ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ಯುಪಿಎಸ್‌ಸಿ ಪರೀಕ್ಷೆಯಲ್ಲಿ 101ನೇ ರ‍್ಯಾಂಕ್‌ ಪಡೆದ ಸೌಭಾಗ್ಯ

Published 17 ಏಪ್ರಿಲ್ 2024, 5:08 IST
Last Updated 17 ಏಪ್ರಿಲ್ 2024, 5:08 IST
ಅಕ್ಷರ ಗಾತ್ರ

ಧಾರವಾಡ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್‌ಸಿ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ನಗರದ ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಸೌಭಾಗ್ಯ ಬೀಳಗಿಮಠ ಅವರು 101ನೇ ರ‍್ಯಾಂಕ್‌ ಪಡೆದಿದ್ದಾರೆ.

ಸೌಭಾಗ್ಯ ದಾವಣಗೆರೆಯವರು. ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳ ಗ್ರಾಮದವರು, ದಾವಣಗೆರೆಯಲ್ಲಿ ನೆಲೆಸಿದ್ದಾರೆ. ದಾವಣಗೆರೆಯಲ್ಲಿ ಶಾಲಾ ಮತ್ತು ಪಿಯು ಶಿಕ್ಷಣ ಪೂರ್ಣಗೊಳಿಸಿದ್ದಾರೆ. 2022ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್‌ಸಿ ಪದವಿ ಪೂರೈಸಿದ್ದಾರೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ಧಾರೆ. ಯಶಸ್ಸಿನ ಯಾನವನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ ಗುರಿ ಸಾಧಿಸಿದ್ದು ಹೇಗೆ?

ಬದುಕಿನಲ್ಲಿ ದೊಡ್ಡ ಗುರಿ ಇಟ್ಟುಕೊಂಡು ಅದನ್ನು ಸಾಧಿಸಬೇಕು ಎಂದು ನಮ್ಮ ತಂದೆ ಸದಾ ಹೇಳುತ್ತಾರೆ. ದಾವಣಗೆರೆಯಲ್ಲಿ ನಮ್ಮ ಶಾಲೆ ಸಮೀಪ ಜಿಲ್ಲಾಧಿಕಾರಿ ನಿವಾಸ ಇತ್ತು. ಐಎಎಸ್‌ ಅಧಿಕಾರಿ ಆಗಬೇಕು ಎಂಬ ಕನಸು ಬಾಲ್ಯದಲ್ಲೇ ಮೊಳೆತಿತ್ತು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಗುರಿ ಇಟ್ಟುಕೊಂಡು ಎರಡು ವರ್ಷಗಳಿಂದ ಪಟ್ಟು ಬಿಡದೆ ತಯಾರಿ ನಡೆಸಿದೆ. ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದೆ.

ತರಬೇತಿ ಕೇಂದ್ರದಿಂದ ತರಬೇತಿ, ಮಾರ್ಗದರ್ಶನ ಪಡೆದರಾ?

ಕೋಚಿಂಗ್‌ಗೆ ಹೋಗಿಲ್ಲ. ಧಾರವಾಡದಲ್ಲಿ 2018ರಲ್ಲಿ ಬಿ.ಎಸ್‌ಸಿ (ಕೃಷಿ) ಪದವಿಗೆ ಸೇರಿದೆ. ಕೃಷಿ ವಿಶ್ವವಿದ್ಯಾಲಯದ ಸೂಕ್ಷ್ಮಜೀವವಿಜ್ಞಾನ ವಿಭಾಗದ ಬೋಧಕಿ ಅಶ್ವಿನಿ ಎಂ. ಅವರ ಪರಿಚಯವಾಯಿತು. 2019ರ ಲಾಕ್‌ಡೌನ್‌ನಲ್ಲಿ ತಯಾರಿ ಆರಂಭಿಸಿದೆ. ಪದವಿ ಅಂತಿಮ ವರ್ಷದಲ್ಲಿ ಇದ್ದಾಗ ಪರೀಕ್ಷೆ ತೆಗೆದುಕೊಂಡೆ. ಆದರೆ, ಯಶಸ್ವಿಯಾಗಿರಲಿಲ್ಲ. ಮೂರು ವರ್ಷಗಳಿಂದ ಅಶ್ವಿನಿ ಅವರು ನನ್ನನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡು ಪರೀಕ್ಷೆ ತಯಾರಿ ನಿಟ್ಟಿನಲ್ಲಿ ಪ್ರೋತ್ಸಾಹ, ಮಾರ್ಗದರ್ಶನ ನೀಡಿದರು. ಆನ್‌ಲೈನ್‌ನಲ್ಲಿ ಕೆಲವು ಮಾಕ್‌ ಟೆಸ್ಟ್‌ ಸರಣಿಗೆ ಹಾಜರಾದೆ.

ಪರೀಕ್ಷೆ, ಸಂದರ್ಶನಕ್ಕೆ ಸಿದ್ಧತೆ ಯಾವ ರೀತಿ ಇತ್ತು?

ಪ್ರತಿ ದಿನ 8 ಗಂಟೆ ಓದುತ್ತಿದ್ದೆ. ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುತ್ತಿದ್ದೆ. ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದೆ. ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡುವುದು ರೂಢಿಸಿಕೊಂಡೆ. ಅಂಕಿಅಂಶ, ಕೋಟ್‌ಗಳನ್ನು ಉತ್ತರದಲ್ಲಿ ಬಳಸುತ್ತಿದ್ದೆ. ಪ್ರಶ್ನೆಗಳಿಗೆ ಉತ್ತರ ಬರೆದು ಅಶ್ವಿನಿ ಮೇಡಂ ಅವರಿಂದ ಮೌಲ್ಯಮಾಪನ ಮಾಡಿಸಿ, ತಪ್ಪಿದ್ದರೆ ಸರಿಪಡಿಸಿಕೊಳ್ಳುತ್ತಿದ್ದೆ. ಬಾಲ್ಯದಿಂದಲೂ ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಸಂದರ್ಶನ ಎದುರಿಸಲು ಸಹಕಾರಿಯಾಯಿತು.

ಯಶಸ್ಸು ಸಾಧಿಸಲು ಸಹಕಾರಿಯಾದ ಅಂಶಗಳು ಯಾವವು?

ಮೂಲ ಲೇಖಕರ ಪುಸ್ತಕಗಳು, ಸರ್ಕಾರಿ ಪ್ರಕಟಣೆಗಳನ್ನು ಓದ್ದಿದ್ದು ಸಹಕಾರಿಯಾಯಿತು. ಯಾವುದೇ ಸಿದ್ಧ ಮಾದರಿಯನ್ನು (ಟಾಪರ್ಸ್‌ ನೋಟ್ಸ್‌, ಕೋಚಿಂಗ್‌ ಕೇಂದ್ರ ಸ್ಟಡಿ ಮೆಟಿರಿಯಲ್‌) ಅನುಸರಿಸದೆ ಸ್ವಂತವಾಗಿ ನನ್ನದೇ ಆದ ರೀತಿ ಉತ್ತರಿಸುವ ಕಲೆ ರೂಢಿಸಿಕೊಂಡಿದ್ದು ಅನುಕೂಲವಾಯಿತು.

ಯುಪಿಎಸ್‌ಸಿ, ಕೆಪಿಎಸ್‌ಸಿ ಸ್ಪರ್ಧಾ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ನಿಮ್ಮ ಸಲಹೆ..

ಸ್ಪರ್ಧಾ ಪರೀಕ್ಷಾರ್ಥಿಗಳಿಗೆ ತಾಳ್ಮೆ ಬಹಳ ಮುಖ್ಯ. ದೆಹಲಿ, ಬೆಂಗಳೂರಿನಲ್ಲಿ ಕೋಚಿಂಗ್‌ ಪಡೆದರೆ ಮಾತ್ರ  ಯಶಸ್ಸು ಸಾಧಿಸಬಹುದು ಎಂಬ ಭಾವನೆ ಮೊದಲು ಬಿಡಬೇಕು. ಏನು ಮತ್ತು ಎಷ್ಟು ಓದಬೇಕು ಎಂಬುದು ತಿಳಿದುಕೊಳ್ಳಬೇಕು. ಯಶಸ್ಸು ಸಾಧಿಸುವ ಛಲ ಇರಬೇಕು. ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದನ್ನೆ ಗುರಿ ಆಗಿಸಿಕೊಳ್ಳಬೇಕು.

ಲಾಕ್‌ಡೌನ್‌ ಸಂದರ್ಭದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಒಂದು ಕೃತಿ ಓದಿ ಮಾನವಶಾಸ್ತ್ರದ ಬಗ್ಗೆ ಆಸಕ್ತಿ ಮೂಡಿತ್ತು. ಮುಂದೆ ಅದನ್ನೇ ಮುಖ್ಯಪರೀಕ್ಷೆಯ ವಿಷಯವಾಗಿ ಆಯ್ದಕೊಂಡೆ

–ಸೌಭಾಗ್ಯ ಬೀಳಗಿಮಠ ಯುಪಿಎಸ್‌ಸಿ ಸಾಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT