ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯಗಳಿಗೆ ಸಂಘಟನೆ ಅನಿವಾರ್ಯ: ಹೊರಟ್ಟಿ

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಪ್ರತಿಭೋತ್ಸವ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ
Last Updated 24 ಜುಲೈ 2022, 9:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಎಲ್ಲಾ ಸಮುದಾಯಗಳಿಗೂ ಸಂಘಟನೆ ಅನಿವಾರ್ಯ. ಆಗ ಮಾತ್ರ ಸಮುದಾಯಕ್ಕೆ ದನಿ ಬರುತ್ತದೆ‌. ತಮ್ಮಲ್ಲೇ ಕೆಳಮಟ್ಟದಲ್ಲಿರುವವರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸಿ, ಮೇಲಕ್ಕೆತ್ತಿದಾಗ ಮಾತ್ರ ಸಂಘಟನೆಗೆ ಸಾರ್ಥಕತೆ ಬರುತ್ತದೆ‌‌’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ಫಲಾನುಭವಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ರಾಹ್ಮಣರಲ್ಲಿ ಹೆಚ್ಚಿನ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿದ್ದು, ಸರ್ಕಾರದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಯಾವ ಸರ್ಕಾರವಿದ್ದರೂ ಅವರ ಮಾರ್ಗದರ್ಶನ ಅಗತ್ಯವಿದೆ. ಎಚ್.ಡಿ.‌ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಆತ್ಮೀಯರಾದ ಎಂ.ಬಿ. ನಾತು ಅವರನ್ನು ಅಧ್ಯಕ್ಷರನ್ನಾಗಿ ಮಾಡಲು‌ ಪ್ರಯತ್ನಪಟ್ಟಿದ್ದೆ. ಕಡೆಗೆ, ಸಚ್ಚಿದಾನಂದ ಮೂರ್ತಿ ಅಧ್ಯಕ್ಷರಾದರು’ ಎಂದರು.

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಮಂಡಳಿ ನಿರ್ದೇಶಕ ವಸಂತ ನಾಡಜೋಶಿ ಮಾತನಾಡಿದರು. ವಿವಿಧ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮಂಡಳಿಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು.

ಸಾಧಕರಿಗೆ ಸನ್ಮಾನ

ಸಾಮಾಜಿಕ ಕ್ಷೇತ್ರ– ಗೋವಿಂದ ಜೋಶಿ, ಭಾರತಿ ಬಿಜಾಪುರ, ಘನಶ್ಯಾಮ ದೇಶಪಾಂಡೆ. ಶಿಕ್ಷಣ– ರಾಜಾ ದೇಸಾಯಿ, ಜಿ.ಆರ್. ಭಟ್, ಧೀರೇಂದ್ರ ಪಾಟೀಲ, ಶ್ರೀನಿವಾಸ ಹುಯಿಲಗೋಳ. ಉದ್ಯಮ– ಎಚ್.ಎನ್. ನಂದಕುಮಾರ, ಅನಂತ ಪದ್ಮನಾಭ ಐತಾಳ, ಶ್ರೀಕಾಂತ ಯಕಾಪೂರ, ಪ್ರಭಾಕರ ಮಂಗಳೂರು. ವೈದ್ಯಕೀಯ– ಡಾ. ಮುಕುಂದ ಕುಲಕರ್ಣಿ, ಡಾ. ರಾಮ ಕವಲಗುಡ್ಡ. ಧಾರ್ಮಿಕ– ಪಂ. ರತ್ನಾಕರ ಭಟ್ ಜೋಶಿ, ಜಯತೀರ್ಥ ಆಚಾರ್ಯ ಹುಂಡೇಕರ. ಕೃಷಿ– ಪ್ರಭಾ ಕುಲಕರ್ಣಿ. ಅಡುಗೆ– ಸುಶೀಲೇಂದ್ರ ಕುಲಕರ್ಣಿ. ಸಂಗೀತ– ತೇಜಸ್ವಿನಿ ಶ್ರೀಹರಿ ಹಾಗೂ ನ್ಯಾಯಾಂಗದಿಂದ ಸುರೇಶ ಕಿಣಿ ಅವರನ್ನು ಸನ್ಮಾನಿಸಲಾಯಿತು.

ಮಂಡಳಿಯ ಎ.ಕೆ.‌ ರಂಗವಿಠ್ಠಲ, ಕೆ.ಎನ್. ಛಾಯಾಪತಿ, ಜಗದೀಶ ಹುನಗುಂದ, ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಲ್.ಎ. ಓಕ್, ಮಹಾನಗರ ಪಾಲಿಕೆ ಉಪ ಮೇಯರ್ ಉಮಾ‌ ಮುಕುಂದ ಇದ್ದರು. ಡಿ.ಪಿ. ಪಾಟೀಲ ಸ್ವಾಗತಿಸಿದರು. ಸತೀಶ ಮುರೂರು ನಿರೂಪಣೆ ಮಾಡಿದರು.

‘ಬುದ್ಧಿವಂತರೆಂಬ ಅಹಂ ಬಿಡಿ’

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಮಾತನಾಡಿ, ‘ಬ್ರಾಹ್ಮಣರು ನಾವೇ ಬುದ್ಧಿವಂತರು ಎಂಬ ಅಹಂ ಬಿಡಬೇಕು. ಮಂಡಳಿಯ ಸೌಲಭ್ಯಗಳಿಗಾಗಿ ಅಗತ್ಯ ಅರ್ಜಿಗಳು ಸಲ್ಲಿಕೆಯಾಗುತ್ತಿಲ್ಲ. ಸಮುದಾಯದಲ್ಲಿ ಹುಸೇನಿ ಬ್ರಾಹ್ಮಣರು ಸೇರಿದಂತೆ 44 ಜಾತಿಗಳಿವೆ. ರಾಜ್ಯದಲ್ಲಿ 42 ಲಕ್ಷ ಬ್ರಾಹ್ಮಣರಿದ್ದರೂ ಸರ್ಕಾರ ನಡೆಸಿದ್ದ ಸಮೀಕ್ಷೆಯಲ್ಲಿ ಕೇವಲ 17.30 ಲಕ್ಷ ಇದ್ದೇವೆ. ಸಮೀಕ್ಷೆಯಲ್ಲಿ ಬ್ರಾಹ್ಮಣ ಬದಲು ಉಪಜಾತಿ ಹೆಸರು ನಮೂದಿಸಿದ್ದೇ ಇದಕ್ಕೆ ಕಾರಣ. ಒಗ್ಗಟ್ಟಿನ ಕೊರೆಯಿಂದಾಗಿ, ರಾಜಕೀಯ ಶಕ್ತಿಯಾಗುವ ಅವಕಾಶ ಕೈತಪ್ಪಿದೆ. ಮತ್ತೊಮ್ಮೆ ಜಾತಿ ಗಣತಿ ನಡೆದರೆ ಎಲ್ಲರೂ ಬ್ರಾಹ್ಮಣ ಎಂದೇ ನಮೂದಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT