ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀ ಈಚೆಗೆ ಪಾದಯಾತ್ರೆ ನಡೆಸಿದ್ದನ್ನು ಖಂಡಿಸಿ, ಆ ಸ್ಥಳದಲ್ಲಿ ಸೋಮವಾರ ಕೋಣದ ಗಂಜಲ ಹಾಕಿ ಶುದ್ಧೀಕರಿಸುವ ಹೋರಾಟ ಹಮ್ಮಿಕೊಂಡಿದ್ದ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಸದಸ್ಯರು ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ರಾಜಿ ಸಂಧಾನದ ನಂತರ ಹೋರಾಟ ಕೈಬಿಟ್ಟರು.
ಹೋರಾಟಕ್ಕೆ ಕರೆ ನೀಡಿದ್ದರಿಂದ ಭುವನೇಶ್ವರಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸ್ವಾಮೀಜಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದ ವಿಶ್ವ ಹಿಂದೂ ಪರಿಷತ್ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಅವರೊಂದಿಗೆ ಮಹಾಮಂಡಳದ ಸದಸ್ಯರು ವಾಗ್ವಾದ ನಡೆಸಿದರು.
ಈ ಸಂದರ್ಭದಲ್ಲಿ ಹಳೆ ಹುಬ್ಬಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ಸುರೇಶ ಎಚ್.ಯಳ್ಳೂರ ಮಧ್ಯಪ್ರವೇಶಿಸಿ ಅವರ ಮನವೊಲಿಸಿದರು. ಬಳಿಕ ಮಹಾಮಂಡಳದ ಸದಸ್ಯರು ಹೋರಾಟ ಮೊಟಕುಗೊಳಿಸಿದರು.
ಈ ವೇಳೆ ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಮಾತನಾಡಿ, ‘ಪೇಜಾವರ ಸ್ವಾಮೀಜಿ ಅ.12ರಂದು ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಅವರ ಮನೆಗೆ ಭೇಟಿ ನೀಡಿದ್ದರು. ಅವರ ಮನೆ ಭುವನೇಶ್ವರ ನಗರದಲ್ಲಿದ್ದು, ಇದು ‘ದಲಿತರ ಕೇರಿ’ ಎಂದು ಎಲ್ಲಿಯೂ ನಮೂದಾಗಿಲ್ಲ. ಇಲ್ಲಿ ಎಲ್ಲ ಜಾತಿ, ಧರ್ಮದ ಜನರು ವಾಸವಾಗಿದ್ದಾರೆ. ಹೀಗಿರುವಾಗ ‘ದಲಿತ ಕೇರಿ’ ಎಂದು ಬಿಂಬಿಸಿ ಸ್ವಾಮೀಜಿ ಇಲ್ಲಿಗೆ ಭೇಟಿ ನೀಡುವ ಅಗತ್ಯ ಏನಿತ್ತು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೇಳಿಕೆ ಬದಲಿಸಿದ ಯಲ್ಲಪ್ಪ
ಪೇಜಾವರ ಶ್ರೀ ನಗರದ ಭೇಟಿ ಕುರಿತು ಅ.9ರಂದು ಪತ್ರಿಕಾಗೋಷ್ಠಿ ನಡೆಸಿದ್ದ ಅಖಿಲ ಭಾರತ ಮಾಧ್ವ ಮಹಾಮಂಡಲದವರು, ಭುವನೇಶ್ವರಿ ನಗರದ ‘ದಲಿತರ ಕೇರಿ’ಯಲ್ಲಿ ಶ್ರೀಗಳು ಪಾದಯಾತ್ರೆ ನಡೆಸಲಿದ್ದಾರೆ ಎಂದು ತಿಳಿಸಿದ್ದರು. ಮಾಧ್ಯಮಗಳಲ್ಲಿ ಇದು ಪ್ರಸಾರವಾದ ನಂತರವೂ ಸುಮ್ಮನಿದ್ದ ಯಲ್ಲಪ್ಪ ಬಾಗಲಕೋಟಿ, ದಲಿತ ಸಂಘ ಸಂಸ್ಥೆಗಳ ಮಹಾಮಂಡಳದವರು ಹೋರಾಟಕ್ಕೆ ಕರೆ ನೀಡಿದ ನಂತರ ತಮ್ಮ ಹೇಳಿಕೆ ಬದಲಿಸಿದ್ದಾರೆ.
‘ಪೇಜಾವರ ಶ್ರೀ ನಮ್ಮ ಮನೆಗೆ ಮತ್ತು ದೇವಸ್ಥಾನಕ್ಕೆ ಖಾಸಗಿ ಆಹ್ವಾನದ ಮೇರೆಗೆ ಭೇಟಿ ನೀಡಿದ್ದರು. ಮಾಧ್ಯಮಗಳಲ್ಲಿ ಭುವನೇಶ್ವರಿ ನಗರದ ಬದಲಾಗಿ ‘ದಲಿತ ಕೇರಿ’ ಎಂದು ಪ್ರಕಟವಾಗಿದ್ದು, ಇದರಿಂದ ಪರಿಶಿಷ್ಟ ಜಾತಿ ಸಮುದಾಯದಲ್ಲಿ ಅಸಮಾಧಾನ ಉಂಟಾಗಿದೆ. ದಲಿತ ಕೇರಿ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳದೆ ‘ಭುವನೇಶ್ವರಿ ನಗರ’ ಎಂದು ಪರಿಗಣಿಸಿ ಮುಂದಿನ ಯಾವುದೇ ನಡೆಗೆ ಅವಕಾಶ ಕೊಡಬಾರದು’ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಭುವನೇಶ್ವರಿ ಸೇವಾ ಸಂಘದ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.