ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ವರ್ಷವಾದರೂ NWKRTCಯಲ್ಲಿ ಸಿಬ್ಬಂದಿಗೆ ಹೆಚ್ಚದ ವೇತನ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿ ಗೋಳು ಕೇಳುವವರೇ ಇಲ್ಲ
Last Updated 24 ಡಿಸೆಂಬರ್ 2022, 4:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್ ಸಂದರ್ಭದಲ್ಲಿ ದೇಶದ ಆರ್ಥಿಕ ಸ್ಥಿತಿಗತಿ ಎಲ್ಲ ರಂಗಗಳಲ್ಲಿಯೂ ಏರುಪೇರಾಗಿದೆ. ಸಾರಿಗೆ ಇಲಾಖೆಯ ಪರಿಸ್ಥಿತಿಯೂ ಇದಕ್ಕೆ ಹೊರತಾಗಿರಲಿಲ್ಲ. ಕೋವಿಡ್ ನಂತರದ ದಿನಗಳಲ್ಲಿ ರಾಜ್ಯ ಸಾರಿಗೆ ಇಲಾಖೆ ವೇತನ ಹೆಚ್ಚಿಸಬಹುದು ಎಂಬ ಸಿಬ್ಬಂದಿ ವರ್ಗದ ನಿರೀಕ್ಷೆ ಇನ್ನೂ ನಿರೀಕ್ಷೆಯಾಗಿಯೇ ಉಳಿದಿದೆ.

ಚಾಲಕರು, ನಿರ್ವಾಹಕರು, ಅಧಿಕಾರಿಗಳನ್ನು ಒಳಗೊಂಡಂತೆ ಒಟ್ಟು 21,851 ಸಿಬ್ಬಂದಿಯವರು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ವೇತನ ಹೆಚ್ಚಿಲ್ಲ ಎನ್ನುವ ಬೇಸರ ಸಿಬ್ಬಂದಿ ವರ್ಗಕ್ಕಿದೆ.

‘ಸಾಮಾನ್ಯವಾಗಿ ನಾಲ್ಕು ವರ್ಷಕ್ಕೊಮ್ಮೆ ವೇತನ ಹೆಚ್ಚಿಸಲಾಗುತ್ತದೆ. 2016ರಲ್ಲಿ ವೇತನ ಹೆಚ್ಚಿಸಲಾಗಿತ್ತು. ನಂತರ ಆಗಿಲ್ಲ. 2021ರ ಏಪ್ರಿಲ್‌ನಲ್ಲಿ ಸಾರಿಗೆ ಇಲಾಖೆ ನೌಕರರು ಎರಡು ವಾರ ಪ್ರತಿಭಟನೆ ನಡೆಸಿದ್ದರು. ಆದರೂ ಯಾವುದೇ ಪ್ರತಿಫಲ ದೊರೆತಿಲ್ಲ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಮದುರ್ಗದ ಸಿಬ್ಬಂದಿಯೊಬ್ಬರು ಮಾಹಿತಿ ನೀಡುತ್ತಾರೆ.

ಕೋವಿಡ್ ಸಂದರ್ಭಗಳಲ್ಲಿ ಭಯದ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಉದ್ಯೋಗ ಇಲ್ಲದಿದ್ದರೆ ಹೊಟ್ಟೆಗೂ ಏನೂ ಇರುತ್ತಿರಲಿಲ್ಲ. ಮುಖ್ಯಮಂತ್ರಿ ಅವರು ನಮ್ಮ ಭಾಗದವರೇ ಇರುವುದರಿಂದ ವೇತನ ಹೆಚ್ಚಿಸಬಹುದು ಎಂಬ ನಿರೀಕ್ಷೆ ಈಗಲೂ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಅವರು.

ಮಕ್ಕಳ ಶಿಕ್ಷಣ, ಬೆಲೆ ಏರಿಕೆ, ದಿನಸಿಗಳ ಬೆಲೆಯಲ್ಲಿ ಹೆಚ್ಚಳ, ವೈದ್ಯಕೀಯ ಖರ್ಚು ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಕಲಿಕೆಗೆ ಬೇಕಾದ ಪುಸ್ತಕ ಮತ್ತಿತರ ಸಾಮಗ್ರಿಗಳಿಗೆ ಖರ್ಚಾಗುತ್ತದೆ. ಕಡಿಮೆ ವೇತನದಿಂದಾಗಿ ಕುಟುಂಬ ನಿರ್ವಹಣೆಯೂ ಕಠಿಣ ಎನಿಸಿದೆ. ಹೀಗೆಯೇ ಮುಂದುವರಿದರೆ ಸಾಲದ ಸುಳಿಯಲ್ಲಿ ಸಿಲುಕುತ್ತೇವೆ ಎಂದು ಅಳಲು ತೋಡಿಕೊಂಡರು.

ತುಟ್ಟಿಯಾದ ಭತ್ಯೆ: ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಆಗಿದೆ. ಆದರೆ ನಮಗೆ ಅಧಿಕೃತವಾಗಿ ಸರ್ಕಾರದ ಆದೇಶ ಸಿಕ್ಕಿಲ್ಲ. ಈಗ ಇರುವ ವೇತನ, ತುಟ್ಟಿಭತ್ಯೆ ಸರಿಯಾದ ಸಮಯಕ್ಕೆ ನೀಡುತ್ತಿದ್ದೇವೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತೆಲಗಾರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT