ಗುರುವಾರ , ಮಾರ್ಚ್ 23, 2023
30 °C

ಬೆಲೆ ಏರಿಕೆಯಿಂದ ಜನ ತತ್ತರ: ಪಾಟೀಲ

ಪ್ರಜಾವಾಣಿ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಯಿಂದಾಗಿ ಜನ ರೋಸಿ ಹೋಗಿದ್ದಾರೆ. ಅಗತ್ಯ ವಸ್ತುಗಳ ನಿರಂತರ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಎಸ್.ಆರ್.ಪಾಟೀಲ ಹರಿಹಾಯ್ದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಂದೆ ಪೆಟ್ರೋಲ್‌ ಬೆಲೆ 7 ಪೈಸೆ ಹೆಚ್ಚಾದಾಗ ಅಟಲ್‌ ಬಿಹಾರಿ ವಾಜಪೇಯಿ ಅವರು ಸಂಸತ್ತಿನ ತನಕ ಚಕ್ಕಡಿಯಲ್ಲಿ ಬಂದು ಪ್ರತಿಭಟನೆ ಮಾಡಿದರು. ಈಗ ಅವರದ್ದೇ ಸರ್ಕಾರ ಅಧಿಕಾರದಲ್ಲಿದೆ. ಜನ ಪರದಾಡುವಂತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದರು.

‘ಕೋವಿಡ್‌ ಸಂಭಾವ್ಯ ಮೂರನೆ ಅಲೆಯಿಂದ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಬಹುದು ಎನ್ನುವ ಅಂದಾಜಿದೆ. ಆದ್ದರಿಂದ ಸರ್ಕಾರ ಚಿಕ್ಕಮಕ್ಕಳ ತಜ್ಞರಿಗೆ ಹೆಚ್ಚು ತರಬೇತಿ ನೀಡಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

’ಕಾಂಗ್ರೆಸ್‌ ಸಾಮೂಹಿಕ ನಾಯಕತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಲಿದೆ. 113 ಸ್ಥಾನಗಳು ಗೆದ್ದ ಬಳಿಕ ಯಾರು ಮುಖ್ಯಮಂತ್ರಿಯಾಗಬೇಕು ಎನ್ನುವುದನ್ನು ಅಲ್ಲಿ ತೀರ್ಮಾನಿಸಲಾಗುತ್ತದೆ’ ಎಂದರು.

ಇದಕ್ಕೂ ಮೊದಲು ಪಾಟೀಲ ಅವರು ಸಿದ್ಧಾರೂಢ ಮಠದಲ್ಲಿ ದರ್ಶನ ಪಡೆದರು. ಸಂಕಷ್ಟದಲ್ಲಿದ್ದ ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿಯ ರೈತ ಮುತ್ತು ಜಾವೂರು ಅವರಿಗೆ ಎತ್ತುಗಳನ್ನು ಕೊಡುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಕೆಲ ದಿನಗಳ ಹಿಂದೆ ಭರವಸೆ ನೀಡಿದರು. ಅದರಂತೆ ಮಠದ ಆವರಣದಲ್ಲಿ ಪಾಟೀಲ ಅವುಗಳನ್ನು ಹಸ್ತಾಂತರಿಸಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಕೆಪಿಸಿಸಿ ವಕ್ಫ್‌ ವಿಭಾಗದ ಚೇರ್ಮನ್‌ ವೈ. ಸೈಯದ್‌ ಅಹ್ಮದ್, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ, ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ದೀಪಾ ಗೌರಿ, ಮುಖಂಡರಾದ ಸದಾನಂದ ಡಂಗನವರ, ಅಬ್ದುಲ್‌ ಗನಿ, ಗೌರಿ ನಾಗರಾಜ, ಮೋಹನ್‌ ಹಿರೇಮನಿ, ಪ್ರಸನ್ನ, ವಿಜನಗೌಡ ಪಾಟೀಲ ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು