ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ರಸ್ತೆ ಉಬ್ಬು ತೆರವುಗೊಳಿಸಿ- ಜಿಲ್ಲಾಧಿಕಾರಿ ಸೂಚನೆ

ರಸ್ತೆ ಸುರಕ್ಷತಾ ಸಮಿತಿ ಸಭೆ
Last Updated 15 ಜನವರಿ 2022, 8:37 IST
ಅಕ್ಷರ ಗಾತ್ರ

ಧಾರವಾಡ: ‘ಅವಳಿನಗರದಲ್ಲಿ ಅಪಾಯಕಾರಿಯಾಗಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ಸರಿಪಡಿಸಿ, ಪ್ರತಿಫಲಕಗಳನ್ನು ಅಳವಡಿಸಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಸೂಚಿಸಿದ್ದಾರೆ.

ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಶುಕ್ರವಾರ ನಡೆಸಿ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶುಕ್ರವಾರ ಚರ್ಚಿಸಿದರು.

‘ಧಾರವಾಡದಿಂದ ಅಮ್ಮಿನಭಾವಿ ಹಾಗೂ ಸವದತ್ತಿ ಮಾರ್ಗದಲ್ಲಿರುವ ಉಬ್ಬುಗಳು ಅವೈಜ್ಞಾನಿಕವಾಗಿದ್ದು, ಅವುಗಳನ್ನು ವಾರದೊಳಗೆ ತೆರವುಗೊಳಿಸಬೇಕು. ರಸ್ತೆ ಸುರಕ್ಷತಾ ನಿಧಿಯಲ್ಲಿ ಬಾಕಿ ಉಳಿದಿರುವ ಅನುದಾನವನ್ನು ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಉಬ್ಬುಗಳಿಗೆ ಪ್ರತಿಫಲಕ ಅಳವಡಿಸಲು ಬಳಸಬೇಕು. ಪಾಲಿಕೆ ಅನುದಾನವನ್ನೂ ಹೆಚ್ಚುವರಿಯಾಗಿ ಬಳಸಿಕೊಳ್ಳಬೇಕು’ ಎಂದು ನಿರ್ದೇಶಿಸಿದರು.

ನೈರುತ್ಯ ರೈಲ್ವೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲ್ಕೇಡೆ ಮಾತನಾಡಿ, ‘ರೈಲು ನಿಲ್ದಾಣದ ಸುತ್ತಮುತ್ತ ಹಾಗೂ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ಹೆಚ್ಚುತ್ತಿದೆ. ಅನಧಿಕೃತ ಅಂಗಡಿಗಳು ರಸ್ತೆಯನ್ನು ಅತಿಕ್ರಮಿಸಿರುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದನ್ನು ತೆರವುಗೊಳಿಸಬೇಕು’ ಎಂದು ಸಭೆಗೆಯ ಗಮನಕ್ಕೆ ತಂದರು. ಈ ಕುರಿತು ಕ್ರಮ ಜರುಗಿಸಲು ಪಾಲಿಕೆ ಮತ್ತು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ 2021ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ರವರೆಗೆ ವಿವಿಧ ವರ್ಗದ ಸಾರಿಗೆ ವಾಹನಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ನೀಡಲಾದ ರಹದಾರಿಗಳಿಗೆ ಘಟನೋತ್ತರ ಅನುಮೋದನೆಯನ್ನು ನೀಡಲಾಯಿತು. ವಿಆರ್‌ಎಲ್ ಸಮೂಹ ಸಂಸ್ಥೆಯ ಕ್ಯಾರೇಜ್ ಬೈ ರೋಡ್ ಕಾಯ್ದೆಯಡಿ, ಪರವಾನಗಿ ನವೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಗೆ ಮುಂದಿನ ಅವಧಿಗೆ ನವೀಕರಿಸಲು ಅನುಮೋದನೆ ನೀಡಲಾಯಿತು.

ಪಿಂಕ್ ಆಟೋರಿಕ್ಷಾ ಪರಿಕಲ್ಪನೆಯಡಿ ಮಹಿಳಾ ಆಟೊ ಚಾಲಕರಿಗೆ ಉತ್ತೇಜನ ನೀಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿದ ಪ್ರಾಧಿಕಾರ, ಪರವಾನಗಿ ಮಂಜೂರಾತಿಗೆ ಅನುಮೋದನೆ ನೀಡಿತು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಬಿ. ಶಂಕರಪ್ಪ, ಕೆ. ದಾಮೋದರ, ಲೋಕೋಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಚೌಡಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT