ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಮದ್ಯ ವ್ಯಾಪಾರದಲ್ಲಿಲ್ಲ ‘ಕಿಕ್‌’

ಲಾಕ್‌ಡೌನ್‌ ತೆರವಾಗಿ ಮೂರು ತಿಂಗಳಾದರೂ ಚೇತರಿಸಿಕೊಳ್ಳದ ವಹಿವಾಟು
Last Updated 25 ಆಗಸ್ಟ್ 2020, 20:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮದ್ಯದಂಗಡಿಗಳನ್ನು ಆರಂಭಿಸಲು ಸರ್ಕಾರ ಅನುಮತಿ ಕೊಟ್ಟು ಮೂರು ತಿಂಗಳು ಕಳೆದರೂ ಮೊದಲಿನಂಗ ವ್ಯಾಪಾರ ಆಗ್ತಿಲ್ಲ. ಹಿಂಗ ಮುಂದುವರದ್ರ ಅಂಗಡಿ ಮುಚ್ಚೊದೊಂದ ಬಾಕಿ ಐತ್ರಿ...’

ಇದು ನಗರದ ಕರ್ನಾಟಕ ವೈನ್‌ ಮಾರ್ಟ್‌ ಮಾಲೀಕ ವಿನಾಯಕ ಆಕಳವಾಡಿ ಅವರ ಅಳಲು. ಇದೇ ರೀತಿಯ ಸಂಕಟವನ್ನು ಹಲವು ಮಾಲೀಕರು ವ್ಯಕ್ತಪಡಿಸಿದ್ದಾರೆ.

ಕೋವಿಡ್‌ ಹರಡುವಿಕೆ ತಡೆಗಟ್ಟುವ ಸಲುವಾಗಿ ಮಾರ್ಚ್‌ 21ರಿಂದ 42 ದಿನಗಳ ಕಾಲ ಜಿಲ್ಲೆಯಲ್ಲಿ ಬಂದ್ ಮಾಡಲಾಗಿದ್ದ ಮದ್ಯ ಮಾರಾಟದ ಅಂಗಡಿಗಳನ್ನು ಸರ್ಕಾರವು, ಮೇ 4ರಂದು ಪುನರಾರಂಭಗೊಳಿಸಿತ್ತು. ಮೂರು ತಿಂಗಳು ಕಳೆದರೂ ವಹಿವಾಟು ಮೊದಲಿನಂತೆ ಕುದುರಿಲ್ಲ. ಬಾರ್‌ಗಳಲ್ಲಿ ಎಂಆರ್‌ಪಿ ಬೆಲೆಯಲ್ಲಿ ಮಾರಾಟ ಮಾಡಿದರೂ ನಿರೀಕ್ಷಿತ ವ್ಯಾಪಾರ ನಡೆಯುತ್ತಿಲ್ಲ. ಅಂಗಡಿಗಳ ನಿರ್ವಹಣೆ, ಸಿಬ್ಬಂದಿ ವೇತನ, ಬಾಡಿಗೆ ಹಾಗೂ ಇನ್ನಿತರ ಖರ್ಚುಗಳನ್ನು ಸರಿದೂಗಿಸಲು ಮಾಲೀಕರು ಪರದಾಡುತ್ತಿದ್ದಾರೆ.

ಮೂರು ತಿಂಗಳ ಹಿಂದೆ ಮದ್ಯದಂಗಡಿಗಳು ಪುನರಾರಂಭವಾದಾಗ ಗ್ರಾಹಕರು ಬೆಳಗಿನ ಜಾವದಿಂದಲೇ ಸರತಿಯಲ್ಲಿ ನಿಂತು ಖರೀದಿಸಿದ್ದರು. ಕೆಲವೆಡೆ ನೂಕುನುಗ್ಗಲು ಉಂಟಾಗಿತ್ತು. ಆರಂಭದ ದಿನಗಳಲ್ಲಿ ಕಂಡು ಬಂದ ಬೇಡಿಕೆ ನಂತರದ ದಿನಗಳಲ್ಲಿ ‌ಕುಸಿತದತ್ತ ಸಾಗಿದೆ.

ಕೋವಿಡ್ ಹೊಡೆತಕ್ಕೆ ಸಿಲುಕಿದ ಅನೇಕ ಸಂಸ್ಥೆಗಳು ಹಾಗೂ ಕಂಪನಿಗಳು ಪೂರ್ಣ ಪ್ರಮಾಣದಲ್ಲಿ ಉದ್ಯೋಗಿಗಳಿಗೆ ವೇತನ ನೀಡುತ್ತಿಲ್ಲ. ಸರಿಯಾಗಿ ದುಡಿಮೆಯೂ ಇರದ ಕಾರಣ ಜನರ ಬಳಿ ಹಣವಿಲ್ಲ. ಇದಕ್ಕೂ ಮುಂಚೆ ಹಣವಿದ್ದಾಗ ಹೆಚ್ಚಿನ ಹಣ ತೆತ್ತು ಕುಡಿಯುತ್ತಿದ್ದವರು, ಈಗ ಹಣದ ಕೊರತೆಯಿಂದಾಗಿ ಕಡಿಮೆ ಬೆಲೆಯ ಮದ್ಯದತ್ತ ಮುಖ ಮಾಡಿದ್ದಾರೆ. ಕೆಲವರ ಸ್ಥಿತಿಯಂತೂ ಅನ್ನಕ್ಕೂ ಪರದಾಡುವಂತಿದೆ ಎಂದು ಮದ್ಯದಂಗಡಿಗಳ ಮಾಲೀಕರು ಹೇಳುತ್ತಾರೆ.

’ಲಾಕ್‌ಡೌನ್‌ಗಿಂತಲೂ ಮೊದಲು ಸಾಧಾರಣವಾಗಿ ದಿನನಿತ್ಯ ₹ 2 ಲಕ್ಷದಿಂದ ₹3 ಲಕ್ಷದ ತನಕ ವ್ಯಾಪಾರವಾಗುತ್ತಿತ್ತು. ಪ್ರತಿ ಬುಧವಾರ, ಶನಿವಾರ ಮತ್ತು ಭಾನುವಾರ ಇನ್ನೂ ಹೆಚ್ಚಿನ ವಹಿವಾಟು ನಡೆಯುತ್ತಿತ್ತು. ಶ್ರೀಮಂತರು ಕೂಡ ಕಡಿಮೆ ಬೆಲೆಯ ಮದ್ಯವನ್ನು ಸೇವಿಸುತ್ತಿದ್ದಾರೆ. ಹೀಗಾಗಿ ವಹಿವಾಟು ಕಡಿಮೆಯಾಗಿದೆ.ಈಗ ನಿತ್ಯ ₹ 1 ಲಕ್ಷ ವಹಿವಾಟು ನಡೆದರೆ ಅದೇ ಹೆಚ್ಚು’ ಎಂದು ಅಂಗಡಿಯ ಮಾಲೀಕ ವಿನಾಯಕ ಆಕಳವಾಡಿ ಹೇಳಿದರು.

ನಗರದ ಮಧುಬನ ಬಾರ್ ಅಂಡ್‌ ರೆಸ್ಟೋರೆಂಟ್‌ ಮಾಲೀಕ ಟಿ.ಎಂ. ಮೆಹರವಾಡೆ ಪ್ರತಿಕ್ರಿಯಿಸಿ, ’ಮದುವೆ, ಜಾತ್ರೆ, ಸಂತೆಗೆ ಅವಕಾಶ ನೀಡಬೇಕು. ಪ್ರವಾಸಿ ತಾಣಗಳ ಮೇಲಿನ ನಿರ್ಬಂಧ ತೆರವುಗೊಳಿಸಬೇಕು. ಆಗ ಮದ್ಯ ಮಾರಾಟ ಉದ್ಯಮ ಚೇತರಿಸಿಕೊಳ್ಳಲು ಸಾಧ್ಯ’ ಎಂದರು.

ಮದ್ಯ ಮಾರಾಟ; ಶೇ 10ಕ್ಕೆ ಇಳಿಕೆ

‘ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ಕುಸಿತ ಕಂಡಿದೆ. ಆಗಸ್ಟ್‌ನಲ್ಲಿ ಶೇ 10ರಷ್ಟು ಮಾತ್ರ ವ್ಯಾಪಾರವಾಗಿದೆ’ ಎಂದು ಅಬಕಾರಿ ಇಲಾಖೆ ಉಪಆಯುಕ್ತ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲಾಖೆಗೆ ಮದ್ಯ ಮಾರಾಟ ಹಾಗೂ ಸಾರ್ವಜನಿಕರ ಆರೋಗ್ಯ ಎರಡೂ ಮುಖ್ಯ. ಆದರೆ, ಜನರ ಆರೋಗ್ಯಕ್ಕೆ ಮೊದಲ ಆದ್ಯತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT