ಗುರುವಾರ , ಮಾರ್ಚ್ 30, 2023
32 °C
ಉತ್ತರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ

ಹುಬ್ಬಳ್ಳಿ: ಮೇಲ್ಸೇತುವೆ ಕಾಮಗಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ರಸ್ತೆ ಕಾಮಗಾರಿ ವಿರೋಧಿಸಿ ಹಾಗೂ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸುರಿಸುತ್ತಿದೆ ಎಂದು ಆರೋಪಿಸಿ, ಉತ್ತರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಮಿನಿ ವಿಧಾನಸೌಧದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಮೇಲ್ಸೇತುವೆ ಯೋಜನೆ ಅವೈಜ್ಞಾನಿಕವಾಗಿದೆ. ಸಂಚಾರ ದಟ್ಟಣೆ ಬದಲಿಗೆ, ಮತ್ತಷ್ಟು ಸಂಚಾರ ಸಮಸ್ಯೆಗಳನ್ನು ಸೃಷ್ಟಿಸಲಿದೆ. ಆದರೂ, ಅನಗತ್ಯವಾಗಿ ಯೋಜನೆಗೆ ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಪೋಲು ಮಾಡುವುದು ಸರಿಯಲ್ಲ. ಬದಲಿಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಒಳಿತು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

2019-20ರಲ್ಲಿ ಚನ್ನಮ್ಮ ವೃತ್ತದ ಎಲ್ಲಾ ರಸ್ತೆಗಳನ್ನು ಸಮೀಕ್ಷೆ ಮಾಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು, ವೃತ್ತದ ಸುತ್ತಮುತ್ತ ಸಂಚಾರ ದಟ್ಟಣೆ ಮತ್ತು ಜನ ಸಂಚಾರವನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬುದರ ಕುರಿತು ವರದಿ ಕೊಟ್ಟಿದೆ. ಚನ್ನಮ್ಮ ವೃತ್ತ ಸಂಪರ್ಕಿಸುವ ರಸ್ತೆಗಳ ಅತಿಕ್ರಮಣವನ್ನು ತೆರವು ಮಾಡಿ, ಅಭಿವೃದ್ಧಿಪಡಿಸಿದರೆ ಮೇಲ್ಸೇತುವೆಯ ಅಗತ್ಯವೇ ಇರುವುದಿಲ್ಲ. ಜೊತೆಗೆ, ನಗರದ ಅಭಿವೃದ್ಧಿಗೆ ಸಂಬಂಧಿಸಿದ 20 ವರ್ಷಗಳ ಹಿಂದಿನ ಮಾಸ್ಟರ್ ಪ್ಲಾನ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಕೈಗಾರಿಕೆಗಳು ಹಾಗೂ ಸಾಫ್ಟ್‌ವೇರ್ ಉದ್ಯಮಗಳನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಸ್ಥಾಪಿಸಬೇಕು. ಇದರಿಂದ ಈ ಭಾಗದ ಪ್ರತಿಭೆಗಳು ಬೇರೆ ನಗರಗಳಿದೆ ವಲಸೆ ಹೋಗುವುದು ತಗ್ಗಲಿದೆ. ಜೊತೆಗೆ ಮಹದಾಯಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.

ವಿಕ್ರಂ ಶಿರೂರ, ಕುಮಾರ ಹಕಾರಿ, ಸಿದ್ದು ತೇಜಿ, ಗೋಪಾಲ ಕುಲಕರ್ಣಿ, ಈರಣ್ಣ ಎಮ್ಮಿ, ಮಹೇಶ ಹಿರೇಮಠ, ಶ್ರೀಕಾಂತ ಹಿಂಜಿ, ಆನಂದ ಪಾಂಡುರಂಗಿ, ಶಾನಬಾಗ ಸುಬ್ರಮಣ್ಯಂ, ಹುಬ್ಬಳ್ಳಿ-ಧಾರವಾಡ ಅಭಿವೃದ್ದಿ ಹೋರಾಟ ಸಮಿತಿ, ನಾಗರಿಕರ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು