ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿರೇಕಕ್ಕೆ ತಿರುಗಿದ ಕಾನೂನು ವಿಶ್ವವಿದ್ಯಾಲಯದ ಶಾಂತಿಯುತ ಪ್ರತಿಭಟನೆ

ಕಾನೂನು ವಿಶ್ವವಿದ್ಯಾಲಯ: ವಿವಿಧ ಬೇಡಿಕೆ ಈಡೇರಿಕೆಗೆ ವಿದ್ಯಾರ್ಥಿಗಳ ಆಗ್ರಹ
Last Updated 6 ಜನವರಿ 2022, 2:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿನ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಒಂದು ತಿಂಗಳಿಂದ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆ, ಬುಧವಾರ ವಿ.ವಿ. ಕುಲಪತಿ ಪ್ರೊ. ಪಿ. ಈಶ್ವರ್ ಭಟ್ ಅವರಿಗೆ ಮಸಿ ಎರಚುವ ಮೂಲಕ ಅತಿರೇಕಕ್ಕೆ ತಿರುಗಿತು. ಇದರಿಂದಾಗಿ, ಕೆಲ ವಿದ್ಯಾರ್ಥಿಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವಂತಾಯಿತು.

ವಿ.ವಿ.ಯ ಪ್ರವೇಶ ದ್ವಾರದ ಎದುರಿಗೆ ಬೆಳಿಗ್ಗೆ ಶಾಂತಿಯುತವಾಗಿ ಎನ್‌ಎಸ್‌ಯುಐ (ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ) ನೇತೃತ್ವದಲ್ಲಿ ಆರಂಭವಾದ ಪ್ರತಿಭಟನೆಗೆ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಸೇರಿಕೊಂಡರು. ಕುಲಪತಿ ವಿರುದ್ಧ ಘೋಷಣೆ ಕೂಗಿ, ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಮಾತುಕತೆ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಪ್ರತಿನಿಧಿಗಳು ಕುಲಪತಿಯನ್ನು ಭೇಟಿ ಮಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಅದಕ್ಕೆ ಕುಲಪತಿ, ‘ಕೋರ್ಟ್ ನಿರ್ದೇಶನದಂತೆ ಪರೀಕ್ಷೆಗಳನ್ನು ಭೌತಿಕವಾಗಿ ಬರೆಯಬೇಕು. ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಿದರೆ ಬಾರ್ ಕೌನ್ಸಿಲ್ ಆಫ್‌ ಇಂಡಿಯಾದ ಮಾನ್ಯತೆ ಸಿಗುವುದಿಲ್ಲ’ ಎಂದು ತಿಳಿ ಹೇಳಿದರು.

ಇದೇ ವಿಷಯವನ್ನು ಪ್ರತಿಭಟಿಸುತ್ತಿರುವ ಸ್ಥಳಕ್ಕೆ ಬಂದು ಹೇಳಿ ಎಂದು ವಿದ್ಯಾರ್ಥಿಗಳು ಕೋರಿದರು. ಅದರಂತೆ, ಮಧ್ಯಾಹ್ನ 3.30ರ ಸುಮಾರಿಗೆ ಸ್ಥಳಕ್ಕೆ ಬಂದ ಕುಲಪತಿ ವಿದ್ಯಾರ್ಥಿಗಳ ಎದುರಿಗೆ ಕುಳಿತು, ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ‘ಕುಲಪತಿ ರಾಜೀನಾಮೆ ನೀಡಬೇಕು’ ಎಂದು ಕೂಗಿದರು.

ಇದರಿಂದ ಬೇಸರಗೊಂಡ ಕುಲಪತಿ ಸ್ಥಳದಿಂದ ತೆರಳಲು ಮುಂದಾದರು. ಆಗ ವಿದ್ಯಾರ್ಥಿಯೊಬ್ಬ ಹಿಂದಿನಿಂದ ಅವರಿಗೆ ಮಸಿ ಎರಚಿದ. ಕುಲಪತಿಯವರ ತಲೆ ಹಾಗೂ ಬೆನ್ನಿಗಷ್ಟೇ ಅಲ್ಲದೆ, ವಿದ್ಯಾರ್ಥಿಯನ್ನು ತಡೆಯಲು ಯತ್ನಿಸಿದ ಕೆಲ ಪೊಲೀಸರ ಬಟ್ಟೆಗಳಿಗೂ ಮಸಿ ಮೆತ್ತಿಕೊಂಡಿತು. ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ವಿದ್ಯಾರ್ಥಿಗಳು ಹಾಗೂ ಪೊಲೀಸರ ಮಧ್ಯೆ ಪರಸ್ಪರ ತಳ್ಳಾಟ ನಡೆಯಿತು.

ಬೆಂಗಾವಲಿನಲ್ಲಿ ಕುಲಪತಿ ಅವರನ್ನು ಅವರ ಕಚೇರಿಯತ್ತ ಕರೆದೊಯ್ದ ಪೊಲೀಸರು, ಮಸಿ ಎರಚಿದ ವಿದ್ಯಾರ್ಥಿ ಸೇರಿದಂತೆ ಹದಿನಾಲ್ಕು ಮಂದಿಯನ್ನು ವಶಕ್ಕೆ ಪಡೆದರು. ಈ ಪೈಕಿ, ಆರು ವಿದ್ಯಾರ್ಥಿನಿಯರು ಸಹ ಇದ್ದರು. ಇದರಲ್ಲಿ ಎಂಟು ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಿದ ಪೊಲೀಸರು, ಸ್ಥಳದಲ್ಲಿದ್ದ ಟೆಂಟ್‌ ತೆರವುಗೊಳಿಸಿದರು.

ಇಡೀ ಘಟನೆಯನ್ನು ವಿದ್ಯಾರ್ಥಿಗಳು ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರ ಹೊರಡಿಸಿರುವ ಕೋವಿಡ್–19 ಹೊಸ ಮಾರ್ಗಸೂಚಿಯ ಪ್ರಕಾರ, ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ. ಒಂದು ವೇಳೆ ನಡೆಸಿದರೆ, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವಿಚಾರಣೆಗೆ ಹಾಜರಾಗಲು ನೋಟಿಸ್

ಘಟನೆಗೆ ಸಂಬಂಧಿಸಿದಂತೆ ಎಂಟು ವಿದ್ಯಾರ್ಥಿಗಳನ್ನು ಬಂಧಿಸಿದ ಎಪಿಎಂಸಿ ನವನಗರ ಠಾಣೆ ಪೊಲೀಸರು, ಅವರ ವಿರುದ್ಧ ಐಪಿಸಿ 120ಬಿ (ಕ್ರಿಮಿನಲ್ ಪಿತೂರಿ), 341 (ಅಕ್ರಮವಾಗಿ ತಡೆಯೊಡ್ಡುವುದು), 353 (ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ) ಹಾಗೂ 34 (ಅಪರಾಧ ಸಂಚು) ಕಲಂಗಳಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಬಂಧಿತರನ್ನು ರಾತ್ರಿಯೇ ಬಿಡುಗಡೆ ಮಾಡಿ, ಪ್ರಕರಣದ ವಿಚಾರಣೆಗಾಗಿ 48 ಗಂಟೆಯೊಳಗೆ ಮತ್ತೆ ಠಾಣೆಗೆ ಹಾಜರಾಗಬೇಕು ಎಂದು ನೋಟಿಸ್ ನೀಡಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆಗಳೇನು?

* 3 ವರ್ಷದ ಕೋರ್ಸ್‌ನ 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಬಡ್ತಿ ನೀಡುವಂತೆ ಧಾರವಾಡ ಹೈಕೋರ್ಟ್ ಇತ್ತೀಚೆಗೆ ಆದೇಶ ನೀಡಿತ್ತು. ಅದರ ವಿರುದ್ಧದ ವಿ.ವಿ ಸಲ್ಲಿಸಿರುವ ಮೇಲ್ಮನವಿಯನ್ನು ವಾಪಸ್ ಪಡೆಯಬೇಕು.

* ಐದು ವರ್ಷದ ಕೋರ್ಸ್‌ನ ವಿದ್ಯಾರ್ಥಿಗಳನ್ನು ಸಹ, ಹಿಂದಿನ ಸೆಮಿಸ್ಟರ್‌ನ ಅಂಕ ಮತ್ತು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡಬೇಕು. ಇಲ್ಲದಿದ್ದರೆ ಅಸೈನ್‌ಮೆಂಟ್, ಆನ್‌ಲೈನ್ ಮಾದರಿ ಅಥವಾ ಓಪನ್ ಬುಕ್ ಮಾದರಿ ಪೈಕಿ ಯಾವುದಾದರೂ ಒಂದು ರೀತಿಯ ಪರೀಕ್ಷೆಯನ್ನು ನಡೆಸಬೇಕು.

* ನಿಗದಿತ ಅವಧಿಯಲ್ಲಿ ಕೋರ್ಸ್‌ಗಳನ್ನು ಮುಗಿಸಬೇಕು.

ಕುಲಪತಿ ಹೇಳುವುದೇನು?

* ಸರ್ಕಾರ ಹಾಗೂ ಸಮಕ್ಷಮ ಪ್ರಾಧಿಕಾರದ ಸಲಹೆ ಮೇರೆಗೆ, ಧಾರವಾಡ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿದೆ. ಹಾಗಾಗಿ, ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಮುಂದೆ ಕೋರ್ಟ್‌ ನೀಡುವ ಆದೇಶದ ಪ್ರಕಾರ ನಡೆದುಕೊಳ್ಳುತ್ತೇವೆ.

* ನಾನು ವಿದ್ಯಾರ್ಥಿಗಳ ಪರವಾಗಿಯೇ ಇದ್ದೇನೆ. ಪರೀಕ್ಷೆ ಇಲ್ಲದೆ ಕೋರ್ಸ್ ಮುಗಿಸಿದರೆ, ಮುಂದೆ ಬಾರ್ ಕೌನ್ಸಿಲ್ ಸೇರಿದಂತೆ ಎಲ್ಲಿಯೂ ವಿದ್ಯಾರ್ಥಿಗಳ ಪದವಿಗೆ ಮಾನ್ಯತೆ ಸಿಗುವುದಿಲ್ಲ. ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉದ್ಯೋಗ ಪಡೆಯುವುದಕ್ಕೂ ತೊಂದರೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT