ಭಾನುವಾರ, ಸೆಪ್ಟೆಂಬರ್ 20, 2020
23 °C

ಕರಿಯಮ್ಮದೇವಿ ಜಾತ್ರೆಯಲ್ಲಿ ಮಳೆ–ಬೆಳೆಗೆ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಗಣೇಶಪೇಟೆಯಲ್ಲಿರುವ ಕರಿಯಮ್ಮದೇವಿ ಬಂಡಿ ಜಾತ್ರೆ ಹಾಗೂ ಉಡಿ ತುಂಬುವ ಉತ್ಸವದಲ್ಲಿ ಮಂಗಳವಾರ ಭಕ್ತರು ಮಳೆ ಮತ್ತು ಬೆಳೆಗಾಗಿ ದೇವಿಯಲ್ಲಿ ಪ್ರಾರ್ಥಿಸಿದರು.

ಮಧ್ಯಾಹ್ನ 2.45ಕ್ಕೆ ಅಲಂಕೃತ ಜೋಡಿತ್ತಿನ ಬಂಡಿಯಲ್ಲಿ ದೇವಿಯನ್ನು ಚಿತ್ರವನ್ನು ಪ್ರತಿಷ್ಠಾಪಿಸಿ, ಬಂಡಿಯ ಮೇಲೆ ನಾಲ್ಕು ದಿಕ್ಕಿಗೆ ನಾಲ್ವರು ಹೆಣ್ಣು ವೇಷಾಧಾರಿ ಗಂಡು ಮಕ್ಕಳನ್ನು ಕೂಡಿಸಲಾಯಿತು. ಚಕ್ರಾಕಾರವಾಗಿ ಬಂಡಿ ಸುತ್ತುತ್ತಾ ಹೋದಂತೆ, ಭಕ್ತರು ದೇವಿಗೆ ಜೈಕಾರ ಹಾಕುತ್ತಾ ಕೈ ಮುಗಿದು ಸಾಗಿದರು.

ನಾಡಿಗೆ ಚನ್ನಾಗಿ ಮಳೆ ಸುರಿದು, ಸಮೃದ್ಧವಾಗಿ ಬೆಳೆ ಕರುಣಿಸಪ್ಪಾ ಮಳೆರಾಯ ಎಂಬ ಭಕ್ತರ ಪ್ರಾರ್ಥನೆಯೊಂದಿಗೆ  ಬಂಡಿ ಸಾಗಿತು. ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಡೊಳ್ಳಿನ ಮೇಳ, ಮರಕಾಲು ಕುದುರೆ ಕುಣಿತ, ಜಾಂಝ್ ಮೇಳ, ಲಾಟಿ ಮೇಳ ಹಾಗೂ ಮಲ್ಲಕಂಬದವರು ಮೆರವಣಿಗೆಗೆ ಸಾಥ್ ನೀಡಿದರು.

ಇದಕ್ಕೂ ಮುಂಚೆ ಬೆಳಿಗ್ಗೆ 6ಕ್ಕೆ ಕರಿಯಮ್ಮದೇವಿಯ ಉದ್ಭವ ಜಾಗೃತಾ ಮೂರ್ತಿಗೆ ಪಂಚಾಮೃತಾಭಿಷೇಕ ಹಾಗೂ ಮಂಗಲ ಸ್ನಾನ ನೆರವೇರಿತು. 8ಕ್ಕೆ ಅಲಂಕಾರ ಹಾಗೂ ಆರತಿ ಪೂಜೆ, 9ಕ್ಕೆ ಮಹಾ ಮಂಗಳಾರತಿ, ಮುತ್ತೈದೆಯರು ಹಾಗೂ ಜೋಗತಿಯವರಿಂದ ಹರಕೆ ಹಾಗೂ 10ರಿಂದ 12ರವರೆಗೆ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.

‘ಕರಿಯಮ್ಮ ದೇವಿ ದೇವಸ್ಥಾನ ಎರಡು ಶತಮಾನದ ಹಿಂದೆ ಸ್ಥಾಪನೆಯಾಗಿದೆ. ನಮ್ಮ ಪೂರ್ವಿಕರು ಹಿಂದಿನಿಂದಲೂ ಮಳೆ ಮತ್ತು ಬೆಳೆಗಾಗಿ ಪ್ರಾರ್ಥಿಸಿ ಜಾತ್ರೆ ಮಾಡಿಕೊಂಡು ಬರುತ್ತಿದ್ದಾರೆ. ನಾವು ಆ ಪ್ರತೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗಣೇಶಪೇಟೆ ಸುತ್ತಮುತ್ತಲಿನ ರೈತರೆಲ್ಲರೂ ಜಾತ್ರೆಯಲ್ಲಿ ಪಾಲ್ಗೊಂಡು, ದೇವಿಗೆ ಉಡಿ ತುಂಬಿಸುತ್ತಾರೆ’ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಎನ್‌.ಎಂ. ಜಕ್ಕಲಿ ಹೇಳಿದರು.

ಟಸ್ಟ್ ಕಮಿಟಿಯ ಎಫ್‌.ಬಿ. ವಾಲಿಕಾರ, ಕಾರ್ಯದರ್ಶಿ ಜೆ.ಬಿ. ಚಿಕ್ಕಣ್ಣವರ, ಸಹ ಕಾರ್ಯದರ್ಶಿ ಜಿ.ಬಿ. ಗೊರವನಹಳ್ಳಿ, ಕೋಶಾಧಿಕಾರಿ ಎಂ.ಎಲ್. ಮಳಲಿ, ಎಚ್‌.ಡಿ. ವಗ್ಗರ ಹಾಗೂ ಎಚ್.ಟಿ. ಬೆಣಕಲ್ಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು