ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಡಾವಣೆಗಳಲ್ಲೂ ಹಳೇ ಸಮಸ್ಯೆ

ನಡೆಯದ ಕಸ ವಿಲೇವಾರಿ, ರಸ್ತೆ, ಕುಡಿಯುವ ನೀರು, ಬೀದಿ ದೀಪಗಳ ಅವ್ಯವಸ್ಥೆ
Last Updated 9 ಮಾರ್ಚ್ 2022, 5:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ದಿನದಿಂದ ದಿನಕ್ಕೆ ಹೊಸ ಬಡಾವಣೆಗಳು ಆಗುತ್ತಿವೆ. ಅದಕ್ಕೆ ತಕ್ಕಂತೆ ಮನೆಗಳು ಕೂಡ ನಿರ್ಮಾಣವಾಗುತ್ತಿವೆ. ಆದರೆ, ಜನ ಮಾತ್ರ ಮೂಲ ಸೌಕರ್ಯಗಳ ಕೊರತೆಯ ನಡುವೆ ವಾಸಿಸುವಂತಾಗಿದೆ.

ಲಿಂಗರಾಜ ನಗರದ ಬ್ರಿಡ್ಜ್‌ ಪಕ್ಕದ ರಸ್ತೆಯಲ್ಲಿ (ಗ್ಲೋಬಲ್‌ ಕಾಲೇಜು) ನೇರವಾಗಿ ಹೋದರೆ ರಾಜೀವ್‌ ನಗರ, ಚಿಂಪಲಿ ನಗರ, ಸಂಪಿಗೆ ನಗರ, ಶ್ರೀದತ್ತ ನಗರ, ರೈಲ್‌ ನಗರಗಳು ಬರುತ್ತವೆ. ಇವುಗಳನ್ನು ದಾಟಿಕೊಂಡು ಎಡಭಾಗದಲ್ಲಿ ಒಳಕ್ಕೆ ಹೋದರೆ ದ್ಯಾಮನಗೌಡರ ಲೇ ಔಟ್‌ ಬರುತ್ತದೆ. ಅಲ್ಲಿ ಬಹುತೇಕ ಜನ ಸ್ವಂತ ಮನೆಯಲ್ಲಿ ವಾಸವಾಗಿದ್ದಾರೆ. ಏಳೆಂಟು ವರ್ಷಗಳ ಹಿಂದೆಯಷ್ಟೇ ನಿರ್ಮಾಣಗೊಂಡ ಈ ಬಡಾವಣೆಗಳು 49ನೇ ವಾರ್ಡ್‌ ವ್ಯಾಪ್ತಿಯಲ್ಲಿವೆ.

ಶ್ರೀದತ್ತ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಉದ್ಯಾನಕ್ಕೆ ಜಾಗವಿದ್ದರೂ ಕಸದ ತೊಟ್ಟೆಯಾಗಿದೆ. ಚರಂಡಿ ನಿರ್ಮಾಣವಾಗಿಲ್ಲ. ದ್ಯಾಮನಗೌಡರ ಲೇ ಔಟ್‌ನಲ್ಲಿ ಏಳೆಂಟು ವರ್ಷಗಳ ಹಿಂದೆಯೇ ಮನೆಗಳು ನಿರ್ಮಾಣಗೊಂಡಿವೆ. ಇದುವರೆಗೂ ಮಹಾನಗರ ಪಾಲಿಕೆಯಿಂದ ನೀರು ಪೂರೈಕೆ ಆಗುತ್ತಿಲ್ಲ. ರಸ್ತೆ, ಉದ್ಯಾನ, ಕುಡಿಯುವ ನೀರು ಸಿಗುವುದಿಲ್ಲ. ಬಸ್‌ಗಳ ಓಡಾಟವೂ ಇಲ್ಲದ ಕಾರಣ ಜನ ಆಟೊಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಬಡಾವಣೆ ಒಳಗೆ ಬಂದರೆ ವಾಪಸ್‌ ಖಾಲಿ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಆಟೊದವರು ಕೂಡ ಬರಲು ಹಿಂದೇಟು ಹಾಕುತ್ತಾರೆ ಎಂದು ಸ್ಥಳೀಯರು ದೂರುತ್ತಾರೆ.

ಬೋರ್‌ವೆಲ್‌ ನೀರು ಬಳಕೆಗೆ ಆಧಾರವಾದರೆ, ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಇದಕ್ಕಾಗಿ ದ್ಯಾಮನಗೌಡರ ಲೇ ಔಟ್‌ನ ಜನ ಲಿಂಗರಾಜ ನಗರದ ಗ್ಲೋಬಲ್‌ ಕಾಲೇಜು ಅಥವಾ ಬನಶಂಕರಿ ಬಡಾವಣೆಗೆ ಹೋಗಬೇಕಾಗಿದೆ.

ಇದೇ ಬಡಾವಣೆಯಲ್ಲಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ನಿರ್ಮಿಸಿದೆ. ಅಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಸಾಕಷ್ಟು ಮನೆಗಳು ನಿರ್ಮಾಣವಾದರೂ ಖಾಲಿ ಇರುವ ನಿವೇಶನಗಳಲ್ಲಿ ಕಸ ತುಂಬಿ, ಮರಗಳು ಬೆಳೆದು ನಿಂತಿವೆ. ಸಂಜೆಯಾದರೆ ಸಾಕು ವಸತಿ ನಿಲಯದ ಸುತ್ತಮುತ್ತಲಿನ ಜಾಗ ಕುಡುಕರ ಅಡ್ಡೆಯಾಗುತ್ತಿದೆ.

ಏಳು ವರ್ಷಗಳಿಂದ ಶ್ರೀದತ್ತ ನಗರ ಬಡಾವಣೆಯಲ್ಲಿ ವಾಸವಿರುವ ಶ್ರುತಿ ಅವರಸಂಗ ಪ್ರತಿಕ್ರಿಯಿಸಿ ‘ಮೂರ್ನಾಲ್ಕು ದಿನಕ್ಕೊಮ್ಮೆ ಪಾಲಿಕೆ ಸಿಬ್ಬಂದಿ ಕಸ ವಿಲೇವಾರಿಗೆ ಬರುತ್ತಾರೆ. ಇದನ್ನು ನಿತ್ಯ ಮಾಡಬೇಕು. ಮನೆಯ ಎದುರೇ ಉದ್ಯಾನಕ್ಕೆ ಜಾಗ ಬಿಟ್ಟಿದ್ದರೂ ಅಭಿವೃದ್ಧಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

* ಹೊಸ ಬಡಾವಣೆಯಲ್ಲಿ ಜನ ಮನೆ ಕಟ್ಟಿಸುತ್ತಿರುವಾಗಲೇ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಇನ್ನೂ ಹೆಚ್ಚು ಜನ ಬಂದು ನೆಲೆಸುತ್ತಾರೆ. ಬಡಾವಣೆಯೂ ಅಭಿವೃದ್ಧಿಯಾಗುತ್ತದೆ.

‌-ಕಮಲಾ ಹಳ್ಯಾಳ,ದ್ಯಾಮನಗೌಡರ ಲೇ ಔಟ್‌ ನಿವಾಸಿ

* ನಿತ್ಯ ಕಸ ವಿಲೇವಾರಿ ಆಗಬೇಕು. ಆಗ ಮನೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿರುತ್ತದೆ. ಅಧಿಕಾರಿಗಳು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಲಿ.

-ಪಾರ್ವೆತವ್ವ ಚಿಂಚಲಿ, ಶ್ರೀದತ್ತ ನಗರ ನಿವಾಸಿ

‘ಅಧಿಕಾರವಿಲ್ಲದಿದ್ದರೂ ಪ್ರಯತ್ನ’

ಹುಬ್ಬಳ್ಳಿ: ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೂ ನಮಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಆದರೂ, ನನ್ನ ವ್ಯಾಪ್ತಿಯ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ ಎಂದು 49ನೇ ವಾರ್ಡ್‌ ಪಾಲಿಕೆ ಸದಸ್ಯೆ ವೀಣಾ ಚೇತನ ಭಾರದ್ವಾಡ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದ್ಯಾಮನಗೌಡರ ಲೇ ಔಟ್‌ನಲ್ಲಿ ಉತ್ತಮ ರಸ್ತೆ ನಿರ್ಮಿಸುವಂತೆ ಜಗದೀಶ ಶೆಟ್ಟರ್‌ ಅವರು ಸೂಚಿಸಿದ್ದಾರೆ. ಅಧಿಕಾರಿಗಳನ್ನು ಕರೆಯಿಸಿ ಪರಿಶೀಲಿಸಲಾಗುವುದು. ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ರಾಜೀವ್‌ ನಗರ ಸೇರಿದಂತೆ ವಿವಿಧೆಡೆ ರಸ್ತೆ ನಿರ್ಮಾಣ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT