ಸೋಮವಾರ, ಡಿಸೆಂಬರ್ 9, 2019
20 °C

ಯೋಗೀಶಗೌಡ ಗೌಡ ಕೊಲೆ ಪ್ರಕರಣ: ಸಿಬಿಐ ವಶಕ್ಕೆ ಪಡೆದ ವ್ಯಕ್ತಿ ನ್ಯಾಯಾಂಗ ಬಂಧನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧಾರವಾಡ: ತಾಲ್ಲೂಕಿನ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಶಕ್ಕೆ ಪಡೆದಿದ್ದ ಸಂತೋಷ ಸವದತ್ತಿ ಅವರನ್ನು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ. 

ಗುರುವಾರ ರಾತ್ರಿ ಸಂತೋಷನನ್ನು ನ್ಯಾಯಾಧೀಶರ ನಿವಾಸದಲ್ಲಿ ಸಿಬಿಐ ಅಧಿಕಾರಿಗಳು ಹಾಜರುಪಡಿಸಿದ್ದರು. ನ್ಯಾಯಧೀಶರ ನಿರ್ದೇಶನದಂತೆ ಶುಕ್ರವಾರ ಬೆಳಿಗ್ಗೆ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಸಂತೋಷ ಪರ ವಕೀಲರು, ‘ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ನ ಪ್ರಧಾನ ಪೀಠ ಮಧ್ಯಂತರ ತಡೆ ನೀಡಿದೆ. ಹೀಗಿದ್ದೂ ತಮ್ಮ ಕಕ್ಷಿದಾರನನ್ನು ಸಿಬಿಐ ವಶಕ್ಕೆ ಪಡೆದಿರುವುದು ಸರಿಯಲ್ಲ. ಅಲ್ಲದೇ ಸಂತೋಷ ಅವರನ್ನು 20ನೇ ತಾರೀಖಿನ ರಾತ್ರಿ 10.30 ಕ್ಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 21 ರ ಬೆಳಿಗ್ಗೆ 6.30 ಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅದಾಗಿ ಸುಮಾರು 15 ಗಂಟೆಗಳ ನಂತರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಪ್ರತಿಯನ್ನು ಹಾಜರುಪಡಿಸಿ, ಕಾನೂನಿನಲ್ಲಿ ಏನು ಅವಕಾಶ ಇದೆ ಎನ್ನುವದನ್ನು ಪರಿಗಣಿಸಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ, ಡಿಸೆಂಬರ್‌ 4 ರವರೆಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದರು.

ಮಧ್ಯಾಹ್ನ ನ್ಯಾಯಾಲಯದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂತೋಷ ಪರ ವಕೀಲ ಅಶೋಕ ಶಿಂಧೆ, ‘ಹೈಕೋರ್ಟ್‌ ತಡೆ ನೀಡಿರುವುದು ಸಿಬಿಐ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹೀಗಿದ್ದೂ ತಮ್ಮ ಕಕ್ಷಿದಾರನನ್ನು ವಶಕ್ಕೆ ಪಡೆಯಲಾಗಿದೆ. ಸರ್ಕಾರದ ಆದೇಶಕ್ಕೆ ತಡೆ ನೀಡಿರುವುದರಿಂದ ಸಿಬಿಐ ತನಿಖೆ ಮುಂದುವರಿಸಲು ಅವಕಾಶವಿಲ್ಲ. ಇಂಥ ಸಂದರ್ಭದಲ್ಲಿ ಸಂತೋಷ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲು ಅವಕಾಶವಿಲ್ಲ. ಹೀಗಾಗಿ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿರುವ ಕಕ್ಷಿದಾರರನ್ನು ಬಿಡುಗಡೆ ಮಾಡಬೇಕು’ ಎಂದು ಮನವಿ ಮಾಡಿದರು. 

‘ಈಗಾಗಲೇ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಲಾಗಿದೆ. ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೆ ಹೊಸ ಆದೇಶ ನೀಡಲು ಸಾಧ್ಯವಾಗಲಿದೆ’ ಎಂದು ತಿಳಿಸಿದ ನ್ಯಾಯಾಧೀಶ ಅಜ್ಜಪ್ಪ ದೊಡ್ಡಬಸವರಾಜ ವಿಚಾರಣೆ ಮುಂದೂಡಿದರು.   

ಪ್ರತಿಕ್ರಿಯಿಸಿ (+)