ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್ ಸೈಕ್ಲಿಂಗ್ ಸ್ಪರ್ಧೆ; ಹುಬ್ಬಳ್ಳಿ ಸೈಕ್ಲಿಸ್ಟ್‌ಗಳ ಸಾಧನೆ

Published 25 ಆಗಸ್ಟ್ 2023, 7:08 IST
Last Updated 25 ಆಗಸ್ಟ್ 2023, 7:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರಿಯಾಗಿ ಆಹಾರ, ನೀರು ಸಿಗುತ್ತಿರಲಿಲ್ಲ. ನಾಲ್ಕು ದಿನಗಳಲ್ಲಿ ಕೇವಲ ಮೂರುವರೆ ಗಂಟೆ ನಿದ್ದೆ ಮಾಡಿದೆ. ಮಳೆ, ಚಳಿ ಲೆಕ್ಕಿಸದೆ ಸೈಕ್ಲಿಂಗ್‌ ಮಾಡಿದ್ದರಿಂದ ನಿಗದಿತ ಗುರಿ ಸಾಧಿಸಲು ಸಾಧ್ಯವಾಯಿತು.

–ಫ್ರಾನ್ಸ್‌ನಲ್ಲಿ ನಡೆದ ‍ಪಿಬಿಪಿ–2023 ಸೈಕ್ಲಿಂಗ್‌ ಸ್ಪರ್ಧೆಯಲ್ಲಿ 1,200 ಕಿ.ಮೀ ಅಂತರವನ್ನು 88 ಗಂಟೆಯಲ್ಲಿ ಕ್ರಮಿಸಿ ಸಾಧನೆ ಮಾಡಿದ ಹುಬ್ಬಳ್ಳಿ ಬೈಸಿಕಲ್ ಕ್ಲಬ್‌ನ ಶೆಟ್ಟೆಪ್ಪ ಪಿರಂಗಿ ತಮ್ಮ ಸಾಧನೆಯ ಹಾದಿಯನ್ನು ಬಿಚ್ಚಿಟ್ಟಿದ್ದು ಹೀಗೆ.

ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಫ್ರಾನ್ಸ್‌ನಲ್ಲಿ ಸ್ಪರ್ಧೆ ನಡೆಯುತ್ತದೆ. ಈ ವರ್ಷದ ಸ್ಪರ್ಧೆ ಆಗಸ್ಟ್‌ 20ರಿಂದ 24ರವರೆಗೆ ನಡೆಯಿತು. ಪ್ಯಾರಿಸ್‌ನಿಂದ ಬ್ರೆಸ್ಟ್‌ ತಲುಪಿ ಮತ್ತೆ ಪ್ಯಾರಿಸ್‌ಗೆ 1,200 ಕಿಮೀ ಅಂತರವನ್ನು 90 ತಾಸುಗಳಲ್ಲಿ ಸ್ಪರ್ಧಿಗಳು ಕ್ರಮಿಸಬೇಕಿತ್ತು.

ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ ಶೆಟ್ಟೆಪ್ಪ ಪಿರಂಗಿ 88 ಗಂಟೆ 14 ನಿಮಿಷ 31 ಸೆಕೆಂಡ್‌ಗಳಲ್ಲಿ ಈ ಅಂತರ ಕ್ರಮಿಸಿದರೆ,  ಕ್ಲಬ್‌ನ ಇನ್ನೊಬ್ಬ ಸೈಕ್ಲಿಸ್ಟ್‌ ಗುಲ್ಜಾರ್‌ ಅಹ್ಮದ್‌ 88 ಗಂಟೆ 47 ನಿಮಿಷ 59 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಶೆಟ್ಟೆಪ್ಪ  ಹೆಸ್ಕಾಂನ ಧಾರವಾಡದ ನಗರ ಉಪ ವಿಭಾಗದ ಕಚೇರಿಯಲ್ಲಿ ಆಪರೇಟರ್‌ ಆಗಿದ್ದು, ಗುಲ್ಜಾರ್‌ ಅಹ್ಮದ್‌ ಹೆಸ್ಕಾಂನಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಆ.20ರಂದು ಸಂಜೆ 6ಕ್ಕೆ ನನ್ನ ಸ್ಪರ್ಧೆ ಆರಂಭವಾಯಿತು. ಏರು, ತಗ್ಗಿನ ಹಾದಿಯಲ್ಲಿ ನಿರಂತರವಾಗಿ ಸೈಕ್ಲಿಂಗ್ ಮಾಡುವುದೇ ಸವಾಲಾಗಿತ್ತು. ಬೇರೆ ಬೇರೆ ಪ್ರದೇಶಗಳಲ್ಲಿ ಹವಾಮಾನವೂ ಬದಲಾವಣೆ ಆಗುತ್ತಿತ್ತು. ನಾಲ್ಕು ದಿನಗಳಲ್ಲಿ ಗರಿಷ್ಠ ಒಂದು ಗಂಟೆ ಮಾತ್ರ ನಿದ್ದೆ ಮಾಡಿದ್ದೆ. ಉಳಿದಂತೆ ಕೇವಲ 10 ನಿಮಿಷ ವಿಶ್ರಾಂತಿ ಪಡೆಯುತ್ತಿದ್ದೆ. ಇಲ್ಲಿಂದ ತೆಗೆದುಕೊಂಡು ಹೋಗಿದ್ದ ಇನ್‌ಸ್ಟಂಟ್‌ ಆಹಾರ, ಹೋಳಿಗೆ, ಉಂಡಿ ಇತರ ಆಹಾರ ಸೇವಿಸುತ್ತಿದ್ದೆ’ ಎಂದು ಶೆಟ್ಟೆಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘2020ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ ಬೆಂಗಳೂರು– ಗೋವಾ–ಬೆಂಗಳೂರಿಗೆ 1,200 ಕಿ.ಮೀ ಕ್ರಮಿಸಬೇಕಿತ್ತು. ಇನ್ನು 70 ಕಿ.ಮೀ ಕ್ರಮಿಸಬೇಕಿದ್ದಾಗ ನಿದ್ದೆಗಣ್ಣಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದೆ. ಮತ್ತೆ ಸೈಕಲ್‌ ಸರಿಪಡಿಸಿಕೊಂಡು ಗುರಿ ತಲುಪಿದ್ದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಕೆಲವರು ಅವಮಾನಿಸಿದ್ದರು. ಅದನ್ನೆಲ್ಲ ಸವಾಲಾಗಿ ಸ್ಪೀಕರಿಸಿದೆ. ಅಂದೇ ಪ್ಯಾರಿಸ್‌ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ಛಲ ಮೂಡಿತ್ತು’ ಎಂದರು.

‘ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ನ 1,235 ಜನ ಸದಸ್ಯರು 2019ರಲ್ಲಿ ಸೈಕಲ್‌ ಪರೇಡ್‌ ಮಾಡಿ ಗಿನ್ನೆಸ್‌ ದಾಖಲೆ ಮಾಡಿದ್ದರು. ನಾನು ಅದರಲ್ಲಿ ಭಾಗವಹಿಸಿದ್ದೆ. ಅಲ್ಲಿಂದ ನನಗೆ ಸೈಕ್ಲಿಂಗ್‌ನಲ್ಲಿ ಇನ್ನಷ್ಟು ಆಸಕ್ತಿ ಬೆಳೆಯಿತು. ಪ್ಯಾರಿಸ್‌ ಸ್ಪರ್ಧೆಗಾಗಿ ಪ್ರತಿ ದಿನ 50 ಕಿ.ಮೀ, ವಾರಾಂತ್ಯದಲ್ಲಿ 200 ಕಿ.ಮೀಗೂ ಹೆಚ್ಚು ಸೈಕ್ಲಿಂಗ್ ಮಾಡುತ್ತಿದ್ದೆ’ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ್ದೇ ಹೆಮ್ಮೆ: ‘ಫ್ರಾನ್ಸ್‌ನಲ್ಲಿ ನಡೆಯುವ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಹೆಮ್ಮೆಯ ಸಂಗತಿ. ಅದರಲ್ಲಿ ನಿಗದಿತ ಸಮಯದಲ್ಲಿ ಕ್ರಮಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಗುಲ್ಜಾರ್‌ ಅಹ್ಮದ್‌ ಹೇಳಿದರು.

‘ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕೆಪಿಟಿಸಿಎಲ್‌ನಿಂದ ಹೆಸ್ಕಾಂಗೆ ವರ್ಗಾವಣೆ ಆಗಿ 15 ದಿನಗಳಾಗಿವೆ. ಕೆಪಿಟಿಸಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸಂಸ್ಥೆಯ ಕಚೇರಿಗಳಿಗೆ ಭೇಟಿ ನೀಡಬೇಕಿತ್ತು. ಆಗ ಸೈಕಲ್‌ನಲ್ಲಿಯೇ ಹೋಗುತ್ತಿದ್ದೆ. ಈ ಸ್ಪರ್ಧೆಗಾಗಿ ಕಠಿಣ ಅಭ್ಯಾಸ ಮಾಡಿದ್ದೆ’ ಎಂದರು.

ವಿಶ್ವಮಟ್ಟದಲ್ಲಿ ಹುಬ್ಬಳ್ಳಿಗೆ ಕೀರ್ತಿ

‘ಇಬ್ಬರೂ ಸೈಕ್ಲಿಸ್ಟ್‌ಗಳು ಫ್ರಾನ್ಸ್ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿಗೆ ವಿಶ್ವಮಟ್ಟದಲ್ಲಿ ಕೀರ್ತಿ ತಂದಿದ್ದಾರೆ’ ಎಂದು ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌ ಅಧ್ಯಕ್ಷ  ಪ್ರಸನ್ನ ಜೋಶಿ ನಿರ್ದೇಶಕ ಆನಂದ ಬೈದ್‌ ಹೇಳಿದರು. ‘ಸ್ಪರ್ಧೆಯಲ್ಲಿ ಬೇರೆ ಬೇರೆ ದೇಶಗಳ 6500ಕ್ಕೂ ಹೆಚ್ಚು ಮತ್ತು ರಾಜ್ಯದಿಂದ 35ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು. ಈ ಇಬ್ಬರ ಸಾಧನೆ ಉತ್ತರ ಕರ್ನಾಟಕ ಭಾಗದ ಇತರ ಸೈಕ್ಲಿಸ್ಟ್‌ಗಳಿಗೆ ಪ್ರೇರಣೆಯಾಗಿದೆ. ಸೈಕ್ಲಿಸ್ಟ್‌ಗಳು ಸ್ವಂತ ಖರ್ಚಿನಲ್ಲಿ ತೆರಳಿ ಈ ಸಾಧನೆ ಮಾಡಿದ್ದಾರೆ. ಸರ್ಕಾರದಿಂದಲೂ ಇವರಿಗೆ ನೆರವು ಪ್ರೋತ್ಸಾಹ ಸಿಗಬೇಕಿದೆ’ ಎಂದರು.

ಆಯ್ಕೆ ಹೇಗೆ..

ಸ್ಪರ್ಧಿಗಳು ವರ್ಷವೊಂದರಲ್ಲಿ 200 ಕಿ.ಮೀ 300 400 ಮತ್ತು 600 ಕಿ.ಮೀ ಅನ್ನು ನಿಗದಿತ ಸಮಯದಲ್ಲಿ ಕ್ರಮಿಸಬೇಕು. ಇವರಿಗೆ ಸೂಪರ್‌ ರ‍್ಯಾಂಡನರ್ ಎನ್ನುತ್ತಾರೆ. ಈ ಸಾಧನೆ ಮಾಡಿದವರಿಗೆ ಮಾತ್ರ 1000 ಕಿ.ಮೀ ಮತ್ತು 1200 ಕಿ.ಮೀ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪಿಬಿಪಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದರೆ ಸೈಕ್ಲಿಸ್ಟ್‌ಗಳು ಈ ಸ್ಪರ್ಧೆ ನಡೆಯುವ ಹಿಂದಿನ ವರ್ಷ 1000 ಅಥವಾ 1200 ಕಿ.ಮೀ ಸ್ಪರ್ಧೆಯಲ್ಲಿ ಭಾಗವಹಿಸಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT