ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಆಹಾರ ಪದಾರ್ಥಗಳಲ್ಲಿ ಗುಣಮಟ್ಟ ಅಗತ್ಯ –ಪ್ರಲ್ಹಾದ ಜೋಶಿ

ಹುಬ್ಬಳ್ಳಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ
Last Updated 25 ಡಿಸೆಂಬರ್ 2021, 16:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಆಹಾರ ಪದಾರ್ಥಗಳ ಗುಣಮಟ್ಟ ಮತ್ತು ಸೇವೆ ಉತ್ತಮವಾಗಿದ್ದರೆ ವಿದೇಶಗಳಿಗೂ ರಫ್ತು ಮಾಡಿ, ಅಲ್ಲಿಯೂ ಸಹಕಾರಿ ಸಂಘಗಳು ವ್ಯಾಪಾರದ ನೆಲೆ ಕಂಡುಕೊಳ್ಳಬಹುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅಮರಗೋಳದ ಎಪಿಎಂಸಿ ಆವರಣದಲ್ಲಿ ಶನಿವಾರ ಹುಬ್ಬಳ್ಳಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಶತಮಾನೋತ್ಸವ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಜಗತ್ತಿಗೆ ಪೂರೈಕೆ ಮಾಡುವಷ್ಟು ಆಹಾರ ಉತ್ಪನ್ನಗಳು ನಮ್ಮ ದೇಶದಲ್ಲಿ ಸಿದ್ಧವಾಗುತ್ತವೆ. ಆದರೆ, ಯಾವ ದೇಶಕ್ಕೆ ಯಾವ ಆಹಾರ ಬೇಕು ಎಂದು ಗುರುತಿಸುವ ಅಗತ್ಯವಿದೆ. ಪ್ರತಿಯೊಂದು ದೇಶವೂ ಗುಣಮಟ್ಟವನ್ನು ಎದುರು ನೋಡುತ್ತದೆ. ಈ ನಿಟ್ಟಿನಲ್ಲಿ ಸಹಕಾರಿ ಸಂಘ–ಸಂಸ್ಥೆಗಳು ಗಂಭೀರ ಚಿಂತನೆ ನಡೆಸಬೇಕಿದೆ’ ಎಂದು ಸಲಹೆ ನೀಡಿದರು.

‘ಸಂಘಗಳು ರೈತರ ಬದುಕನ್ನು ಸಹ ಸಶಕ್ತೀಕರಣ ಮಾಡಲು ಮುಂದಾಗಬೇಕಿದೆ. ಅದಕ್ಕಾಗಿ, ಹೊಸ ದಿಕ್ಕಿನಲ್ಲಿ ಯೋಚಿಸಬೇಕು. ಶತಮಾನ ಪೂರೈಸಿದ ಹುಬ್ಬಳ್ಳಿ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ಮತ್ತಷ್ಟು ಅಭಿವೃದ್ಧಿಯತ್ತ ಸಾಗಲಿ’ ಎಂದು ಶುಭ ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಖಾಸಗಿ ಸಹಕಾರಿ ಸಂಘ–ಸಂಸ್ಥೆಗಳಿಗೆ ಸರ್ಕಾರಿ ಸಂಘ–ಸಂಸ್ಥೆಗಳು ಸ್ಪರ್ಧೆ ನೀಡುವಂತಾಗಬೇಕು. ಖಾಸಗಿ ಸಹಕಾರಿ ಸಂಘದವರೆಲ್ಲ ರಾಜಕೀಯ ಮುಖಂಡರಾಗಿದ್ದಾರೆ. ಈ ಸಂಸ್ಥೆ ರಾಜಕೀಯಕ್ಕೆ ಅಸ್ತ್ರವಾಗಬಾರದು. ವೈಯಕ್ತಿಕ ಹಿತಾಸಕ್ತಿ ಬಿಟ್ಟು, ರೈತರ ಪರವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹಾಗೂ ಮುಕ್ತಿ ಮಂದಿರದ ವಿಮಲರೇಣುಕ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಸಿ.ಎಂ. ನಿಂಬಣ್ಣವರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ವಿ.ಎಸ್. ಕೆಂಚನಗೌಡ್ರ, ಪಿ.ಸಿ. ಸಿದ್ದನಗೌಡರ, ಮೋಹನ ಲಿಂಬಿಕಾಯಿ ಹಾಗೂ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು ಇದ್ದರು.

‘ಭಿನ್ನಾಭಿಪ್ರಾಯ ಬದಿಗಿಟ್ಟು ಕೆಲಸ ಮಾಡೋಣ’
‘ರೈತರ ಸಮಸ್ಯೆ ಎದುರಾದಾಗ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಒಂದಾಗಿ ಕೆಲಸ ಮಾಡೋಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ರೈತರು ಮತ್ತು ಸಹಕಾರಿ ಸಂಸ್ಥೆಯ ಜೊತೆಗೆ ಸರ್ಕಾರ ಸದಾ ಇರುತ್ತದೆ. ಖಾಸಗೀಕರಣ ಮತ್ತು ಜಾಗತೀಕರಣದ ಮಧ್ಯೆಯೂ ಸಹಕಾರಿ ಸಂಸ್ಥೆ ಶತಮಾನ ಪೂರೈಸಿ ಅಭಿವೃದ್ಧಿಯತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT