ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನುಮಾನ್ ಚಾಲೀಸ ಪಠಣಕ್ಕೆ ನಿರ್ಬಂಧ ಇದೆಯೇ?: ಪ್ರಲ್ಹಾದ ಜೋಶಿ

‘ಗರೀಬಿ ಹಠಾವೊ’ ಸಾಧ್ಯವಾಗಿದ್ದರೆ ಉಚಿತ ಭಾಗ್ಯ ನೀಡುವ ಪರಿಸ್ಥಿತಿ ಏಕೆ ಬರುತ್ತಿತ್ತು?
Published 7 ಏಪ್ರಿಲ್ 2024, 14:00 IST
Last Updated 7 ಏಪ್ರಿಲ್ 2024, 14:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯವನ್ನು ಪಾಕಿಸ್ತಾನಕ್ಕಿಂತ ಕಡೆ ಮಾಡುತ್ತಿದ್ದಾರೆ’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಆರೋಪಿಸಿದರು.

ಬೆಂಗಳೂರಿನ ನಗರ್ತಪೇಟೆಯಲ್ಲಿ ಅಂಗಡಿಯಲ್ಲಿ ಹನುಮಾನ್ ಚಾಲೀಸ ಹಾಕಿದ್ದಕ್ಕೆ ಹಲ್ಲೆಗೊಳಗಾಗಿದ್ದ ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಭಾನುವಾರ ಇಲ್ಲಿ ಪ್ರತಿಕ್ರಿಯಿಸಿದ ಅವರು, ‘ನಿಮ್ಮ ತುಷ್ಟೀಕರಣದ ರಾಜ್ಯದಲ್ಲಿ ಹನುಮಾನ್ ಚಾಲೀಸ ಪಠಣ ಮಾಡಲು ನಿರ್ಬಂಧ ಇದೆಯೇ? ಇದು ಖಂಡನೀಯ. ಕೂಡಲೇ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

‘ಅವರು ಬೆಳಿಗ್ಗೆ 6 ಗಂಟೆಗೂ ಮುನ್ನ ಮೈಕ್‌ ಹಾಕಿ ಆಜಾನ್‌ ಕೂಗಿ, ನಮಾಜ್ ಮಾಡಹುದು. ಆದರೆ, ನಾವು ಅಂಗಡಿಯಲ್ಲಿ ಹನುಮಾನ ಚಾಲೀಸ ಹಾಕಬಾರದೆ?. ನೀವು ಕರ್ನಾಟಕವನ್ನು ಆಳುತ್ತೀದ್ದೀರೊ ಅಥವಾ ಇಸ್ಲಾಮಿಕ್ ರಾಷ್ಟ್ರವನ್ನು ಆಳುತ್ತಿದ್ದೀರೊ’ ಎಂದು ಪ್ರಶ್ನಿಸಿದರು.

ಬಹಿರಂಗ ಚರ್ಚೆಗೆ ಸಿದ್ಧ:

‘ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿರುವ ಅನುದಾನ ಹಂಚಿಕೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಯುಪಿಎ ಅವಧಿಯಲ್ಲಿ ನಾವೆಷ್ಟು ಬರ ಪರಿಹಾರ, ಅತಿವೃಷ್ಟಿ ಪರಿಹಾರ ಕೇಳಿದ್ದೆವು, ಅವರು ಎಷ್ಟು ಕೊಟ್ಟಿದ್ದರು? ಎನ್‌ಡಿಎ ಅವಧಿಯಲ್ಲಿ ಇವರೆಷ್ಟು ಕೇಳಿದ್ದಾರೆ? ನಾವೆಷ್ಟು ಕೊಟ್ಟಿದ್ದೇವೆ ಎಂಬುದು ಆಗ ಗೊತ್ತಾಗಲಿದೆ’ ಎಂದರು.

‘ನರೇಂದ್ರ ಮೋದಿ ಅವರ ಅವಧಿಯಲ್ಲಿ ಸುಳ್ಳಿನ ಕ್ರಾಂತಿಯಾಗಿದೆ’ ಎಂಬ ಕಾಂಗ್ರೆಸ್‌ನವರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಗರೀಬಿ ಹಠಾವೊ ಎಂದು ಸುಳ್ಳು ಹೇಳಿದವರು ಯಾರು?, ಗರೀಬಿ ಹಠಾವೊ ಆಗಿದ್ದರೆ ಇಂದು ಉಚಿತ ಭಾಗ್ಯಗಳನ್ನು ನೀಡುವ ಪರಿಸ್ಥಿತಿ ಏಕೆ ಬರುತ್ತಿತ್ತು? ನೀವು ಸತ್ಯಹರಿಶ್ಚಂದ್ರರಾಗಿದ್ದರೆ ಜನರು ದೇಶದಲ್ಲಿ ನಿಮ್ಮನ್ನು ಏಕೆ ಮೂಲೆಗುಂಪು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಕೃತಕ ಬುದ್ಧಿಮತ್ತೆ (ಎಐ ತಂತ್ರಜ್ಞಾನ) ಬಳಸಿ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಹಿನ್ನಡೆ ಮಾಡಲು ಚೀನಾ ಸೇರಿದಂತೆ ಭಾರತದ ಹಿತಾಸಕ್ತಿಯ ವಿರೋಧಿ ಶಕ್ತಿಗಳು ಕೆಲಸ ಮಾಡುತ್ತಿವೆ. ಮೋದಿ ಇದ್ದರೆ ದೇಶ ಬಲಿಷ್ಠವಾಗುತ್ತದೆ ಎಂಬುದನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಈ ಸಂಚನ್ನು ವಿಫಲಗೊಳಿಸಿತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT