ಶುಕ್ರವಾರ, ಆಗಸ್ಟ್ 6, 2021
21 °C
ನೀರು, ಕೆಸರು ತುಂಬಿದ ರಸ್ತೆಗಳಲ್ಲಿ ಜನರ ಪರದಾಟ

ಧಾರವಾಡ | ಮಳೆ, ಲಾಕ್‌ಡೌನ್‌ನಲ್ಲೇ ಓಡಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಸೋಂಕು ಹರಡುವುದನ್ನು ತಡೆಯುವ ಸಲುವಾಗಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಲಾಕ್‌ಡೌನ್‌ ಘೋಷಿಸಲಾಗಿದೆ. ನಗರದಲ್ಲಿ ಮೇಲಿಂದ ಮೇಲೆ ಮಳೆ ಬೀಳುತ್ತಲೇ ಇದೆ. ಆದರೂ, ಜನರ ಓಡಾಟ ಶುಕ್ರವಾರ ಕಡಿಮೆಯಾಗಿರಲಿಲ್ಲ.

ಅಗತ್ಯ ದಿನಸಿಗಳನ್ನು ಮಾರಾಟ ಮಾಡಲು ಮಧ್ಯಾಹ್ನ 12 ಗಂಟೆ ತನಕ ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಜನತಾ ಬಜಾರ್‌, ಶಿರೂರು ಪಾರ್ಕ್‌, ದುರ್ಗದ ಬೈಲ್‌ನಲ್ಲಿ ಕಿರಾಣಿ ಅಂಗಡಿಗಳ ಮುಂದೆ ಜನ ಅಂತರ ಮರೆತು ನಿಂತಿದ್ದರು. ದುರ್ಗದ ಬೈಲ್‌ನ ಹೂವಿನ ಮಾರುಕಟ್ಟೆ, ಶಹಬಜಾರ್‌, ಗೌಳಿ ಗಲ್ಲಿಯ ಹಿರೇಪೇಟ ಮುಖ್ಯ ರಸ್ತೆ ಮತ್ತು ಹಳೇ ಹುಬ್ಬಳ್ಳಿಯ ತರಕಾರಿ ಮಾರುಕಟ್ಟೆಯಲ್ಲಿ ಜನರ ನಡುವೆ ಅಂತರ ಕಂಡು ಬರಲಿಲ್ಲ.

ಗುಂ‍ಪಾಗಿ ನಿಂತಿದ್ದ ಗ್ರಾಹಕರನ್ನು ದೂರ ನಿಲ್ಲುವಂತೆ ಪೊಲೀಸರು ಪದೇ ಪದೇ ಹೇಳಿದರೂ ಕೇಳಲಿಲ್ಲ. ಪೊಲೀಸರು ಗದರಿಸಿದಾಗ ಮಾತ್ರ ದೂರ ನಿಲ್ಲುತ್ತಿದ್ದ ಗ್ರಾಹಕರು ಮತ್ತೆ ಗುಂಪಾಗಿ ನಿಂತು ತರಕಾರಿ ಖರೀದಿಸುತ್ತಿದ್ದರು. ನಗರದ ಮುಖ್ಯ ಭಾಗ ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್‌ ವೃತ್ತ, ಕೇಶ್ವಾಪುರದಲ್ಲಿ ದ್ವಿಚಕ್ರ ವಾಹನಗಳ ಸಂಚಾರಿ ಹೆಚ್ಚಾಗಿತ್ತು.

ಮುಂದುವರಿದ ಮಳೆ: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಜಿಟಿ, ಜಿಟಿ ಮಳೆ ಮುಂದುವರಿಯಿತು. ಬೆಳಿಗ್ಗೆ ಕೆಲಹೊತ್ತು ಮೋಡ ಕವಿದ ವಾತಾವರಣವಿತ್ತು. ನಂತರ ಸ್ವಲ್ಪ ಸಮಯ ಮಳೆ ಬಂದ ಬಳಿಕ ಬಿಸಿಲು ಬಿತ್ತು. ಮತ್ತೆ ಮಳೆ ಆರಂಭವಾಯಿತು. ಹೀಗೆ ದಿನಪೂರ್ತಿ ವರುಣ ಚಿನ್ನಾಟವಾಡಿದ.

ಗುರುವಾರ ಹುಬ್ಬಳ್ಳಿಯಲ್ಲಿ 14.5 ಮಿಲಿ ಮೀಟರ್‌ ಮಳೆಯಾಗಿದೆ. ಛಬ್ಬಿಯಲ್ಲಿ 7.2 ಮಿ.ಮೀ., ಶಿರಗುಪ್ಪಿಯಲ್ಲಿ 4ಮಿ.ಮೀ., ಮತ್ತು ಬ್ಯಾಹಟ್ಟಿಯಲ್ಲಿ 8 ಮಿ.ಮೀ. ಮಳೆ ಸುರಿದಿದೆ.

ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಹೊಸೂರಿನಲ್ಲಿರುವ ಹೊಸ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಅಪೂರ್ಣವಾಗಿರುವ ಸಿ.ಸಿ ರಸ್ತೆ ಕಾಮಗಾರಿಯಿಂದ ಸವಾರರು ವಾಹನ ಚಾಲನೆಗೆ ಪರದಾಡುಂತಾಯಿತು. ತೆಗ್ಗಿನಲ್ಲಿ ತುಂಬಿಕೊಂಡಿದ್ದ ನೀರಿನಲ್ಲಿಯೇ ತೆರಳಬೇಕಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.