ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಆಸನ ಭರ್ತಿಯೊಂದಿಗೆ ಬಸ್‌ ಸಂಚಾರ

ಆದಾಯ ಚೇತರಿಕೆ ನಿರೀಕ್ಷೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
Last Updated 4 ಜುಲೈ 2021, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರ್ಕಾರ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಯೊಂದಿಗೆ ಕಾರ್ಯಾಚರಣೆ ನಡೆಸಲಿದೆ.

‘ಲಾಕ್‌ಡೌನ್‌ನಿಂದಾಗಿ ಸೇವೆ ಸ್ಥಗಿತಗೊಳಿಸಿದ್ದ ಸಂಸ್ಥೆಯು ಭಾಗಶಃ ಅನ್‌ಲಾಕ್‌ ಬಳಿಕ, ಜೂನ್ 21ರಿಂದ ಶೇ 50ರಷ್ಟು ಆಸನಗಳ ಭರ್ತಿಯೊಂದಿಗೆ ಸೇವೆ ಆರಂಭಿಸಿತ್ತು. ಇದೀಗ ಆಸನಗಳ ಭರ್ತಿಗೆ ಯಾವುದೇ ಮಿತಿ ಇಲ್ಲ. ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಿರುವುದರಿಂದ, ಜನರ ಓಡಾಟ ಹೆಚ್ಚಾಗಲಿದ್ದು ಸಂಸ್ಥೆಯ ಆದಾಯವೂ ಚೇತರಿಸಿಕೊಳ್ಳಲಿದೆ’ ಎಂದು ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸೇವೆ ವಿಸ್ತರಣೆ:

‘ಹಳ್ಳಿಗಳಿಗೆ ಮತ್ತು ಹೊರಜಿಲ್ಲೆಗಳಿಗೆ ಬಸ್ ಸೇವೆ ವಿಸ್ತರಿಸಲಾಗಿದೆ. ಬೆಳಗಾವಿ, ಗದಗ, ಹಾವೇರಿ, ಶಿರಹಟ್ಟಿ, ಕಲಘಟಗಿ ಕುಂದಗೋಳ, ತಡಸ, ಲಕ್ಷ್ಮೇಶ್ವರ, ಹಾನಗಲ್ ಮುಂತಾದ ಸ್ಥಳಗಳಿಗೆ ನಿರಂತರವಾಗಿ ಬಸ್ಸುಗಳನ್ನು ಬಿಡಲಾಗುತ್ತದೆ. ವಿಜಯಪುರ, ಬಾಗಲಕೋಟೆ, ದಾವಣಗೆರೆ ಮತ್ತಿತರ ಜಿಲ್ಲೆಗಳಿಗೆ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್ಸುಗಳನ್ನು ಹೆಚ್ಚಿಸಲಾಗುವುದು’ ಎಂದಿದ್ದಾರೆ.

‘ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ವಿಧಿಸಲಾಗಿದ್ದರೂ, ಬಸ್ ಸಂಚಾರಕ್ಕೆ ನಿರ್ಬಂಧವಿಲ್ಲ.ದೂರ ಮಾರ್ಗದ ಬಸ್‌ಗಳ ಸಂಚಾರ ದಿನಪೂರ್ತಿ ಲಭ್ಯವಿರುತ್ತದೆ. ಜನ ತಮ್ಮ ಪ್ರಯಾಣ ಟಿಕೆಟ್, ಅಧಿಕೃತ ದಾಖಲೆ ಹಾಗೂ ಗುರುತಿನ ಪತ್ರದೊಂದಿಗೆ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ನಿರಾತಂಕವಾಗಿ ಪ್ರಯಾಣಿಸಬಹುದು’ ಎಂದು ತಿಳಿಸಿದ್ದಾರೆ.

ಪೂರ್ಣ ಆಸನಗಳ ಭರ್ತಿಯೊಂದಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿದ ಬೆನ್ನಲ್ಲೇ, ಮುನ್ನೆಚ್ಚರಿಕೆ ಕ್ರಮವಾಗಿ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಹೊಸೂರು, ಗೋಕುಲ ರಸ್ತೆ ಬಸ್ ನಿಲ್ದಾಣ, ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಬಸ್ ನಿಲ್ದಾಣಗಳನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಮಾಡಲಾಯಿತು. ನಿತ್ಯ ಸಂಚಾರ ಮುಗಿಸಿ ಡಿಪೋಗಳಿಗೆ ಹಿಂದಿರುಗುವ ಬಸ್‌ಗಳಿಗೂ ಸ್ಯಾನಿಟೈಸ್ ಮಾಡಲಾಗುತ್ತಿದೆ.

‘₹24 ಲಕ್ಷ ಆದಾಯ ಸಂಗ್ರಹ’

‘ಕಳೆದ ವಾರ ಹುಬ್ಬಳ್ಳಿ ವಿಭಾಗದಲ್ಲಿ ನಿತ್ಯ ಸುಮಾರು 255 ಬಸ್‌ಗಳು ಸಂಚರಿಸಿದ್ದು, 44 ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸಿದ್ದಾರೆ. ಸಂಸ್ಥೆಗೆ ನಿತ್ಯ ಅಂದಾಜು ₹24 ಲಕ್ಷ ಆದಾಯ ಸಂಗ್ರಹವಾಗಿದೆ. ಈಗ ವಾಣಿಜ್ಯ ವ್ಯವಹಾರಗಳ ಅವಧಿಯನ್ನು ರಾತ್ರಿ 9ರವರೆಗೆ ಹೆಚ್ಚಿಸಲಾಗಿದ್ದು, ಮತ್ತಷ್ಟು ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ’ ಎಂದುಎಚ್. ರಾಮನಗೌಡರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಕೋವಿಡ್‌ಗೂ ಮುಂಚೆ ಅಂತರ ಜಿಲ್ಲೆಗಳು ಹಾಗೂ ಅಂತರ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ನಿರ್ಬಂಧವಿಲ್ಲದೆ ದಿನದ 24 ಗಂಟೆಯೂ ಬಸ್ಸುಗಳು ಸಂಚರಿಸುತ್ತಿದ್ದವು. ವಿವಿಧ ರಿಯಾಯಿತಿ ಪಾಸ್‌ಗಳ ಪ್ರಯಾಣಿಕರು ಸೇರಿದಂತೆ ಸುಮಾರು 1.45 ಲಕ್ಷ ಜನ ಹಾಗೂ 45 ಸಾವಿರದಷ್ಟು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಸಂಸ್ಥೆಗೆ ನಿತ್ಯ ಅಂದಾಜು ₹55 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT