಾಗಿದ್ದ ಪ್ರೀ–ಪೇಡ್‌ ಆಟೊ ಸೇವೆ ಪೊಲೀಸರ ಹಾಗೂ ಆಟೊ ಚಾಲಕರ ಸಹಕಾರವಿಲ್ಲದೆ ಸ್ಥಗಿತಗೊಂಡಿದೆ.

ಬೆಂಗಳೂರು ಮೂಲದ ಪ್ರೀ–ಪೇಡ್‌ ಆಟೊ ಸರ್ವಿಸ್‌ ಸಂಸ್ಥೆ ವರ್ಷದ ಹಿಂದೆ ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ 24X7 ಕಾಲ ಸೇವೆ ನೀಡುವ ಯೋಜನೆಗೆ ಚಾಲನೆ ಕೊಟ್ಟಿತ್ತು. ಪ್ರಯಾಣಿಕರಿಂದ ಸೇವಾ ಶುಲ್ಕವೆಂದು ಪ್ರತಿ ಬಾಡಿಗೆಗೆ ₹2 ಪಡೆಯಲಾಗುತ್ತಿತ್ತು. ರೈಲ್ವೆ ನಿಲ್ದಾಣದಿಂದ 12 ಕಿ.ಮೀ. ವ್ಯಾಪ್ತಿಯಲ್ಲಿ ಸೇವೆ ನೀಡುತ್ತಿದ್ದ ಸಂಸ್ಥೆ, 1.60 ಕಿ.ಮೀ.ಗೆ ₹28 ದರ ನಿಗದಿ ಪಡಿಸಿತ್ತು. ಸೇವಾ ಶುಲ್ಕ ಸೇರಿ ಪ್ರಯಾಣಿಕರು ₹30 ನೀಡಬೇಕಾಗುತ್ತಿತ್ತು. ನಂತರದ ಪ್ರತಿ ಎರಡು ಕಿ.ಮೀ.ಗೆ ₹15ರಂತೆ ಬಾಡಿಗೆ ಪಡೆಯಲಾಗುತ್ತಿತ್ತು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಯೋಗದಲ್ಲಿ ಆಟೊಗಳಿಗೆ ಮೀಟರ್‌ ಅಳವಡಿಸಿ ನಗರದ ಪ್ರದೇಶಗಳನ್ನು ಸಮೀಕ್ಷೆ ಮಾಡಿ ದರ ನಿಗದಿ ಪಡಿಸಲಾಗಿತ್ತು. ಪ್ರಯಾಣಿಕರಿಂದ ಹೆಚ್ಚು ಹಣ ಕೇಳಲು ಅವಕಾಶವಿರಲಿಲ್ಲ. ಚಾಲಕರಿಂದ ಸಮಸ್ಯೆಯಾದರೆ ಪ್ರಯಾಣಿಕರು ತಾವು ಪಡೆದ ಟಿಕೆಟ್‌ ಮೇಲಿದ್ದ ನಂಬರ್‌ಗೆ ಕರೆ ಮಾಡಿ ದೂರು ಸಲ್ಲಿಸುವ ಅವಕಾಶ ಕಲ್ಪಿಸಲಾಗಿತ್ತು. ಈ ಯೋಜನೆಗೆ ರೈಲ್ವೆ ಇಲಾಖೆ ಕೂಡ ಸಹಕಾರ ನೀಡಿದ್ದರಿಂದ ಜನಸ್ನೇಹಿ ಯೋಜನೆ ಇದಾಗಿತ್ತು.

‘ಆರಂಭದ ಒಂದು ತಿಂಗಳು ಮಾತ್ರ ಈ ವ್ಯವಸ್ಥೆ ಉತ್ತಮವಾಗಿ ನಡೆದಿತ್ತು. ನಂತರ ಆಟೊ ಚಾಲಕರು ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ನಿಯಮಾವಳಿ ಪ್ರಕಾರ ನಾವು ಒಂದು ಆಟೊದಲ್ಲಿ ಮೂವರಿಗೆ ಮಾತ್ರ ಅವಕಾಶ ನೀಡುತ್ತಿದ್ದೆವು. ಆದರೆ, ಅವರು ಐದಾರು ಮಂದಿಯನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ, ಆಟೊ ಚಾಲಕರು ನೇರವಾಗಿ ಪ್ಲಾಟ್‌ಫಾರ್ಮ್‌ಗೆ ಹೋಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದರು. ಇದನ್ನು ತಪ್ಪಿಸಲು ಒಬ್ಬ ಆರ್‌ಪಿಎಫ್‌ ಸಿಬ್ಬಂದಿಯನ್ನು ಕಾಯಂ ಆಗಿ ನೇಮಿಸಬೇಕು ಎಂದು ರೈಲ್ವೆ ಇಲಾಖೆಗೆ ವಿನಂತಿಸಲಾಗಿತ್ತು. ಸಿಬ್ಬಂದಿ ಕೊರತೆ ಎಂದು ಕೈಚೆಲ್ಲಿದರು’ ಎಂದು ಪ್ರೀ–ಪೇಡ್‌ ಆಟೊ ಸರ್ವಿಸ್‌ ಸಂಸ್ಥೆ ಅಧ್ಯಕ್ಷ ಬಿ. ಚಂದ್ರಶೇಖರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಪ್ರೀ–ಪೇಡ್‌ ಆಟೊ ಸೇವೆ ಉತ್ತಮವಾಗಿದೆ. ರಾತ್ರಿ ವೇಳೆ ರೈಲಿನಿಂದ ಬಂದು ಮನೆಗೆ ಬರುವಾಗ ಜನರಿಗೆ ಸುರಕ್ಷತೆಯ ಭಾವನೆ ಇರುತ್ತಿತ್ತು. ಲಾಕ್‌ಡೌನ್‌ ನಂತರ ರೈಲು ಸಂಚಾರ ಪುನರಾರಂಭವಾಗಿದೆ ರಾತ್ರಿ ವೇಳೆ ಆಟೊ ಬಾಡಿಗೆ ದರ ಮೂರ್ನಾಲ್ಕು ಪಟ್ಟು ಹೆಚ್ಚು ಕೇಳುತ್ತಾರೆ’ ಎಂದು ಹಳೇಹುಬ್ಬಳ್ಳಿ ನಿವಾಸಿ ರವೀಂದ್ರ ಚಲವಾದಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.