ಶನಿವಾರ, ಏಪ್ರಿಲ್ 1, 2023
25 °C
ಲಾಕ್‌ಡೌನ್‌ ತೆರವಿನ ಬಳಿಕ ಮೊದಲ ಹಬ್ಬದ ಖುಷಿ

ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಕಾರಣಕ್ಕೆ ಎರಡು ತಿಂಗಳು ಘೋಷಿಸಲಾಗಿದ್ದ ಲಾಕ್‌ಡೌನ್‌ನಿಂದಾಗಿ ಬಣಗುಡುತ್ತಿದ್ದ ಮಾರುಕಟ್ಟೆಯಲ್ಲಿ ಈಗ ಸಂಭ್ರಮ ತುಂಬಿದೆ.

ವಹಿವಾಟಿಗೆ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ತೆರವಿನ ಬಳಿಕ ಬಂದಿರುವ ಮೊದಲ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆಗೆ ಗುರುವಾರ ಮಣ್ಣಿನ ಎತ್ತುಗಳು, ಹೂವು ಹಾಗೂ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಹಂತ ಹಂತವಾಗಿ ಲಾಕ್‌ಡೌನ್‌ ತೆರವು ಮಾಡಿ, ವ್ಯಾಪಾರದ ಸಮಯ ವಿಸ್ತರಣೆ ಮಾಡಿದಂತೆಲ್ಲ ಜನರ ಓಡಾಟ, ಖರೀದಿ ಹೆಚ್ಚುತ್ತಿದೆ. ವಾಣಿಜ್ಯ ನಗರಿಯ ಪ್ರಮುಖ ಮಾರುಕಟ್ಟೆ ದುರ್ಗದ ಬೈಲ್‌ ಮತ್ತು ಶಹ ಬಜಾರ್‌ ವಾಣಿಜ್ಯ ಸಂಕೀರ್ಣದಲ್ಲಿ ಬಟ್ಟೆಗಳ ಖರೀದಿ ಹೆಚ್ಚಾಗಿತ್ತು.

ಬೆಳಿಗ್ಗೆ 11 ಗಂಟೆಯಿಂದಲೇ ಮಾರುಕಟ್ಟೆಯಲ್ಲಿ ಜನಸಂದಣಿ ಹೆಚ್ಚಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ರಂಗೇರುತ್ತಿದ್ದ ಚಿತ್ರಣ ಗುರುವಾರ ಕಂಡು ಬಂತು. ಇದರಿಂದಾಗಿ ಸಂಚಾರ ದಟ್ಟಣೆಯೂ ಆಗಿತ್ತು.

ಸಮಾಧಾನ: ವ್ಯಾಪಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ವ್ಯಾಪಾರಿಗಳಲ್ಲಿಯೂ ಈಗ ಸಮಾಧಾನ ಮನೆ ಮಾಡಿದೆ.

ಹೂವು, ಸ್ಟೇಷನರಿ ಸಾಮಗ್ರಿ, ಬಟ್ಟೆ ಅಂಗಡಿ, ಬಾಳೆ ಎಲೆ ಮುಂತಾದ ವಸ್ತುಗಳ ಮಾರಾಟ ಜೋರಾಗಿತ್ತು. ‘ಲಾಕ್‌ಡೌನ್‌ ಅವಧಿಯಲ್ಲಿ ಒಂದು ರೂಪಾಯಿಗೂ ಅಲೆದಾಡುವಂತಾಗಿತ್ತು. ಆ ಸಮಯದಲ್ಲಿ ಸಿಕ್ಕಷ್ಟೇ ತಿಂದು ಜೀವನ ಸಾಗಿಸಬೇಕಿತ್ತು. ಈಗ ವ್ಯಾಪಾರ ಪುನಃ ಆರಂಭಿಸಿದ್ದೇನೆ. ಕುಟುಂಬ ನಡೆಸಲು ತೊಂದರೆಯಿಲ್ಲ’ ಎಂದು ದುರ್ಗದ ಬೈಲ್‌ನ ಹೂವಿನ ವ್ಯಾಪಾರಿ ಮುಸ್ತಾಕ್‌ ಅಹ್ಮದ್‌ ಹೇಳಿದರು.

ಕೋವಿಡ್‌ ಮೊದಲ ಎರಡು ಅಲೆಗಳಲ್ಲಿ ನಾವು ಅನುಭವಿಸಿದ ಕಷ್ಟವೇ ಸಾಕಾಗಿದೆ. ಈಗ ಮತ್ತೆ ಮೂರನೆ ಅಲೆ ಬಂದರೆ ಬದುಕು ಛಿದ್ರವಾಗುತ್ತದೆ. ಹೀಗಾಗಿ ಅವಕಾಶ ಸಿಕ್ಕಾಗಲೆಲ್ಲ ಉತ್ತಮ ವ್ಯಾಪಾರ ಮಾಡುತ್ತಿದ್ದೇವೆ. ಎಲ್ಲ ಹಬ್ಬಗಳು ನಡೆದರೆ ಚೆನ್ನಾಗಿ ವ್ಯಾಪಾರವಾಗುತ್ತದೆ ಎಂದರು.

ಮಣ್ಣಿನ ಮೂರ್ತಿಗಳ ಖರೀದಿಗೆ ಬಂದಿದ್ದ ಏಕ್ತಾ ಕಾಲೊನಿ ಬಸಮ್ಮ ‘ಲಾಕ್‌ಡೌನ್‌ನಿಂದಾಗಿ ಈ ವರ್ಷ ಸರಿಯಾಗಿ ಯಾವ ಹಬ್ಬಗಳನ್ನೂ ಮಾಡಿಲ್ಲ. ಈಗ ಅವಕಾಶ ಸಿಕ್ಕಿದೆ. ಶುಕ್ರವಾರ ಮಣ್ಣಿನ ಎತ್ತುಗಳನ್ನು ಪೂಜೆ ಮಾಡಿ ಸಿಹಿ ಅಡುಗೆ ಮಾಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.