ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ

ಚೇತರಿಸಿಕೊಂಡವರ ಮನವೊಲಿಸುವಂತೆ ಡಿಎಚ್‌ಒಗಳಿಗೆ ಪತ್ರ: ಅಂಟರತಾನಿ
Last Updated 2 ಜೂನ್ 2020, 13:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ 19 ದೃಢಪಟ್ಟಿದ್ದ ಮಹಾರಾಷ್ಟ್ರದಿಂದ ಮರಳಿದ್ದ ಲಾರಿ ಚಾಲಕನಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗಿದ್ದು, ಆ ವ್ಯಕ್ತಿ ಪೂರ್ಣ ಗುಣಮುಖರಾದರೆ ಇನ್ನಷ್ಟು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರತಾನಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ಲಾಸ್ಮಾ ಚಿಕಿತ್ಸೆ ಪಡೆದ ವ್ಯಕ್ತಿಯ ಕ್ಲಿನಿಕಲ್‌ ಹಾಗೂ ಪ್ರಯೋಗಾಲಯದ ವರದಿ ಉತ್ತಮವಾಗಿದೆ. ವಿಕಿರಣದಲ್ಲಿಯೂ ಚೇತರಿಕೆ ಕಂಡುಬಂದಿದೆ. ಮತ್ತೆ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದ್ದರಿಂದ ಪೂರ್ಣ ಗುಣಮುಖರಾಗುವ ಭರವಸೆಯಿದೆ. ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾಯೋಗಿಕವಾಗಿ ಮಾಡಲು ರಾಜ್ಯದಲ್ಲಿ ಐದು ವೈದ್ಯಕೀಯ ಸಂಸ್ಥೆಗಳಿಗೆ ಮಾತ್ರ ಅನುಮತಿಯಿದೆ. ಅದರಲ್ಲಿ ಕಿಮ್ಸ್‌ ಕೂಡ ಒಂದು’ ಎಂದರು.

‘ಗುಣಮುಖರಾದವರು ಸ್ವಯಂ ಪ್ರೇರಿತರಾಗಿ ಸೋಂಕಿತರಿಗೆ ಪ್ಲಾಸ್ಮಾ ನೀಡುವಂತೆ ಮನವೊಲಿಸಬೇಕು. ಇದರಿಂದ ಇನ್ನಷ್ಟು ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ಉತ್ತರ ಕರ್ನಾಟಕ ಎಲ್ಲ ಜಿಲ್ಲೆಗಳ ಡಿಎಚ್‌ಒಗಳಿಗೆ ಪತ್ರ ಬರೆಯಲಾಗಿದೆ. ಬಾಗಲಕೋಟೆ ಜಿಲ್ಲೆಯ ವ್ಯಕ್ತಿಯೊಬ್ಬರು ಪ್ಲಾಸ್ಮಾ ನೀಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಗುಣಮುಖರಾದವರ ಮನೆಗಳಿಗೆ ಹೋಗಿ ಕಿಮ್ಸ್‌ ವೈದ್ಯರೇ ಪ್ಲಾಸ್ಮಾ ಚಿಕಿತ್ಸೆಗೆ ನೆರವಾಗುವಂತೆ ಮನವೊಲಿಸುತ್ತಿದ್ದಾರೆ. ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗುವ ವೇಳೆಯೂ ಅವರಿಗೆ ಇದರ ಬಗ್ಗೆ ಕೌನ್ಸಿಲಿಂಗ್‌ ಮಾಡಲಾಗುತ್ತಿದೆ’ ಎಂದರು.

’ವೈದ್ಯರಾದ ಈಶ್ವರ ಹಸಬಿ, ಸಚಿನ್ ಹೊಸಕಟ್ಟಿ, ಪುರುಷೋತ್ತಮ ರೆಡ್ಡಿ, ಕವಿತಾ, ಶೈಲೇಂದ್ರ, ಉಮೇಶ ಹಳ್ಳಿಕೇರಿ, ಎಸ್‌ಡಿಎಂ ವೈದ್ಯರಾದ ಜೀವ ಪ್ರಿಯಾ, ಗಿರೀಶ್ ಕಾಮತ್‌ ಅವರನ್ನು ಒಳಗೊಂಡ ತಂಡ ಪ್ಲಾಸ್ಮಾ ಚಿಕಿತ್ಸೆಗೆ ಶ್ರಮಿಸಿದೆ. ನವನಗರದ ಕ್ಯಾನ್ಸರ್‌ ಆಸ್ಪತ್ರೆಯ ಯಂತ್ರಗಳ ನೆರವು ಪಡೆದು ಚಿಕಿತ್ಸೆ ನೀಡಲಾಗಿದೆ. ಈ ಚಿಕಿತ್ಸೆಗೆ ನೆರವಾಗುವ ಯಂತ್ರ ಕಿಮ್ಸ್‌ಗೆ ಬಂದಿದ್ದು, ಮುಂದೆ ಚಿಕಿತ್ಸೆ ಕೊಡುವುದು ಸುಲಭವಾಗುತ್ತದೆ’ ಎಂದು ವಿವರಿಸಿದರು.

ಗುಣಮುಖರಾದ ವ್ಯಕ್ತಿಯ ದೇಹದಿಂದ ಮಾತ್ರ ಪ್ಲಾಸ್ಮಾ ಪಡೆಯಬೇಕು. ಸೋಂಕಿನಿಂದ ಚೇತರಿಸಿಕೊಂಡ ಕೆಲವರು ಪ್ಲಾಸ್ಮಾ ಕೊಡಲು ಒಪ್ಪಿ ನಂತರ ನಿರಾಕರಿಸಿದರು. ಬಳಿಕ ಖಬರಸ್ತಾನದ ಕಾವಲುಗಾರನ ಮನವೊಲಿಸಿ ಪ್ಲಾಸ್ಮಾ ಪಡೆದುಕೊಂಡೆವು ಎಂದರು.

ಔಷಧ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಮ್‌ ಕೌಲಗುಡ್‌ ಮಾತನಾಡಿ ‘ಸೋಂಕಿನಿಂದ ಚೇತರಿಸಿಕೊಂಡ 18ರಿಂದ 65 ವರ್ಷದ ಒಳಗಿನವರು ಮಾತ್ರ ಪ್ಲಾಸ್ಮಾ ನೀಡಬಹುದು. ಪ್ಲಾಸ್ಮಾ ನೀಡುವವರಿಗೆ ಹಿಮೊಗ್ಲೋಬಿನ್‌ ಅಂಶ ಕನಿಷ್ಠ 12.5ಕ್ಕಿಂತಲೂ ಹೆಚ್ಚು ಇರಬೇಕು. ಪ್ಲಾಸ್ಮಾ ನೀಡಿರುವ ವ್ಯಕ್ತಿಗೆ ಮೊದಲು ದಿನಕ್ಕೆ 8ರಿಂದ 10 ಲೀಟರ್‌ ಆಕ್ಸಿಜನ್‌ ಕೊಡಬೇಕಾಗುತ್ತಿತ್ತು. ಈಗ 2ರಿಂದ 3ರ ಲೀಟರ್‌ ಸಾಕಾಗುತ್ತಿದೆ. ನಿಧಾನವಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತಿದೆ’ ಎಂದರು.

ಕಿಮ್ಸ್‌ ವೈದ್ಯಕೀಯ ಅಧೀಕ್ಷಕ ಅರುಣ ಕುಮಾರ, ಸಿಒಒ ರಾಜೇಶ್ವರಿ ಜೈನಾಪುರ ಇದ್ದರು.

ಮತ್ತೆ 11 ಜನ ಗುಣಮುಖ

ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 11 ಜನರನ್ನು ಸೋಮವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದರಿಂದ ಚೇತರಿಸಿಕೊಂಡವರ ಸಂಖ್ಯೆ ಒಟ್ಟು 22 ಆಗಿದೆ.

ಜಿಲ್ಲೆಯಲ್ಲಿ ಒಟ್ಟು 49 ಸೋಂಕಿತರ ಪ್ರಕರಣಗಳಾಗಿದ್ದವು. ಅದರಲ್ಲಿ ಒಟ್ಟು 22 ಜನ ಚೇತರಿಸಿಕೊಂಡಿದ್ದಾರೆ. ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದ ದಾವಣಗೆರೆಯ ಸೋಂಕಿತ ವ್ಯಕ್ತಿ ಮತ್ತು ಎರಡು ತಿಂಗಳ ಮಗು ಕೂಡ ಗುಣಮುಖವಾಗುತ್ತಿದೆ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 250, ಹಳೇ ಆಸ್ಪತ್ರೆಯಲ್ಲಿ 200 ಸೇರಿದಂತೆ ಒಟ್ಟು 1200 ಆಕ್ಸಿಜನ್‌ ಬೆಡ್‌ಗಳು ನಮ್ಮಲ್ಲಿ ಸಿದ್ಧವಿದ್ದು, ಎಂಥ ಕಠಿಣ ಪರಿಸ್ಥಿತಿಯನ್ನೂ ನಿಭಾಯಿಸಲು ಸಜ್ಜಾಗಿದ್ದೇವೆ ಎಂದು ಅಂಟರತಾನಿ ಹೇಳಿದರು.

ಮತ್ತೊಂದು ಪರೀಕ್ಷಾ ಯಂತ್ರ

ಕಿಮ್ಸ್‌ ಆಸ್ಪತ್ರೆಯಲ್ಲಿ ಎರಡ್ಮೂರು ದಿನಗಳಲ್ಲಿ ಮತ್ತೊಂದು ಕೊರೊನಾ ಪರೀಕ್ಷಾ ಯಂತ್ರ ಕಾರ್ಯಾರಂಭ ಮಾಡಲಿದೆ. ಇದಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳು ಬಂದಿದ್ದು, ಅಳವಡಿಕೆಯ ಕಾರ್ಯ ನಡೆಯುತ್ತಿದೆ. ಈಗ ದಿನಕ್ಕೆ 400 ಪರೀಕ್ಷೆಗಳಾಗುತ್ತಿದ್ದು, ಹೊಸ ಯಂತ್ರದ ಕಾರ್ಯಾರಂಭದ ಬಳಿಕ 250ರಿಂದ 300 ಹೆಚ್ಚು ಪರೀಕ್ಷೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಗದಗ, ಹಾವೇರಿ ಮತ್ತು ವಿಜಯಪುರದಿಂದ ಹೆಚ್ಚು ಗಂಟಲುದ್ರವದ ಮಾದರಿ ಬರುತ್ತಿವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT