ಸೋಮವಾರ, ನವೆಂಬರ್ 30, 2020
19 °C
ಎಲ್ಲ ಸ್ವಾಮಿಗಳ ಖಾವಿ ಬಣ್ಣ ಒಂದೇ, ನಿಮ್ಮ ಬಣ್ಣವೂ ಒಂದೇ ಆಗಿರಲಿ: ವಚನಾನಂದ ಸ್ವಾಮೀಜಿ

ಪಂಚಮಸಾಲಿ ಜನಜಾಗೃತಿಗೆ ಹಳ್ಳಿಗಳತ್ತ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸಮಾಜದೊಳಗಿನ ಆಂತರಿಕ ಭಿನ್ನಾಭಿಪ್ರಾಯದಲ್ಲಿ ಕೂಸು (ಜನ) ಬಡವಾಗಬಾರದು; ಆದ್ದರಿಂದ ಸಮಾಜದ ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಲು ಹಳ್ಳಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮೀಸಲಾತಿ ಪಡೆಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಲಿದೆ ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ನಗರದಲ್ಲಿ ಶುಕ್ರವಾರ ಕಿತ್ತೂರುರಾಣಿ ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಕೂಡಲಸಂಗಮ ಹಾಗೂ ನಮ್ಮ ಪೀಠ ಯಾವತ್ತಿದ್ದರೂ ಒಂದೇ. ನಾವು ಅಣ್ಣ–ತಮ್ಮಂದಿರು ಇದ್ದಂತೆ. ನಮ್ಮ ಬಟ್ಟೆಯ ಬಣ್ಣ ಒಂದೇ, ನೀವು ಬೇರೆ ಬೇರೆ ಬಣ್ಣದ ಬಟ್ಟೆಗಳನ್ನು ಧರಿಸಿದ್ದೀರಿ. ಆದ್ದರಿಂದ ಮೊದಲು ನೀವು ಒಂದಾಗಬೇಕು. ಆಗ ಮಾತ್ರ ನಮ್ಮ ಹೋರಾಟಕ್ಕೆ ಶಕ್ತಿ ಬರಲು ಸಾಧ್ಯ’ ಎಂದರು.

‘ಮೀಸಲಾತಿಗಾಗಿ ನಾವು ಏಕೆ ಹೋರಾಟ ಮಾಡುತ್ತಿದ್ದೇವೆ ಎನ್ನುವುದು ಸಮಾಜದ ಎಲ್ಲ ವಯಸ್ಸಿನ ಜನರಿಗೂ ಗೊತ್ತಾಗಬೇಕು. ನಮ್ಮ ಹೋರಾಟದ ಫಲ ನಮಗೇ ಸಿಗುತ್ತದೆಯೊ; ಇಲ್ಲವೊ ಗೊತ್ತಿಲ್ಲ. ಮುಂದಿನ ಪೀಳಿಗೆಯವರಿಗಾದರೂ ಸಿಗಲಿ. ಉತ್ತರ ಕರ್ನಾಟಕದ ಜನ ಮನಸ್ಸು ಮಾಡಿದರೆ ರಾಜ್ಯದಲ್ಲಿ ಪಂಚಮಸಾಲಿ ಸಮಾಜ ಉನ್ನತ ಸ್ಥಾನದಲ್ಲಿ ಬೆಳೆದು ನಿಲ್ಲುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಪಂಚಮಸಾಲಿ ಸಮಾಜವನ್ನು ರಾಜ್ಯ ಸರ್ಕಾರ ’2ಎ’ಗೆ ಸೇರ್ಪಡೆ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಲು ಬೆಳಗಾವಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ನಮ್ಮ ಸಮಾಜದ ಏಳಿಗೆಗೆ ಯಾರೇ ಹೋರಾಡಿದರೂ ಸಮಾಜದ ಎಲ್ಲ ಜನ ಬೆಂಬಲ ನೀಡಬೇಕು. ಮೀಸಲಾತಿಗಾಗಿ ಆಗ್ರಹಿಸಿ ನಡೆಯುವ ಈ ಹೋರಾಟ ಮೊದಲನೆಯದೇನಲ್ಲ. 25 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದ್ದು, ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಯುತ್ತದೆ’ ಎಂದರು.

‘ಈಗಿರುವ ‘3ಬಿ’ಗೆ ಶೇ 5ರಷ್ಟು ಮೀಸಲಾತಿ ಸಿಗುತ್ತಿದೆ. ಇದೇ ಪ್ರವರ್ಗದಲ್ಲಿ ಮುಂದುವರಿಸಿ ಶೇ 10ರಷ್ಟು ಮೀಸಲಾತಿ ಕೊಡಬೇಕು ಎನ್ನುವ ಬೇಡಿಕೆ ಮುಂದಿಟ್ಟು ಹೋರಾಟ ಮಾಡುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದೇವೆ. ಸಮಾಜದ ಎಲ್ಲ ಹಿರಿಯರು, ಕಾನೂನು ತಜ್ಞರ ಜೊತೆ ಸಮಾಲೋಚಿಸಿ ಹೋರಾಟದ ಯೋಜನೆ ರೂಪಿಸುತ್ತೇವೆ. ಈಗ ಹೋರಾಟ ಆರಂಭಿಸುವ ಮೊದಲು ಕುಲಶಾಸ್ತ್ರ ಅಧ್ಯಯನ ಆಗಬೇಕು’ ಎಂದರು.

ಸಿ.ಎಂ. ಬದಲಾವಣೆ: ‘ಔಟ್‌ ಆಫ್‌ ಟಾಪಿಕ್‌’

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದೆಯಲ್ಲವೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಇದು ಔಟ್‌ ಆಫ್‌ ಟಾಪಿಕ್‌’ ಎಂದರು.

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿರುವ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಏನು ಕಿವಿಮಾತು ಹೇಳಬೇಕೊ ಹಾಗೂ ಎಲ್ಲಿ ಹೇಳಬೇಕೊ ಅದನ್ನು ಹೇಳಿದ್ದೇನೆ. ಅದನ್ನು ನಿಮ್ಮ ಮುಂದೆ ಹೇಳುವ ಅಗತ್ಯವಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.