ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ: ಜಮೀನಿನಲ್ಲಿ ಹೆಚ್ಚಿದ ತೇವಾಂಶ

ಜಿಲ್ಲೆಯಲ್ಲಿ ಜೂನ್‌, ಜುಲೈನಲ್ಲಿ ವಾಡಿಕೆಗಿಂತ ಶೇ18ರಷ್ಟು ಹೆಚ್ಚು ಮಳೆ: ಬೆಳೆ ಹಾನಿ ಸಾಧ್ಯತೆ
Published : 25 ಆಗಸ್ಟ್ 2024, 4:57 IST
Last Updated : 25 ಆಗಸ್ಟ್ 2024, 4:57 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಪ್ರಸಕ್ತ ಅವಧಿಯಲ್ಲಿ ವಾಡಿಕೆಗಿಂತ ಶೇ 18ರಷ್ಟು ಉತ್ತಮ ಮಳೆಯಾಗಿದ್ದು, ಹೀಗೆ ನಿರಂತರ ಹೆಚ್ಚು ಮಳೆ ಸುರಿದರೆ ಮುಂಗಾರು ಬೆಳೆಗಳ ಫಸಲು ಹಾನಿಯಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಒಟ್ಟು 2,70,840 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯಿತ್ತು. ಜೂನ್‌ ಆರಂಭದಲ್ಲಿಯೇ ವಾಡಿಕೆಯಂತೆ ಮಳೆ ಸುರಿದ ಪರಿಣಾಮ ಜಿಲ್ಲೆಯಾದ್ಯಂತ 2,71,341 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ.ಉತ್ತಮ ಮಳೆಯಿಂದ ಇಲಾಖೆ ನಿಗದಿಪಡಿಸಿದ ಗುರಿಗಿಂತ 501 ಹೆಕ್ಟೇರ್‌ ಪ್ರದೇಶದಲ್ಲಿ ಹೆಚ್ಚುವರಿ  ಬಿತ್ತನೆ ಆಗಿದೆ.

‘ಈಗಾಗಲೇ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ ಭತ್ತ, ಜೋಳ, ಮೆಕ್ಕೆಜೋಳ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂದಿ, ಶೇಂಗಾ, ಹತ್ತಿ, ಕಬ್ಬು ಸೋಯಾಬಿನ್‌ ಉತ್ತಮ ಪೈರು ಬಂದಿದೆ. ಜಿಲ್ಲೆಯಲ್ಲಿ ಪ್ರಸ್ತುತ 5 ರಿಂದ 8ಎಂಎಂ ಮಳೆ ಸುರಿಯುತ್ತಿದೆ. ಮುಂಗಾರಿನ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿಲ್ಲ’ ಎಂದು ಧಾರವಾಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಕಿರಣ್‌ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಾಡಿಕೆಗಿಂತ ಶೇ 18ರಷ್ಟು ಹೆಚ್ಚು ಮಳೆ ಸುರಿದಿದೆ. ಧಾರವಾಡ, ಕಲಘಟಗಿ, ಕುಂದಗೋಳ, ನವಲಗುಂದ, ಅಳ್ನಾವರ ತಾಲ್ಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಆದರೆ, ಹುಬ್ಬಳ್ಳಿ ಗ್ರಾಮೀಣ ಮತ್ತು ಹುಬ್ಬಳ್ಳಿ ನಗರ ಪ್ರದೇಶ, ಅಣ್ಣಿಗೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ’ ಎಂದು ಅವರು ತಿಳಿಸಿದರು.

‘ಹೆಸರು, ಉದ್ದು, ಸೋಯಾ ಅವರೆ, ಶೇಂಗಾ, ಗೋವಿನಜೋಳ ಸೇರಿ ಬಿತ್ತನೆ ಮಾಡಿದ ಬೆಳೆಗಳಿಗೆ ಈಗಿನ ಮಳೆ ಅನುಕೂಲವಾಗಿದೆ. ಆದರೂ, ಕೆಲವಡೆ ಹೊಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ, ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುವ ಸಾಧ್ಯತೆಯಿದೆ. ಬೆಳೆ ರಕ್ಷಣಾ ಕ್ರಮ ಕೈಗೊಳ್ಳಬೇಕು’ ಎಂದು ಅವರು ತಿಳಿಸಿದರು. 

ಶಿವಾಜಿ ಡೊಳ್ಳಿನ್
ಶಿವಾಜಿ ಡೊಳ್ಳಿನ್
ಅಶೋಕ ಜೋಡಟ್ಟಿ
ಅಶೋಕ ಜೋಡಟ್ಟಿ
ಜಿಲ್ಲೆಯಲ್ಲಿ ಈರುಳ್ಳಿ ಕೆಂಪು ಮೆಣಸಿನಕಾಯಿ ಹೆಚ್ಚು ಬೆಳೆ ಪ್ರದೇಶವಿದ್ದು 5 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ 9085 ಹೆಕ್ಟೇರ್‌ನಲ್ಲಿ ಕೆಂಪು ಮೆಣಸಿನಕಾಯಿ ಬೆಳೆ ನಾಟಿಯಾಗಿದೆ.
-ಕಾಶಿನಾಥ ಭದ್ರಣ್ಣವರ. ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ಧಾರವಾಡ
ನಿರಂತರ ಮಳೆಯಿಂದ ನಮ್ಮ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿ ಮೆಕ್ಕೆಜೋಳ ಕಬ್ಬು ಬೆಳೆಗಳಿಗೆ ಜವಳು ಹಿಡಿದಿದೆ. ಇಳುವರಿ ಕುಂಠಿತ ಆಗುವ ಸಾಧ್ಯತೆ ಇದೆ.  
- ಶಿವಾಜಿ ಡೊಳ್ಳಿನ್ ರೈತ ಮುಖಂಡ ಹುಲಿಕೆರಿ
ಮಳೆಯು ಭತ್ತದ ಬೆಳೆಗೆ ಪೂರಕವಾಗಿದೆ. ಆದರೆ ಅತಿಯಾದ ನೀರಿನಿಂದ ನಮ್ಮ ಹೊಲದಲ್ಲಿ ಮೆಕ್ಕೆಜೋಳ ಕಬ್ಬು ಕೊಳೆಯುತ್ತಿದೆ. ಇದರಿಂದ ನಮಗೆ ಆತಂಕ ಹೆಚ್ಚಿದೆ.  
- ಅಶೋಕ್ ಜೋಡಟ್ಟಿ ರೈತ ಅರವಟಿಗೆ ಗ್ರಾಮ ಅಳ್ನಾವರ ತಾಲ್ಲೂಕು
ಬೆಳೆ ಹೂವು ಬಿಡುವ ಕಾಯಿ ಕಟ್ಟುವ ಈ ಸಮಯದಲ್ಲಿ ಬಿಸಿಲು ಬೇಕು. ಆದರೆ ಮೋಡಕವಿದ ವಾತಾವರಣ ಜಿಜಿಜಿಟಿ ಮಳೆಯಿಂದ ಬೆಳೆಗಳಿಗೆ ರೋಗ ಕೀಟಬಾಧೆಯಾಗಿ ಹಾಳಾಗಬಹುದು.
- ರವಿಪಾಟೀಲ ಹವಾಮಾನ ವಿಭಾಗದ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ

ಬೆಳೆಗಳ ರಕ್ಷಣೆಗೆ ಏನು ಮಾಡಬೇಕು?

‘ಜೂನ್ ಜುಲೈನಲ್ಲಿ ಸುರಿದ ಮಳೆಯಿಂದಾಗಿ ಜಮೀನಿನಲ್ಲಿ ತೇವಾಂಶ ಹೆಚ್ಚಾಗಿದೆ. ರೈತರು ಬೆಳೆಗಳ ರಕ್ಷಣೆಗೆ ಒತ್ತು ನೀಡಬೇಕು. ಹೆಚ್ಚಿನ ಪೋಷಕಾಂಶಗಳನ್ನು ನೀಡಿ ಬೆಳೆಗಳ ಚೇತರಿಕೆಗೆ ಕ್ರಮವಹಿಸಬೇಕು‘ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಕಿರಣ್‌ಕುಮಾರ್‌. ‘ಜಿಲ್ಲೆಯಲ್ಲಿ ಈರಳ್ಳಿ ಮತ್ತು ಕೆಂಪು ಮೆಣಸಿನಕಾಯಿ ತೋಟಗಾರಿಕೆ ಬೆಳೆ ಪ್ರದೇಶ ಹೆಚ್ಚಿದೆ. ಈಗಿನ ಮಳೆಗೆ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಹಾನಿಯಿಲ್ಲ. ಆದರೆ ಹೆಚ್ಚು ಮಳೆ ಸುರಿದಲ್ಲಿ ಈರುಳ್ಳಿ ಮತ್ತು ಕೆಂಪು ಮೆಣಸಿನಕಾಯಿ ಬೆಳೆ ರೋಗಕ್ಕೆ ಒಳಗಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಧಾರವಾಡ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕಾಶಿನಾಥ ಭದ್ರಣ್ಣವರ. ‘ಹೊಲಗಳಲ್ಲಿ ನಿಂತ ಹೆಚ್ಚುವರಿ ನೀರು ಹೊರಹಾಕಬೇಕು ಜಮೀನಿನಲ್ಲಿ ಬಸಿಗಾಲುವೆ ಮಾಡಬೇಕು.  ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತಿದ್ದಲ್ಲಿ ನೀರಿನಲ್ಲಿ ಕರಗುವ ರಸಗೊಬ್ಬರ ಬಳಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT