ಗ್ರಾಮಸ್ಥರ ಬದುಕಿಗೆ ಬೆಳಕು ನೀಡದ ನಿರಂತರ ಜ್ಯೋತಿ

7
ಕಡಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯೋಜನೆ

ಗ್ರಾಮಸ್ಥರ ಬದುಕಿಗೆ ಬೆಳಕು ನೀಡದ ನಿರಂತರ ಜ್ಯೋತಿ

Published:
Updated:
ಅಳ್ನಾವರ ತಾಲ್ಲೂಕಿನ ಕಡಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ಅಳವಡಿಸಲಾದ ವಿದ್ಯುತ್ ಕಂಬಗಳು ವಿದ್ಯುತ್ ಸಂಪರ್ಕ ಇಲ್ಲದೆ ಅನಾಥವಾಗಿ ನಿಂತಿವೆ

ಅಳ್ನಾವರ: ತಾಲ್ಲೂಕಿನ ಕಡಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಕಂಬ ಹಾಕಿ, ತಂತಿ ಎಳೆದು ಟಿ.ಸಿ. ಕೂಡಾ ಅಳವಡಿಸಿದರೂ, ವಿದ್ಯುತ್ ಸಂಪರ್ಕ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.

ಕಾಶೇನಟ್ಟಿ, ಕಡಬಗಟ್ಟಿ ಹಾಗೂ ಹೂಲಿಕೇರಿಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 480 ವಿದ್ಯುತ್ ಕಂಬ ಅಳವಡಿಸಲಾಗಿದೆ. ಐದು ಟ್ರಾನ್ಸ್‌ಫಾರ್ಮರ್‌ ಹಾಕಲಾಗಿದೆ. ಆದರೆ ಇವುಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಹಳ್ಳಿಗರ ಬಾಳು ಕತ್ತಲಲ್ಲಿ ಮುಳುಗಿದೆ.

ಎರಡು ವರ್ಷಗಳಿಂದ ಆರಂಭವಾದ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಅಕ್ಕ ಪಕ್ಕದ ಗ್ರಾಮಗಳಲ್ಲಿ ಈ ಯೋಜನೆ ಪೂರ್ಣಗೊಂಡು ವಿದ್ಯುತ್ ಸಂಪರ್ಕ ನೀಡಲಾಗಿದೆ. ಕೇವಲ ಕಡಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ಯೋಜನೆ ಪೂರ್ಣ ಪ್ರಮಾಣದಲ್ಲಿ ಬೇಗ ಅನುಷ್ಠಾನಗೊಳಿಸಿ ಎಂಬ ಮನವಿ ಫಲ ನೀಡಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಕಾಶೇನಟ್ಟಿ, ಕಡಬಗಟ್ಟಿ ಹಾಗೂ ಹೂಲಿಕೇರಿಗಳಲ್ಲಿ ಪ್ರತಿನಿತ್ಯ ರಾತ್ರಿ 12 ಗಂಟೆಗೆ ವಿದ್ಯುತ್ ಸ್ಥಗಿತಗೊಳಿಸಿ, ಮಾರನೇ ದಿನ ಬೆಳಿಗ್ಗೆ 9 ಗಂಟೆಗೆ ನೀಡಲಾಗುತ್ತದೆ. ಹಗಲು ಹೊತ್ತಿನಲ್ಲಿ ಸಹ ಆಗಾಗ್ಗೆ ಸರಬರಾಜು ಕಡಿತವಾಗುತ್ತದೆ. ಇದು ಕಳ್ಳರಿಗೆ ವರವಾಗಿ ಪರಿಣಮಿಸಿದ್ದು ಈಚೆಗೆ ಕಡಬಗಟ್ಟಿ ಗ್ರಾಮದಲ್ಲಿ ನಡೆದ ಸಣ್ಣ, ಪುಟ್ಟ ಕಳ್ಳತನ ನಡೆದಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ರೈಲ್ವೆ ಕ್ರಾಸಿಂಗ್ ಬಳಿ ಅಂತರ ಮಾರ್ಗವಾಗಿ ಕೇಬಲ್ ಹಾಕಬೇಕು. ಕಾರ್ಯಾಚರಣೆಗೆ ತಂದ ಡ್ರಿಲ್ಲಿಂಗ್ ಮಷಿನ್‌ನಲ್ಲಿ ತೊಂದರೆ ಉಂಟಾಗಿ ಕೆಲಸ ನಿಲ್ಲಿಸಲಾಗಿದೆ. ಆದಷ್ಟು ಬೇಗ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಹೆಸ್ಕಾಂ ಸಹಾಯಕ ಎಂಜಿನಿಯರ್ ಆರ್‌.ಎಂ. ಸಾಳುಂಕಿ ತಿಳಿಸಿದರು.

ಯೋಜನೆ ವಿಳಂಬದಿಂದ ಕೃಷಿಯೇತರ ಚಟುವಟಿಕೆಗಳಿಗೆ ಬಹಳ ದೊಡ್ಡ ಪೆಟ್ಟು ಬಿದ್ದಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಪತ್ರ ಬರೆಯಲಾಗಿದೆ
- ಮುರುಗೇಶ ಇನಾಮದಾರ, ಹೂಲಿಕೇರಿ ಗ್ರಾಮದ ಹಿರಿಯರು

ನಿರಂತರ ಜ್ಯೋತಿ ಯೋಜನೆ ಮೂರು ಹಳ್ಳಿಗರಿಗೆ ಮರೀಚಿಕೆಯಾಗಿದೆ. ವಿದ್ಯುತ್ ಅಭಾವ ಗ್ರಾಮಸ್ಥರ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ
- ನೂರ್‌ ಅಹ್ಮದ್ ಕಿತ್ತೂರ, ಕಾಶೇನಟ್ಟಿ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆ ಅರ್ಧಕ್ಕೆ ನಿಂತಿದೆ. ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ, ಹಾಲಿನ ಡೈರಿ ಉದ್ಯಮಕ್ಕೆ ತೊಂದರೆಯಾಗಿದೆ
ದಸ್ತಗೀರ್‌ ಹುಣಸೀಕಟ್ಟಿ, ಅಧ್ಯಕ್ಷ, ಕಡಬಗಟ್ಟಿ ಗ್ರಾಮ ಪಂಚಾಯ್ತಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !