ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ನಡೆಸಿದರೆ ಸೂಕ್ತ ಕ್ರಮ

ಅಧಿಕಾರಿಗಳಿಗೆ ಕಾರ್ಮಿಕ ಸಚಿವ ಸಂತೋಷ ಲಾಡ್ ಖಡಕ್ ಎಚ್ಚರಿಕೆ
Published 7 ಜೂನ್ 2023, 6:50 IST
Last Updated 7 ಜೂನ್ 2023, 6:50 IST
ಅಕ್ಷರ ಗಾತ್ರ

ಧಾರವಾಡ: ‘ಜನಪರ ಆಡಳಿತ ನೀಡುವುದು ಸರ್ಕಾರಿ ನೌಕರರ ಕರ್ತವ್ಯ. ಅದನ್ನು ಬಿಟ್ಟು ಟೇಬಲ್ ಮೇಲೆ- ಕೆಳಗಿನ ವ್ಯವಹಾರ ಮಾಡಲು ಯತ್ನಿಸಿದರೆ ಸಹಿಸೊಲ್ಲ. ತಾಳ್ಮೆಯಿಂದ ಕೆಲಸ ನಿರ್ವಹಿಸಿ, ಸಾರ್ವಜನಿಕರ ಅಗತ್ಯಗಳನ್ನು ಪೂರೈಸಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

‘ಜನಸ್ನೇಹಿ ಆಡಳಿತಕ್ಕೆ ನನ್ನ ಆದ್ಯತೆ. ಅದಕ್ಕೆ ಪೂರಕವಾಗಿ ಎಲ್ಲ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡಬೇಕು. ಜನಸ್ನೇಹಿ ಸೇವೆಗೆ ಬದ್ಧನಾಗಿದ್ದು, ಅಧಿಕಾರಿಗಳು ಬೆಂಬಲವಾಗಿ ನಿಂತು ಬದ್ಧತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಅವ್ಯವಹಾರಗಳು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

‘ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳ ನಡುವೆ ಹೊಂದಾಣಿಕೆ ಇರಬೇಕು. ಕೃಷಿ- ಕೃಷಿಯೇತರ ಜಮೀನು, ಕೊಳವೆ ಬಾವಿಗಳು, ಅವುಗಳಿಗೆ ವಿದ್ಯುತ್ ಸಂಪರ್ಕದ ಅಂಕಿ-ಅಂಶಗಳು ತಾಳೆ ಆಗಬೇಕು. ಕಲಘಟಗಿ ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್ ಅಡಿ ₹27 ಕೋಟಿ ವೆಚ್ಚದಲ್ಲಿ ಶೇ 60ರಷ್ಟು ಕಾರ್ಯ ಮುಗಿದಿದ್ದು, ರಸ್ತೆಗಳನ್ನು ಮೊದಲಿದ್ದ ರೀತಿ ನಿರ್ಮಿಸಬೇಕು’ ಎಂದರು.

‘ಅಪೂರ್ಣ ಕಾಮಗಾರಿಯಾದರೆ ಹಣ ಬಿಡುಗಡೆ ಮಾಡದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಕ್ಷೇತ್ರದಲ್ಲಿ 560 ಕಿ.ಮೀ. ರಸ್ತೆ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಿಗದಿ ಹಾಗೂ ಮುಗದ ಕೆರೆಗಳ ರಕ್ಷಣೆ ಹಾಗೂ ಸೌಂದರ್ಯೀಕರಣಕ್ಕೆ ಯೋಜನೆ ರೂಪಿಸುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಲಘಟಗಿ ತಾಲ್ಲೂಕಿನ ಒಟ್ಟು ಜಲಾನಯನ ಕ್ಷೇತ್ರವನ್ನು ಸಮೀಕ್ಷೆ ಮಾಡುವಂತೆ ಉಪ ವಿಭಾಗಾಧಿಕಾರಿ ಅಶೋಕ ತೇಲಿಗೆ ತಿಳಿಸಿದರು.

‘ಕಾಂಗ್ರೆಸ್ ಚುನಾವಣೆ ವೇಳೆ ನೀಡಿದಂತೆ, 5 ಗ್ಯಾರಂಟಿಗಳು ₹60 ಸಾವಿರ ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಈ ಮಹತ್ವಕಾಂಕ್ಷಿ ಯೋಜನೆಗಳ ಜಾರಿಯಲ್ಲಿ ಹಲವು ಇಲಾಖೆಗಳ ಪಾತ್ರ ಮಹತ್ವದ್ದು’ ಎಂದರು.

ತಹಶೀಲ್ದಾರ್ ಡಾ. ಮೋಹನ ಭಸ್ಮೆ, ತಾಲ್ಲೂಕು ಪಂಚಾಯ್ತಿ ಇಒ ಗಂಗಾಧರ ಕಂದಕೂರ ಇದ್ದರು.

ಸಚಿವರಾದ ಬಳಿಕ ಮೊದಲ ಬಾರಿಗೆ ಧಾರವಾಡ ನಗರಕ್ಕೆ ಬಂದ ಸಂತೋಷ ಲಾಡ್, ಮುರುಘಾಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ಸ್ವಾಮೀಜಿ ಭೇಟಿ ಮಾಡಿ, ಆಶೀರ್ವಾದ ಪಡೆದು ಕೆಲ ಹೊತ್ತು ಮಾತುಕತೆ ನಡೆಸಿದರು. ಅಲ್ಲಿಂದ ಶಾಸಕ ವಿನಯ ಕುಲಕರ್ಣಿ ಹಾಗೂ ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆ ಮನೆಗೆ ಭೇಟಿ ನೀಡಿದರು.

ಧಾರವಾಡದ ತಾಲ್ಲೂಕು ಪಂಚಾಯ್ತ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದರು. ಹಸೀಲ್ದಾರ್ ಡಾ. ಮೋಹನ ಭಸ್ಮೆ ತಾ.ಪಂ. ಇಒ ಗಂಗಾಧರ ಕಂದಕೂರ ಇದ್ದಾರೆ.
ಧಾರವಾಡದ ತಾಲ್ಲೂಕು ಪಂಚಾಯ್ತ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾತನಾಡಿದರು. ಹಸೀಲ್ದಾರ್ ಡಾ. ಮೋಹನ ಭಸ್ಮೆ ತಾ.ಪಂ. ಇಒ ಗಂಗಾಧರ ಕಂದಕೂರ ಇದ್ದಾರೆ.

ಮಾಹಿತಿಯೊಂದಿಗೆ ಸಭೆಗೆ ಬನ್ನಿ: ‘ಅಧಿಕಾರಿಗಳು ಸಭೆಗೆ ಬರುವಾಗ ಕನಿಷ್ಠ ಮಾಹಿತಿ ಹೊಂದಿರಬೇಕು. ಏನೇ ಮಾಹಿತಿ ಕೇಳಿದರೂ ನಾಲಗೆ ತುದಿಯಲ್ಲಿ ಇರಬೇಕು. ಇನ್ನು ಮುಂದೆ ನಡೆಯುವ ಸಭೆಗಳಲ್ಲಿ ಸರಿಯಾದ ಮಾಹಿತಿ ನೀಡದಿದ್ದರೆ ಸಹಿಸೊಲ್ಲ. ಒಂದೇ ದಿನ ಗರಿಷ್ಠ ಸಸಿ ನೆಟ್ಟ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಮುಂದಿನ ಪರಿಸರ ದಿನದಂದು ಜಿಲ್ಲೆಯಲ್ಲಿ ಅಂದಾಜು 50 ಲಕ್ಷ ಮೌಲ್ಯದ ಸಸಿಗಳನ್ನು ನೆಟ್ಟು ದಾಖಲೆ ಮಾಡೋಣ’  ಎಂದು ಸಚಿವ ಲಾಡ್ ಹೇಳಿದರು.

ಕಾರ್ಮಿಕರ ಸಮಸ್ಯೆ ಬಗೆಹರಿಸಿ: ಬೇಲೂರು ಕೈಗಾರಿಕಾ ಪ್ರದೇಶದ ಟಾಟಾ ಮಾರ್ಕೋಪೋಲೊ ಕಂಪನಿಯ ನೂರಾರು ನೌಕರರನ್ನು ಲಖನೌಗೆ ವರ್ಗಾವಣೆ ಮಾಡಿದ ಪ್ರಕರಣ ಸಭೆಯಲ್ಲಿ ಚರ್ಚೆಗೆ ಬಂದಿತು. ಕಂಪನಿಯ ಅಧಿಕಾರಿಯನ್ನು ಕರೆಸಿದ ಸಚಿವರು ‘ಈ ಪ್ರಕರಣದಲ್ಲಿ ಯಾರೊಬ್ಬರಿಗೂ ಅನ್ಯಾಯ ಆಗಬಾರದು. ಕೂಡಲೇ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಸಂಧಾನ ಸಭೆ ಜರುಗಿಸಿ. ಸೌಹಾರ್ದತೆಯಿಂದ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ’ ಎಂದು ಕಟ್ಟುನಿಟ್ಟಾಗಿ ಹೇಳಿದರು.

ಜಾನುವಾರು ಲಸಿಕೆಗೆ ಬರುತ್ತೇನೆ: ಪಶು ಸಂಗೋಪನೆ ಇಲಾಖೆ ಜಾನುವಾರುಗಳಿಗೆ ಕಾಲ ಕಾಲಕ್ಕೆ ಲಸಿಕೆ ಹಾಕಬೇಕು. ಸಭೆಗಳಲ್ಲಿ ಲಸಿಕೆ ಹಾಕಿದ ಸಂಖ್ಯೆ ಸಿಗುತ್ತದೆ. ಆದರೆ ನಾನು ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಜಾನುವಾರುಗಳಿಗೆ ಲಸಿಕೆ ಹಾಕುತ್ತಿರುವುದನ್ನು ನೋಡಿಲ್ಲ’ ಎಂದು ಲಾಡ್‌ ಹೇಳಿದರು. ‘ಮುಂದಿನ ಬಾರಿ ಲಸಿಕೆ ಹಾಕುವಾಗ ನಿಮ್ಮನ್ನು ಆಹ್ವಾನಿಸುತ್ತೇನೆ' ಎಂದು ಇಲಾಖೆ ಅಧಿಕಾರಿ ಹೇಳಿದರು. ‘ಖಂಡಿತ ಬರುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT