ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಂಡಗೆ ಹತ್ಯೆಗೆ ₹25 ಲಕ್ಷ ಸುಪಾರಿ: ಐವರ ಬಂಧನ

Last Updated 9 ಡಿಸೆಂಬರ್ 2020, 5:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಬಾಬಾಸಾನಗಲ್ಲಿಯಲ್ಲಿ ನ.25 ರಂದು ನಡೆದಿದ್ದ ಮಾಜಿ ರೌಡಿಷೀಟರ್ ರಮೇಶ ಭಾಂಡಗೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹರ ಠಾಣೆ ಪೊಲೀಸರು ಮಂಗಳವಾರ ಐವರನ್ನು ಬಂಧಿಸಿ, ₹6.01 ಲಕ್ಷ ನಗದು, ಎರಡು ದ್ವಿ ಚಕ್ರ ವಾಹನ ಹಾಗೂ ಐದು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಭಾಂಡಗೆ ಕೊಲೆಗೆ ₹25 ಲಕ್ಷ ಸುಪಾರಿ ನೀಡಲಾಗಿತ್ತು ಎನ್ನುವ ಮಾಹಿತಿ ಕಲೆಹಾಕಿದ್ದಾರೆ.

ಹಳೇಹುಬ್ಬಳ್ಳಿ ನಿವಾಸಿಗಳಾದ ರಫಿಕ್‌ ಜವಾರಿ, ವಾಸಿಮ್‌ ಬಂಕಾಪುರ, ಶಿವಾಜಿ ಮಿಶಾಳ, ಫೈಯಾಜ್‌ಅಹ್ಮದ್‌ ಪಲ್ಲಾನ ಮತ್ತು ಗದುಗಿನ ಮಹಾವೀರ ನಗರದ ತೌಸೀಫ್‌ ಇಸಾಕ್‌ ಬಂಧಿತ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಇಜಾಜ್‌ಅಹ್ಮದ್‌ ಬಂಕಾಪುರ ಎಂಬಾತನನ್ನು ಬಂಧಿಸಲಾಗಿತ್ತು. ವೈಷಮ್ಯದ ಹಿನ್ನೆಲೆಯಲ್ಲಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದನು. ಅವನ ಮೊಬೈಲ್‌ ನಂಬರ್‌ನ ಕರೆಗಳ ಮಾಹಿತಿ ಕಲೆ ಹಾಕಿದಾಗ ಪೊಲೀಸರಿಗೆ ಇದು ಸುಪಾರಿ ಕೊಲೆ ಎನ್ನುವ ಮಾಹಿತಿ ದೊರಕಿತ್ತು. ನಂತರ ಇನ್‌ಸ್ಪೆಕ್ಟರ್‌ ಎಂ.ಎಸ್‌. ಪಾಟೀಲ ನೇತೃತ್ವದ ತಂಡ, ಇಜಾಜ್‌ಅಹ್ಮದ್‌ನನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್‌ ವಶಕ್ಕೆ ಪಡೆದು ತನಿಖೆ ಚುರುಕುಗೊಳಿಸಿತ್ತು.

ಸುಪಾರಿಗೆ ಕಾರಣ: ‘ಗಬ್ಬೂರು ಗ್ರಾಮದಲ್ಲಿ ರಫೀಕ್‌ ಜವಾರಿ ಮತ್ತು ಶಿವಾಜಿ ಮಿಶಾಳ ಅನಧಿಕೃತವಾಗಿ ಫ್ಯಾಕ್ಟರಿ ಕಟ್ಟಿಕೊಂಡಿದ್ದಾರೆ ಎಂದು ರಮೇಶ ಭಾಂಡಗೆ, ವಿದ್ಯುತ್‌ ಸರಬರಾಜು ನಿಲ್ಲಿಸಲು ಕೆಇಬಿಗೆ ಪತ್ರ ಬರೆದಿದ್ದರು. ಇದರಿಂದ ಕೋಪಗೊಂಡ ಅವರಿಬ್ಬರೂ ರಮೇಶ ಕೊಲೆ ಮಾಡಲು ಇಜಾಜ್‌ಅಹ್ಮದ್‌ಗೆ ₹25 ಲಕ್ಷ ಸುಪಾರಿ ನೀಡಿದ್ದರು. ಇಜಾಜ್‌ಅಹ್ಮದ್‌ನು ಸಹೋದರ ಹಾಗೂ ಸ್ನೇಹಿತರ ಜೊತೆ ಸೇರಿ ರಮೇಶ ಭಾಂಡಗೆ ಅವರನ್ನು ಹತ್ಯೆಗೈದಿದ್ದಾನೆ’ ಎಂದು ಇನ್‌ಸ್ಪೆಕ್ಟರ್‌ ಎಂ.ಎಸ್‌. ಪಾಟೀಲ ತಿಳಿಸಿದ್ದಾರೆ.

ಪಿಎಸ್‌ಐ ಬಿ.ಎನ್‌. ಸಾತಣ್ಣವರ ಹಾಗೂ ಸಿಬ್ಬಂದಿ ಎಂ.ಎ. ಅಯ್ಯನಗೌಡರ, ಸಿ.ಎಸ್‌. ಚಲವಾದಿ, ಎಸ್‌.ಐ. ಕಲಘಟಗಿ, ಕೃಷ್ಣಾ ಕಟ್ಟಿಮನಿ, ಎಸ್‌.ಬಿ. ಕಟ್ಟಿಮನಿ, ಎಸ್‌.ವಿ. ಯರಗುಪ್ಪಿ, ಎಸ್‌.ಕೆ. ಇಂಗಳಗಿ, ಎಚ್‌.ಬಿ. ನಂದೇರ, ಕೆ.ಎಚ್‌. ರಣಗಿ, ಮಾರುತಿ ಬಸಣ್ಣವರ ತನಿಖೆಯಲ್ಲಿ ಪಾಲ್ಗೊಂಡಿದ್ದರು.

ಒಡಿಶಾ ಗುತ್ತಿಗೆದಾರರಿಂದ ₹18 ಲಕ್ಷ ವಂಚನೆ:

ಹುಬ್ಬಳ್ಳಿ: ತಾಲ್ಲೂಕಿನ ಮಾವನೂರ ಗ್ರಾಮದ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡಲು ಕಾರ್ಮಿಕರನ್ನು ಕರೆದುಕೊಂಡು ಬರುವುದಾಗಿ ಹೇಳಿದ್ದ ಕಾರ್ಮಿಕ ಗುತ್ತಿಗೆದಾರರಿಬ್ಬರು, ನಗರದ ಕೇಶ್ವಾಪುರದ ಉದ್ಯಮಿ ರವಿ ಕಾವಡೆ ಅವರಿಂದ ₹18 ಲಕ್ಷ ಪಡೆದು ವಂಚನೆ ಎಸಗಿದ್ದಾರೆ.

ಒಡಿಶಾ ಮೂಲದವರಾದ ಹನ್ಸಚಂದ್ರ ಜುಡಿಸ್ಟರ್‌ ಮತ್ತು ಭಾಂದನಾ ಬಾಗ್‌ ವಂಚನೆ ಮಾಡಿದ ಆರೋಪಿಗಳು. ‘ಒಡಿಶಾದಿಂದ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಬರಬೇಕೆಂದರೆ, ಒಬ್ಬರಿಗೆ ₹1ಲಕ್ಷ ನೀಡಬೇಕಾಗುತ್ತದೆ ಎಂದು ಗುತ್ತಿಗೆದಾರರು, 2019ರ ಏಪ್ರಿಲ್‌ನಲ್ಲಿ ಹಣ ಪಡೆದು ಹೋಗಿದ್ದರು. ಅಂದಿನಿಂದ ಈವರೆಗೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಹಣವನ್ನೂ ಮರಳಿಸದೆ, ಕೂಲಿ ಆಳುಗಳನ್ನು ಕಳುಹಿಸದೆ ಮೋಸ ಮಾಡಿದ್ದಾರೆ’ ಎಂದು ಉದ್ಯಮಿ ರವಿ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆನ್‌ಲೈನ್‌ಲ್ಲಿ ₹1.15 ಲಕ್ಷ ವಂಚನೆ:

ಹುಬ್ಬಳ್ಳಿ: ಬೆಳಗಾವಿಯ ಮುರಗೋಡದಿಂದ ಬಂಗಾರದ ಆಭರಣ ಹಾಗೂ ಮೊಬೈಲ್‌ ಕಳವು ಮಾಡಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ಕೋಟೆ ನಿವಾಸಿ ಶಂಕರ ಕುಲಕರ್ಣಿ ಬಂಧಿತ ವ್ಯಕ್ತಿ. ಕೇಶ್ವಾಪುರದ ರಮೇಶ ಭವನದ ಬಳಿ ಕಳವು ಮಾಡಿರುವ ಆಭರಣಗಳನ್ನು ಮಾರಾಟ ಮಾಡಲು ಬಂಗಾರದ ಅಂಗಡಿ ಹುಡುಕುತ್ತಿದ್ದ ವೇಳೆ ಬಂಧಿಸಲಾಗಿದೆ. ಆರೋಪಿಯಿಂದ ₹1.15 ಲಕ್ಷ ಮೌಲ್ಯದ 25 ಗ್ರಾಂ ಬಂಗಾರದ ಸರ, ₹2.65 ಲಕ್ಷ ಮೌಲ್ಯದ 59 ಗ್ರಾಂ ಮಾಂಗಲ್ಯ ಸರ ಹಾಗೂ ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ಲಕ್ಕಿ ಡ್ರಾ ಹೆಸರಲ್ಲಿ ₹1.75 ಲಕ್ಷ ವಂಚನೆ:

ಹುಬ್ಬಳ್ಳಿ: ಕೌನ್‌ ಬನೇಗಾ ಕರೋಡಪತಿಯಿಂದ ₹25 ಲಕ್ಷ ಗೆದ್ದಿದ್ದೀರಿ ಎಂದು ನಗರದ ಹೊಸೂರಿನ ನಿವಾಸಿ ಶ್ರೀಧರ ಚೌಧರಿ ಅವರನ್ನು ನಂಬಿಸಿದ ವಂಚಕ, ಅವರ ಖಾತೆಯಿಂದ ₹1.75 ಲಕ್ಷವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.

ಶ್ರೀಧರ ಅವರ ಮೊಬೈಲ್‌ಗೆ ಲಕ್ಕಿ ಡ್ರಾ ಗೆದ್ದಿರುವುದಾಗಿ ವಂಚಕ ಮೊದಲು ಸಂದೇಶ ಕಳುಹಿಸಿದ್ದ. ಅದನ್ನು ವಿಚಾರಿಸಲೆಂದು ಶ್ರೀಧರ ಸಂದೇಶ ಬಂದ ನಂಬರ್‌ಗೆ ಕರೆ ಮಾಡಿದಾಗ, ಹಿಂದಿಯಲ್ಲಿ ಮಾತನಾಡಿದ ವಂಚಕ ‘ಲಕ್ಕಿ ಡ್ರಾನಲ್ಲಿ ಗೆದ್ದಿರುವ ಹಣ ಪಡೆಯಲು ಆದಾಯ ತೆರಿಗೆ‌, ಜಿಎಸ್‌ಟಿ ಶುಲ್ಕ ಎಂದು ಹಣ ವರ್ಗಾಯಿಸಿಬೇಕು’ ಎಂದು ನಂಬಿಸಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮೂರು ಬೇರೆ ಬೇರೆ ಖಾತೆ ನಂಬರ್‌ ನೀಡಿದ್ದನು. ಅವರು ಹಂತ, ಹಂತವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹3.05 ಲಕ್ಷ ಮೌಲ್ಯದ ಕೀಟನಾಶಕ ವಶ:

ಹುಬ್ಬಳ್ಳಿ:ನಗರದ ಲ್ಯಾಮಿಂಗ್ಟನ್‌ ರಸ್ತೆಯ ಸೂರ್ಯ ಅಗ್ರೊ ಏಜೆನ್ಸೀಸ್‌ ಮತ್ತು ನೀಲಿಜಿನ್‌ ರಸ್ತೆ ಬಳಿಯಿರುವ ವಿಜಯಲಕ್ಷ್ಮಿ ಸೀಡ್ಸ್ ಕಾರ್ಪೋರೇಷನ್ ಅಂಗಡಿ ಮೇಲೆ ಹುಬ್ಬಳ್ಳಿ ತಾಲ್ಲೂಕು ಕೃಷಿ ಅಧಿಕಾರಿಗಳು ದಾಳಿ ನಡೆಸಿ, ಪರವಾನಗಿ ಮತ್ತು ನೋಂದಣಿ ಇಲ್ಲದೆ ಮಾರಾಟ ಮಾಡುತ್ತಿದ್ದ ₹3.05 ಲಕ್ಷ ಮೌಲ್ಯದ ಕೀಟನಾಶಕ ವಶಕ್ಕೆ ಪಡೆದುಕೊಳ್ಳಲಾಗಿದೆಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಎ. ಅಣಗೌಡರ ತಿಳಿಸಿದ್ದಾರೆ.

₹29ಸಾವಿರ ವಂಚನೆ:

ಹುಬ್ಬಳ್ಳಿ: ಪೇಟಿಎಂನಿಂದ ಬಹುಮಾನ ಬಂದಿದೆ ಎಂದು ಕಾರವಾರ ರಸ್ತೆ ನಿವಾಸಿ, ವೈದ್ಯ ವಿದ್ಯಾರ್ಥಿ ಅಮೋಘ ಹೂಲಿ ಅವರಿಗೆ ದೂರವಾಣಿ ಕರೆ ಮಾಡಿ ನಂಬಿಸಿದ ವಂಚಕಿ, ಅವರ ಖಾತೆಯಿಂದ ₹29 ಸಾವಿರವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಕೊಂಡಿದ್ದಾಳೆ.

ಪೇಟಿಎಂನಿಂದ ಬಂದಿರುವ ಬಹುಮಾನ ಪಡೆಯಲು, ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಬ್ಯಾಂಕ್‌ ಮಾಹಿತಿ ಪಡೆದು ಹಣ ವರ್ಗಾವಣೆ ಮಾಡಿಕೊಂಡಿದ್ದಾಳೆ. ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿಕ್ಕು ತಪ್ಪಿಸಿ ಕಳವು:

ಹುಬ್ಬಳ್ಳಿ: ಮೈಸೂರಿನಿಂದ ಪೇಪರ್‌ ರೋಲ್‌ಗಳನ್ನು ತುಂಬಿಕೊಂಡು ಧಾರವಾಡಕ್ಕೆ ಹೊರಟಿದ್ದ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ 4ರ ರಾಯನಾಳ ಬ್ರಿಡ್ಜ್‌ ಬಳಿ ಇಬ್ಬರು ತಡೆದು, ₹10ಸಾವಿರ ನಗದು ಹಾಗೂ ಮೊಬೈಲ್‌ ದೋಚಿ ಪರಾರಿಯಾಗಿದ್ದಾರೆ.

ಪಲ್ಸರ್‌ ಬೈಕ್‌ ಮೇಲೆ ತೆರಳುತ್ತಿದ್ದ ಇಬ್ಬರು ಯುವಕರು ಲಾರಿಗೆ ಕಟ್ಟಿದ ಹಗ್ಗ ಸಡಿಲವಾಗಿದೆ ಎಂದು ಲಾರಿ ನಿಲ್ಲಿಸಿದ್ದರು. ಚಾಲಕ ಮತ್ತು ಕ್ಲೀನರ್‌ ಲಾರಿಯ ಹಿಂದೆ ಹೋಗಿ ಬರುವಷ್ಟರಲ್ಲಿ ಕ್ಯಾಬಿನ್‌ನಲ್ಲಿದ್ದ ಹಣ ಹಾಗೂ ಮೊಬೈಲ್‌ ಕಳವು ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಚಾಲಕ ಸುರೇಶ ಜನಕರ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT