ಸೋಮವಾರ, ಮೇ 16, 2022
30 °C

ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದ್ದ ಪಾಟೀಲ: ಮಣ್ಣೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸಹಕಾರ ರಂಗ, ಶಿಕ್ಷಣ, ಕೃಷಿ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಕೆ.ಎಚ್‌. ಪಾಟೀಲರು ಒತ್ತು ಕೊಟ್ಟಿದ್ದರು ಎಂದು ಸಾಹಿತಿ ಡಾ. ಗೋವಿಂದ ಮಣ್ಣೂರ ಹೇಳಿದರು.

ಕೆ.ಎಚ್‌. ಪಾಟೀಲರ 29ನೇ ಪುಣ್ಯಸ್ಮರಣೆ ಅಂಗವಾಗಿ ಅವರ ಪ್ರತಿಷ್ಠಾನದ ವತಿಯಿಂದ ಮಂಗಳವಾರ ನಗರದಲ್ಲಿ ನಡೆದ ಸರ್ವಧರ್ಮ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಣ್ಣೂರ ‘ಗಟ್ಟಿ ಮತ್ತು ಒಮ್ಮತದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಟೀಲರು ಮುಂಚೂಣಿಯಲ್ಲಿರುತ್ತಿದ್ದರು. ಸಮಗ್ರ ಗ್ರಾಮೀಣಾಭಿವೃದ್ಧಿ ಅವರ ಕನಸಾಗಿತ್ತು. ಪಾಟೀಲರೂ ಎಂದೂ ರಾಜಕಾರಣದಲ್ಲಿ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ. ಅಧಿಕಾರಕ್ಕೆ ಅಂಟಿಕೊಳ್ಳದೆ ಜನಸೇವೆ ನನ್ನ ಗುರಿ ಎಂದು ಬದುಕಿದ್ದರು’ ಎಂದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ ‘ಕೆ.ಎಚ್‌. ಪಾಟೀಲರು ಅಭಿವೃದ್ಧಿಗೆ ಒತ್ತು ಕೊಡುವ ಜೊತೆಗೆ ಎಲ್ಲರೊಂದಿಗೆ ಸ್ನೇಹಭಾವದಿಂದ ಬೆರೆಯುತ್ತಿದ್ದರು. ತಮಗೆ ದೊರೆತ ರಾಜಕೀಯ ಅಧಿಕಾರವನ್ನು ಜಾತಿ, ಮತ ಮತ್ತು ಪಂಥದ ಬೇಧವಿಲ್ಲದೆ ಜನಹಿತಕ್ಕೆ ಬಳಸಿದ್ದಾರೆ. ಆದ್ದರಿಂದಲೇ ಅವರನ್ನು ಜನ ಈಗಲೂ ಮನದಲ್ಲಿ ಗಟ್ಟಿಯಾಗಿಟ್ಟುಕೊಂಡಿದ್ದಾರೆ’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಪ್ರತಿಷ್ಠಾನದ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಸೇರಿದಂತೆ ಹಲವು ಅತಿಥಿಗಳು ಕೆ.ಎಚ್.ಪಾಟೀಲ ಅವರ ಸಾಧನೆಗಳನ್ನು ಸ್ಮರಿಸಿದರು. ಸರ್ವಧರ್ಮಗಳ ಪ್ರಮುಖರು ಪ್ರಾರ್ಥನೆ ಸಲ್ಲಿಸಿದರು.

ಮುಸ್ಲಿಂ ಧರ್ಮಗುರು ಮೌಲಾನಾ ಮುಖ್ತಾರ ಅಹ್ಮದ ಮುಲ್ಲಾ, ರೆವರೆಂಡ್‌ ಡ್ಯಾನಿಯಲ್ ಹೊನ್ನನಾಯ್ಕರ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಎಂ. ಗೌಡರ, ಮಹೇಂದ್ರ ಸಿಂಘಿ, ಕಾಂಗ್ರೆಸ್‌ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಇಮ್ರಾನ್‌ ಯಲಿಗಾರ, ಮೋಹನ್‌ ಹಿರೇಮನಿ, ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಪಾಟೀಲ, ವಸಂತ ಲದ್ವಾ, ಶಾಂತವ್ವ ಗುಜ್ಜಳ, ಬಲವಂತ ಗುಂಡಮಿ, ನವೀದ ಮುಲ್ಲಾ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು