ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ: ಯಥಾಸ್ಥಿತಿಗೆ ಆಗ್ರಹ

ಅಧಿಕಾರಿಯ ಉತ್ತರದಿಂದ ಸಮಾಧಾನಗೊಳ್ಳದ ತೆರಿಗೆದಾರರು
Last Updated 20 ಏಪ್ರಿಲ್ 2021, 14:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಸ್ತಿ ತೆರಿಗೆಯಲ್ಲಿ ಹಲವು ತಿದ್ದುಪಡಿಗಳನ್ನು ಮಾಡಿದ್ದು, ಇವು ಗೊಂದಲದ ಗೂಡುಗಳಾಗಿವೆ. ಆದ್ದರಿಂದ ಸದ್ಯಕ್ಕೆ ತಿದ್ದುಪಡಿ ಮಾಡದ ಹಿಂದಿನ ಆಸ್ತಿ ತೆರಿಗೆ ನಿಯಮವನ್ನೇ ಮುಂದುವರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ತೆರಿಗೆ ಹೆಚ್ಚಳ ಕುರಿತ ಚರ್ಚೆಯಲ್ಲಿ ಈ ಬೇಡಿಕೆ ವ್ಯಕ್ತವಾಯಿತು.

ತಿದ್ದುಪಡಿಯಲ್ಲಿ ಅನೇಕ ಗೊಂದಲಗಳಿವೆ. ಇವುಗಳಿಂದ ಸಾರ್ವಜನಿಕರಿಗೆ ಸ್ಪಷ್ಟವಾಗಿ ಮಾಹಿತಿ ಗೊತ್ತಾಗುತ್ತಿಲ್ಲ. ಕಡಿಮೆ ಮೊತ್ತ ಇರುವವರು ಮಾತ್ರ ಈಗಾಗಲೇ ತೆರಿಗೆ ಪಾವತಿಸಿದ್ದಾರೆ. ಸಿನಿಮಾ ಮಂದಿರ, ವಾಣಿಜ್ಯ ಸಂಕೀರ್ಣಗಳ ಮಾಲೀಕರು ಇನ್ನು ತೆರಿಗೆ ಪಾವತಿಸಿಲ್ಲ. ಕೋವಿಡ್‌ನಿಂದಾಗಿ ಎಲ್ಲರೂ ನಲುಗಿ ಹೋಗಿದ್ದಾರೆ. ತೆರಿಗೆ ಹೆಚ್ಚಳ ಮತ್ತಷ್ಟು ಹೊರೆಯಾಗಿದೆ. ತಿದ್ದುಪಡಿಯಲ್ಲಿಯೂ ಸ್ಪಷ್ಟತೆಯಿಲ್ಲ. ಗೊಂದಲ ಪರಿಹಾರವಾಗದ ಹೊರತು ತೆರಿಗೆ ಪಾವತಿಸುವುದಾದರೂ ಹೇಗೆ? ಎಂದು ಜನರು ಪ್ರಶ್ನಿಸಿದರು.

ಬಾರದ ಅಧಿಕಾರಿ: ಆಸ್ತಿ ತೆರಿಗೆ ತಿದ್ದುಪಡಿಗಳ ಬಗ್ಗೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಅವರನ್ನು ಆಹ್ವಾನಿಸಲಾಗಿತ್ತು. ಇವರ ಬದಲು ಕಂದಾಯ ಉಪ ಆಯುಕ್ತ ಬಿ.ಎಫ್‌. ಜಿದ್ದಿ ಬಂದಿದ್ದರು. ಇವರು ಕೆಲವರ ಪ್ರಶ್ನೆಗಳಿಗೆ ಉತ್ತರ ನೀಡಿದರಾದರೂ, ತೆರಿಗೆದಾರರಿಗೆ ಅದು ಸಮಾಧಾನ ತರಲಿಲ್ಲ.

ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ’ತೆರಿಗೆಗೆ ಸಂಬಂಧಿಸಿದಂತೆ ಜನರಿಗೆ ಹಲವಾರು ಪ್ರಶ್ನೆಗಳಿವೆ. ಇದಕ್ಕೆ ಉತ್ತರ ಕೊಡಬೇಕು. ಆದ್ದರಿಂದ ನೀವೇ ಸಭೆಗೆ ಬರಬೇಕು ಎಂದು ಶಂಕರಾನಂದ ಅವರಿಗೆ ಹಲವು ಬಾರಿ ಒತ್ತಾಯ ಮಾಡಿದ್ದೆವು. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಆದರೆ, ಸಭೆಗೆ ಬರಲಿಲ್ಲ. ಹೀಗಾದರೆ ನಮ್ಮ ಗೊಂದಲಗಳಿಗೆ ಪರಿಹಾರ ಲಭಿಸುವುದು ಯಾವಾಗ’ ಎಂದು ಪ್ರಶ್ನಿಸಿದರು.

ಆದ್ದರಿಂದ ಪಾಲಿಕೆ ಆಯುಕ್ತರು, ಎಲ್ಲ ವಲಯಗಳ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳನ್ನು ಕರೆದು ಮತ್ತೊಂದು ಬಾರಿ ಸಭೆ ನಡೆಸಲಾಗುವುದು. ಆ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಅವರನ್ನು ಕೂಡ ಆಹ್ವಾನಿಸಿ ಅವರ ಸಮ್ಮುಖದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಲದ್ದಡ ತಿಳಿಸಿದರು.

ವಾಣಿಜ್ಯೋದ್ಯಮ ಸಂಸ್ಥೆ ಉಪಾಧ್ಯಕ್ಷರಾದ ವಿನಯ ಜೆ.ಜವಳಿ, ಸಿದ್ದೇಶ್ವರ ಕಮ್ಮಾರ, ಗೌರವ ಕಾರ್ಯದರ್ಶಿ ಅಶೋಕ ಗಡಾದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT