ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ranji Trophy | ಎಂಟರ ಘಟ್ಟದತ್ತ ಕರ್ನಾಟಕ ಚಿತ್ತ

ರಣಜಿ ಕ್ರಿಕೆಟ್; ಕರ್ನಾಟಕ–ಚಂಡೀಗಢ ತಂಡಗಳ ಹಣಾಹಣಿ ಇಂದಿನಿಂದ
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಎಂಟರ ಘಟ್ಟ ಪ್ರವೇಶಿಸುವ ವಿಶ್ವಾಸದೊಂದಿಗೆ ಕರ್ನಾಟಕ ತಂಡ, ಶುಕ್ರವಾರ ಆರಂಭವಾಗುವ ‘ಸಿ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಚಂಡೀಗಢ ತಂಡವನ್ನು ಎದುರಿಸಲಿದೆ.

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಸುಲಭವಾಗಿ ಎಂಟರ ಘಟ್ಟಕ್ಕೆ ಲಗ್ಗೆ ಇಡುವ ಅವಕಾಶ ಆತಿಥೇಯರಿಗಿ ಇದೆ. ಇನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾಧಿಸಿದರೂ ಎಂಟರ ಘಟ್ಟ ಪ್ರವೇಶ ಖಚಿತ. ಸದ್ಯ ಮಯಂಕ್ ಅಗರವಾಲ್ ನೇತೃತ್ವದ ತಂಡ 24 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.

ಒಂದೊಮ್ಮೆ ಸೋಲನುಭವಿಸಿದಲ್ಲಿ ಮಾತ್ರ, ಅಂಕಪಟ್ಟಿಯಲ್ಲಿ ನಂತರ ಸ್ಥಾನದಲ್ಲಿರುವ ತಮಿಳುನಾಡು, ಗುಜರಾತ್‌, ರೈಲ್ವೇಸ್‌ ತಂಡಗಳ ಫಲಿತಾಂಶಕ್ಕೆ ಕಾಯಬೇಕಾಗುತ್ತದೆ. ಕರ್ನಾಟಕ ತಂಡವು ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಸೋಲು ಕಂಡಿದೆ. ಎರಡು ಪಂದ್ಯಗಳು ಡ್ರಾ ಆಗಿವೆ. ಒಂದೂ ಜಯ ಕಾಣದ ಚಂಡೀಗಢದ ಖಾತೆಯಲ್ಲಿ ಕೇವಲ 5 ಅಂಕಗಳಿವೆ.

ಇದೇ ಮೈದಾನದಲ್ಲಿ ಕಳೆದ ತಿಂಗಳು ಹಾಲಿ ಋತುವಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ಎದುರು ಸುಲಭ ಜಯದೊಡನೆ ಅಭಿಯಾನ ಆರಂಭಿಸಿತ್ತು. ಆ ಪಂದ್ಯದಲ್ಲಿ 193 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್‌ ನಂತರ ಮತ್ತೆ ಎರಡು ಶತಕ ಗಳಿಸಿ ಒಳ್ಳೆಯ ಲಯದಲ್ಲಿದ್ದಾರೆ. ಆದರೆ ಅವರು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆಯಾಗಿದ್ದರಿಂದ, ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಆ ಸ್ಥಾನಕ್ಕೆ ಯುವ ಪ್ರತಿಭೆ ಆಲ್‌ರೌಂಡರ್‌ ಧೀರಜ್‌ ಗೌಡ ಆಯ್ಕೆಯಾಗಿದ್ದಾರೆ. ಎಡಗೈ ಸ್ಪಿನ್ ಬೌಲಿಂಗ್ ಮಾಡುವ ಧೀರಜ್‌, ಕೂಚ್‌ ಬಿಹಾರ್‌ ಟ್ರೋಫಿಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಕರ್ನಾಟಕ ತಂಡಕ್ಕೆ ನಾಯಕರಾಗಿದ್ದರು.

ಬ್ಯಾಟಿಂಗ್‌ನಲ್ಲಿ ಮಯಂಕ್ ಅಗರವಾಲ್‌, ಮನೀಷ್ ಪಾಂಡೆ ಉತ್ತಮ ಲಯದಲ್ಲಿದ್ದಾರೆ. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದ ಆರ್‌.ಸಮರ್ಥ್‌, ಹಾರ್ದಿಕ್ ರಾಜ್‌ಗೆ ಇನ್ನೊಂದು ಅವಕಾಶ ಸಿಗುವ ನಿರೀಕ್ಷೆ ಇದೆ. ಉಪನಾಯಕ ನಿಕಿನ್‌ ಜೋಸ್ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡಬೇಕಿದೆ. ವೈಶಾಖ ವಿಜಯಕುಮಾರ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ ಅವರನ್ನೊಳಗೊಂಡ ವೇಗದ ಬೌಲಿಂಗ್ ಪಡೆ ಪ್ರಬಲವಾಗಿದೆ. ಆಫ್ ಸ್ಪಿನ್ನರ್ ಕೆ.ಶಶಿಕುಮಾರ್ ಸ್ಪಿನ್‌ ವಿಭಾಗದ ಹೊಣೆ ನಿರ್ವಹಿಸಲಿದ್ದಾರೆ.

ಚಂಡೀಗಢ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ತ್ರಿಪುರ ಎದುರಿನ ಪಂದ್ಯದಲ್ಲಿ ನಾಯಕ ಮನನ್‌ ವೋಹ್ರಾ ಮತ್ತು ಅರ್ಸ್ಲಾನ್‌ ಖಾನ್‌ ಅವರ ಅಮೋಘ ಶತಕಗಳ ಬಲದಿಂದ ಡ್ರಾ ಸಾಧಿಸಿತ್ತು. ಅಂಕಿತ್ ಕೌಶಿಕ್, ಶಿವಂ ಭಾಂಬ್ರಿ, ಆಲ್‌ರೌಂಡರ್ ಗುರಿಂದರ್‌ ಸಿಂಗ್‌ ಉತ್ತಮ ಲಯದಲ್ಲಿದ್ದಾರೆ.

ಎರಡೂ ತಂಡಗಳು ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಗುರುವಾರ ಕಠಿಣ ಅಭ್ಯಾಸ ನಡೆಸಿದವು.

ಕರ್ನಟಕ ತಂಡದ ಮನೀಷ್ ಪಾಂಡೆ ಬ್ಯಾಟಿಂಗ್ ಅಭ್ಯಾಸ ಮಾಡಿದರು
-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಕರ್ನಟಕ ತಂಡದ ಮನೀಷ್ ಪಾಂಡೆ ಬ್ಯಾಟಿಂಗ್ ಅಭ್ಯಾಸ ಮಾಡಿದರು -ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಆಟಗಾರರು ಗುರುವಾರ ಫುಟ್‌ಬಾಲ್ ಆಡಿದರು-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ
ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ ತಂಡದ ಆಟಗಾರರು ಗುರುವಾರ ಫುಟ್‌ಬಾಲ್ ಆಡಿದರು-ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT